ಮನೆ ಯೋಗಾಸನ ಪಾದಾಂಗುಷ್ಟಾಸನ

ಪಾದಾಂಗುಷ್ಟಾಸನ

0

ʼಪಾದʼವೆಂದರೆ ಹೆಜ್ಜೆ ʼಅಂಗಷ್ಟʼವೆಂದರೆ ಕಾಲ ಹೆಬ್ಬೆರಳುಗಳು. ಈ ಆಸನದ ಭಂಗಿಯಲ್ಲಿ ಎದ್ದು ನಿಂತು, ಹೆಬ್ಬೆರಳನ್ನು ಹಿಡಿದಿರಬೇಕಾದುದರಿಂದ ಈ ಆಸನಕ್ಕೆ ಈ ಹೆಸರು ಬಂದಿದೆ.

ಅಭ್ಯಾಸ ಕ್ರಮ :-

೧.  ಮೊದಲು ತಡಾಸನದಲ್ಲಿ ನಿಂತು, ಕಾಳುಗಳನ್ನ ಒಂದಡಿ ಅಂತರ ಇರುವಂತೆ ಅಗಲಿಸಬೇಕು.

೨. ಉಸಿರನ್ನು ಹೊರಕ್ಕೆ ಬಿಟ್ಟು ಮುಂದಕ್ಕೆ ಬಗ್ಗಿ ಕಾಲುಗಳ ಹೆಬ್ಬೆರಳುಗಳನ್ನ ಕೈಹೆಬ್ಬೆರಳು ಮತ್ತು ಮೊದಲೆರಡು ಬೆರಳುಗಳಿಂದ ಬಲವಾಗಿ ಹಿಡಿದು ಅಂಗೈಗಳೆರಡನ್ನು ಎದುರಿಸಬೇಕು.

೩. ತಲೆಯನ್ನ ಮೇಲೆತ್ತಿ ಹೊಟ್ಟೆಯನ್ನು ಪ್ರಯತ್ನ ಪೂರಕವಾಗಿ ಎದೆಯ ಕಡೆಗೆ ಸೆಳೆದು ಬೆನ್ನಿನ ಭಾಗವನ್ನು ಆದಷ್ಟು ನಿಮ್ನವಾಗಿರಿಸ (ಒಳತಗ್ಗಿಸ)ಬೇಕು. ಬೆನ್ನುಹುರಿಯ ತಳಭಾಗದಿಂದ ಹಿಡಿದು ಬೆನ್ನಿನಲ್ಲಿ ಈ ನಿಮ್ನತೆಯನ್ನುಂಟುಮಾಡಲು ಹೆಗಲುಗಳಿಂದ ಕೆಳಕ್ಕೆ ಜಗ್ಗುವುದಕ್ಕೆ ಪ್ರತಿಯಾಗಿ ವಸಿಕುಹರ ಪ್ರದೇಶದಿಂದ(Pelvic region)ದಿಂದ ಮುಂದಕ್ಕೆ ಭಾಗಬೇಕು.

೪. ಮಂಡಿಗಳಲ್ಲಿ ಕಾಲ್ಬೆರಳುಗಳಲ್ಲಿ ಬಿಗಿಯನ್ನು ಸಡಿಲಿಸಿದಂತೆ ಕಾಲುಗಳನ್ನು ಬಿಗಿಗೊಳಿಸಿಡಬೇಕು. ಬಳಿಕ ಹೆಗಲೆಲುಬುಗಳನ್ನ ಕೂಡ ಹಿಗ್ಗಿಸುತ್ತ, ಆ ಸ್ಥಿತಿಯಲ್ಲಿ ಒಂದೆರಡು ಸಲ ಶ್ವಾಸೋಚ್ಚಾಸಕ್ರಮವನ್ನು ನಡೆಸಬೇಕು.

೫. ಈಗ ಉಸಿರನ್ನು ಹೊರಕ್ಕೆ ಬಿಟ್ಟು, ತಲೆಯನ್ನು ಎರಡು ಮಂಡಿಗಳ ನಡುವೆ ತಂದಿರಿಸಿ, ಮಂಡಿಗಳನ್ನ ಬಿಗಿಗೊಳಿಸಬೇಕು ಮತ್ತು ನೆಲದಲ್ಲೂರಿಟ್ಟ ಕಾಲ್ ಬೆರಳುಗಳನ್ನು ಸ್ವಲ್ಪವೂ ಮೇಲೆತ್ತದೆ, ಅವುಗಳನ್ನು ಎಳೆದಿಡಬೇಕು. ಸಾಮಾನ್ಯ ಉಸಿರಾಟ ನಡೆಸುತ್ತಾ, ಈ ಭಂಗಿಯಲ್ಲಿ ಸುಮಾರು 20 ಸೆಕೆಂಡುಗಳ ಕಾಲ ನಿಲ್ಲಬೇಕು.

೬. ಬಳಿಕ ಉಸಿರನ್ನು ಒಳಕ್ಕೆಳದು ೨ನೇ ಸ್ಥಿತಿಗೆ ಬಂದು ಕಾಲ್ಬೆರಳುಗಳನ್ನು ಸಡಿಲಿಸಿ ನಿಲ್ಲಬೇಕು. ಮತ್ತೆ ತಡಾಸನಕ್ಕೆ ಹಿಂದುರುಗಬೇಕು.