ಮನೆ ರಾಜ್ಯ ಪಿಎಸ್ ಐ ಮರು ಪರೀಕ್ಷೆಗೆ ಹೈಕೋರ್ಟ್ ಆದೇಶ: ಆದೇಶ ಪ್ರತಿ ಕೈ ಸೇರಿದ ಬಳಿಕ ಮುಂದಿನ...

ಪಿಎಸ್ ಐ ಮರು ಪರೀಕ್ಷೆಗೆ ಹೈಕೋರ್ಟ್ ಆದೇಶ: ಆದೇಶ ಪ್ರತಿ ಕೈ ಸೇರಿದ ಬಳಿಕ ಮುಂದಿನ ಕ್ರಮ- ಡಾ.ಜಿ.ಪರಮೇಶ್ವರ್  

0

ಬೆಂಗಳೂರು: ಪೊಲೀಸ್​ ಸಬ್​ ಇನ್ಸಪೆಕ್ಟರ್​ ಮರು ಪರೀಕ್ಷೆ ನಡೆಸುವಂತೆ ಹೈಕೋರ್ಟ್ ​ನ ಆದೇಶದ ಸಂಪೂರ್ಣ ಪ್ರತಿಯನ್ನು ನಾನು ನೋಡಿಲ್ಲ. ನಮ್ಮ ಅಡ್ವೊಕೇಟ್ ಜನರಲ್ ಜೊತೆ ಫೋನ್​ ನಲ್ಲಿ‌ ಮಾತಾಡಿದ್ದೇನೆ. ಸ್ವತಂತ್ರ ಸಂಸ್ಥೆಯಿಂದ ಬೇಗ ಪರೀಕ್ಷೆ ನಡೆಸಲು ಕೋರ್ಟ್ ಹೇಳಿದೆ. ಮುಂದಿನ ಸೋಮವಾರ ಅಥವಾ ಮಂಗಳವಾರ ಆದೇಶ ಪ್ರತಿ ಕೈ ಸೇರಲಿದೆ. ತದನಂತರ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್  ಹೇಳಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಸ್​ ಐ ಪರೀಕ್ಷಾರ್ಥಿಗಳು ಓದಲು ಸಮಯ ಕೊಡಿ ಅಂತಿದ್ದಾರೆ. ಅದನ್ನು ಪರಿಗಣಿಸುತ್ತೇವೆ  ಎಂದು ಹೇಳಿದರು.

ನೇಮಕಾತಿ ಬಳಿಕ ಅವರಿಗೆ ತರಬೇತಿ‌ ನೀಡಲು 1 ವರ್ಷ ಆಗಲಿದೆ. ರೂಲ್ 32ರಲ್ಲಿ 500 ರಿಂದ 600 ಎಎಸ್ ​ಐಗಳಿಗೆ ಬಡ್ತಿ ನೀಡಿದ್ದೇವೆ. 545 ಹುದ್ದೆಗಳ ಜೊತೆಗೆ ಇನ್ನೂ 400 ಪಿಎಸ್​ಐ ಹುದ್ದೆಗಳು ಖಾಲಿಯಿವೆ. ಎರಡನ್ನೂ ಒಟ್ಟಿಗೆ ಮಾಡಬೇಕಾ ಅಥವಾ ಪ್ರತ್ಯೇಕವಾಗಿ ನಡೆಸಬೇಕೆಂದು ಚರ್ಚೆ ನಡೆಸುತ್ತಿದ್ದೇವೆ. ಇಲಾಖೆಯಗೆ ಒಳ್ಳೆಯದಾಗಿದೆ ಎಂದು ಹೇಳಿದರು.

545 ಪಿಎಸ್‌ಐಗಳ ನೇಮಕಾತಿಗಾಗಿ ಅಕ್ಟೋಬರ್ 3, 2021 ರಂದು 92 ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆ ಮಾಡಲಾಗಿತ್ತು. ಒಟ್ಟು 54,289 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಪರೀಕ್ಷೆ ಬರೆದ 52 ಅಭ್ಯರ್ಥಿಗಳು ಸೇರಿದಂತೆ ಹಗರಣಕ್ಕೆ ಸಂಬಂಧಿಸಿದಂತೆ 110 ಜನರನ್ನು ಬಂಧಿಸಲಾಗಿದೆ.

ಈ 52 ಅಭ್ಯರ್ಥಿಗಳು ಯಾವುದೇ ಪೊಲೀಸ್ ನೇಮಕಾತಿಯಲ್ಲಿ ಭಾಗವಹಿಸದಂತೆ ನಿರ್ಬಂಧಿಸಲಾಗಿದೆ. ಹಿರಿಯ ಐಪಿಎಸ್ ಅಧಿಕಾರಿ ಅಮೃತ್ ಪಾಲ್ ಅವರನ್ನು ಪರೀಕ್ಷೆಯಲ್ಲಿ ರಿಗ್ಲಿಂಗ್ ಮಾಡಿದ ಆರೋಪದ ಮೇಲೆ ಬಂಧಿಸಲಾಗಿತ್ತು. ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಭ್ರಷ್ಟಾಚಾರ ಪ್ರಕರಣದಲ್ಲಿ ಎಡಿಜಿಪಿ ಶ್ರೇಣಿಯ ಐಪಿಎಸ್ ಅಮೃತ್ ಪಾಲ್​ರನ್ನು ಬಂಧಿಸಿದ್ದರು. ಇದೀಗ ಎಡಿಜಿಪಿ ಅಮೃತ ಪಾಲ್​ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮ ನಡೆದ ಹಿನ್ನೆಲೆಯಲ್ಲಿ ನೇಮಕಾತಿ ಸಂಬಂಧದ ಅಧಿಸೂಚನೆಯನ್ನು ರದ್ದುಪಡಿಸಿ, ನೂತನವಾಗಿ ಪರೀಕ್ಷೆ ನಡೆಸಲು ಸರ್ಕಾರ ಮುಂದಾಗಿತ್ತು. ಇದನ್ನು ಪ್ರಶ್ನಿಸಿ ಆರೋಪ ರಹಿತ ಹಲವು ಅಭ್ಯರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಹೈರ್ಕೋಟ್​ ಅಭ್ಯರ್ಥಿಗಳ ಅರ್ಜಿಯನ್ನು ವಜಾಗೊಳಿಸಿ, ಮರು ಪರೀಕ್ಷೆ ನಡೆಸುವಂತೆ ಆದೇಶಿಸಿದೆ. ಅಲ್ಲದೆ ಸ್ವತಂತ್ರ ಸಂಸ್ಥೆಯಿಂದ ಪರೀಕ್ಷೆ ನಡೆಸಲು ಹೈಕೋರ್ಟ್ ಸೂಚನೆ ನೀಡಿದೆ.