ಮನೆ ಕಾನೂನು ಚರಂಡಿಯಲ್ಲಿ ಮುಳುಗಿ ಮಗು ಸಾವು: ಪರಿಹಾರಕ್ಕಾಗಿ ಸತಾಯಿಸುತ್ತಿದ್ದ ಸರ್ಕಾರಕ್ಕೆ ₹1 ಲಕ್ಷ ದಂಡ ವಿಧಿಸಿದ ಹೈಕೋರ್ಟ್‌

ಚರಂಡಿಯಲ್ಲಿ ಮುಳುಗಿ ಮಗು ಸಾವು: ಪರಿಹಾರಕ್ಕಾಗಿ ಸತಾಯಿಸುತ್ತಿದ್ದ ಸರ್ಕಾರಕ್ಕೆ ₹1 ಲಕ್ಷ ದಂಡ ವಿಧಿಸಿದ ಹೈಕೋರ್ಟ್‌

0

ಹತ್ತು ವರ್ಷಗಳ ಹಿಂದೆ ಬಳ್ಳಾರಿಯಲ್ಲಿ ತೆರೆದ ಚರಂಡಿಯಲ್ಲಿ ಮುಳುಗಿ ಸಾವನ್ನಪ್ಪಿದ್ದ ಆರು ವರ್ಷದ ಬಾಲಕನ ತಂದೆಗೆ ₹5 ಲಕ್ಷ ಪರಿಹಾರಕ್ಕಾಗಿ ಕಚೇರಿಯಿಂದ ಕಚೇರಿಗೆ ಅಲೆದಾಡಿಸುತ್ತಿರುವ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠ ಈಚೆಗೆ ಒಂದು ಲಕ್ಷ ರೂಪಾಯಿ ದಂಡ ವಿಧಿಸಿದೆ. ದಂಡದ ಮೊತ್ತವನ್ನೂ ಅರ್ಜಿದಾರರಿಗೆ ಪಾವತಿಸುವಂತೆ ನಿರ್ದೇಶಿಸಿದೆ.

ಪರಿಹಾರ ಧನ ಹೆಚ್ಚಳದ ಮನವಿ ಪರಿಗಣಿಸಲು ವಿಳಂಬ ಮಾಡುತ್ತಿರುವ ಬಗ್ಗೆ ಕರಣ್ ಸಿಂಗ್ ಎಸ್. ರಾಜಪುರೋಹಿತ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕ ಸದಸ್ಯಪೀಠ ಪುರಸ್ಕರಿಸಿದೆ.

 “2013ರಿಂದ ಅರ್ಜಿದಾರರು ಮೂರನೇ ಬಾರಿಗೆ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ವಿಪತ್ತು ನಿರ್ವಹಣಾ ಕಾಯಿದೆಯಡಿ ಅವರಿಗೆ ನಿಗದಿಯಂತೆ ₹5 ಲಕ್ಷ ರೂಪಾಯಿ ಪರಿಹಾರವನ್ನು 2013ರ ಅಕ್ಟೋಬರ್‌ 15ರಿಂದ ಅನ್ವಯವಾಗುವಂತೆ ವಾರ್ಷಿಕ ಶೇ.6ರಷ್ಟು ಬಡ್ಡಿ ಸಹಿತ ಆರು ವಾರಗಳಲ್ಲಿ ಪಾವತಿಸಬೇಕು” ಎಂದು ನ್ಯಾಯಾಲಯ ಆದೇಶಿಸಿದೆ.

 “ಆರು ವಾರಗಳಲ್ಲಿ ಮೃತ ಬಾಲಕನ ತಂದೆ ರಾಜಪುರೋಹಿತ್ ಅವರಿಗೆ ಪರಿಹಾರ ಧನ ತಲುಪದಿದ್ದರೆ ಶೇ.12ರಷ್ಟು ಬಡ್ಡಿ ನೀಡಬೇಕು ಎಂದು ನ್ಯಾಯಾಲಯ ಹೇಳಿದೆ. ಒಂದು ವೇಳೆ ರಾಜಪುರೋಹಿತ್‌ಗೆ ಪರಿಹಾರ ಧನ ತಲುಪಿಸುವುದು ವಿಳಂಬ ಮಾಡಿದರೆ ದಂಡದ ಮೊತ್ತ ₹1 ಲಕ್ಷ ಗಳಿರುವುದು ಪ್ರತಿ ತಿಂಗಳಿಗೆ ₹50 ಸಾವಿರಗಳಷ್ಟು ಹೆಚ್ಚಿಸಲಾಗುವುದು ಎಂದು ನ್ಯಾಯಾಲಯ ಎಚ್ಚರಿಕೆ ನೀಡಿದೆ. ಅನಗತ್ಯ ವಿಳಂಬ ಮಾಡಿರುವ ತಪ್ಪಿತಸ್ಥ ಸಿಬ್ಬಂದಿಯಿಂದ ಬಡ್ಡಿ ಮತ್ತು ದಂಡದ ಮೊತ್ತವನ್ನು ವಸೂಲು ಮಾಡಲು ರಾಜ್ಯ ಸರ್ಕಾರ ಮುಕ್ತವಾಗಿದೆ” ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

 “ಮಗ ಅಥವಾ ಮಗಳ ಹಠಾತ್ ಸಾವು ಪೋಷಕರಿಗೆ ಭೀಕರ ಹೊಡೆತ ಎಂಬುದನ್ನು ಮರೆಯಲಾಗದು. ಮಗುವನ್ನು ಕಳೆದುಕೊಂಡು ಅರ್ಜಿದಾರರು ಜೀವನದ ಅತ್ಯಂತ ನೋವಿನ ಕ್ಷಣಗಳಲ್ಲಿರುವಾಗ ಅವರಿಗೆ ಮತ್ತೆ ನೋವು ನೀಡುವುದು, ಅವರನ್ನು ಸರ್ಕಾರಿ ಕಚೇರಿಯಿಂದ ಕಚೇಗೆ ಅಲೆದಾಡಿಸುವುದು ಸರಿಯೇ” ಎಂದು ನ್ಯಾಯಾಲಯ ಬೇಸರ ವ್ಯಕ್ತಪಡಿಸಿದೆ.

“ಮಗುವಿನ ಹಠಾತ್ ನಿರ್ಗಮನದಿಂದ ಉಳಿದಿರುವ ಭಾವನಾತ್ಮಕ ನಿರ್ವಾತವನ್ನು ಪರಿಹಾರ ಧನದಿಂದ ತುಂಬಲು ಸಾಧ್ಯವಿಲ್ಲ. ಆದರೆ ಇನ್ನೂ, ಮಗುವಿನೊಂದಿಗೆ ಇದ್ದ ಬಾಂಧವ್ಯದ ಕಾರಣಕ್ಕೆ ಪೋಷಕರಿಗೆ ವಿತ್ತೀಯ ಪರಿಹಾರವನ್ನು ನೀಡಲಾಗುತ್ತದೆ. ಆದ್ದರಿಂದ, ಇಂತಹ ಘಟನೆಗಳು ಮರುಕಳಿಸದಂತೆ ರಾಜ್ಯ ಸರ್ಕಾರವು ಎಚ್ಚರಿಕೆ ವಹಿಸಬೇಕು. ನಾಗರಿಕರ ಹಿತಾಸಕ್ತಿ ಕಾಪಾಡುವುದು ಮತ್ತು ಅವರನ್ನು ಸುರಕ್ಷಿತವಾಗಿಡುವುದು ಸರ್ಕಾರದ ಆದ್ಯ ಕರ್ತವ್ಯವಾಗಬೇಕು” ಎಂದು ಪೀಠ ಅಭಿಪ್ರಾಯಪಟ್ಟಿದೆ.

ಪ್ರಕರಣದ ಹಿನ್ನೆಲೆ: 2013ರ ಜುಲೈ 15ರಂದು ಭಾರಿ ಮಳೆ ಬಿದ್ದ ವೇಳೆ ರಿತೇಶ್ ಸಿಂಗ್ ತೆರೆದ ಚರಂಡಿಯಲ್ಲಿ ಬಿದ್ದು ಕೊಚ್ಚಿ ಹೋಗಿ ಸಾವನ್ನಪ್ಪಿದ್ದನು. ಅವರ ತಂದೆ ಕರಣ್ ಸಿಂಗ್ ಎಸ್. ರಾಜಪುರೋಹಿತ್ ಖಾಸಗಿ ಕಂಪೆನಿಯಲ್ಲಿ ಸೇಲ್ಸ್‌ಮನ್ ಆಗಿದ್ದರು. ಬಳ್ಳಾರಿ ನಗರಪಾಲಿಕೆಗೆ ಅವರು ವಿರುದ್ಧ ದೂರು ನೀಡಿದ್ದರು.

ಆನಂತರ ಸ್ಥಳೀಯ ಸಂಸ್ಥೆಯ ಅಧಿಕಾರಿಗಳು ವಿಪತ್ತು ನಿರ್ವಹಣಾ ಕಾಯಿದೆಯಡಿ ₹5 ಲಕ್ಷ ಮಾತ್ರ ಪರಿಹಾರ ನೀಡಲಾಗುವುದು ಎಂದು ಹೇಳಿದ್ದರು. ಆದರೆ, ಅರ್ಜಿದಾರರು ಹೆಚ್ಚಿನ ಪರಿಹಾರ ಕೋರಿ ಮನವಿ ಸಲ್ಲಿಸಿದ್ದರು. ಆದರೆ ಆ ಮನವಿಯನ್ನು ಸ್ಥಳೀಯ ಸಂಸ್ಥೆ ಅಧಿಕಾರಿಗಳು ಪರಿಗಣಿಸಿರಲಿಲ್ಲ. ಹೀಗಾಗಿ, ಅವರು ಎರಡು ಬಾರಿ ಹೈಕೋರ್ಟ್ ಮೊರೆ ಹೋಗಿದ್ದರು. ಆಗ ಹೈಕೋರ್ಟ್ ಹೆಚ್ಚಿನ ಪರಿಹಾರ ಕೋರಿ ರಾಜಪುರೋಹಿತ್ ಸಲ್ಲಿಸಿರುವ ಮನವಿಯನ್ನು ಪರಿಗಣಿಸುವಂತೆ ನಿರ್ದೇಶನ ನೀಡಿತ್ತು. ಆದರೂ ಅವರ ಮನವಿ ಪರಿಗಣಿಸದೆ ಸರ್ಕಾರ ಮತ್ತು ಸ್ಥಳೀಯ ಆಡಳಿತ ನಿರ್ಲಕ್ಷ್ಯ ಮತ್ತು ತಾತ್ಸಾರ ಧೋರಣೆ ತಳೆದಿತ್ತು. ಹೀಗಾಗಿ ಅವರು ಮತ್ತೆ ಹೈಕೋರ್ಟ್ ಮೊರೆ ಹೋಗಿದ್ದರು.