ಮನೆ ರಾಜಕೀಯ ಶಾಸಕರನ್ನು ಪ್ರಶ್ನಿಸುವ ಸಾಮರ್ಥ್ಯ ಕೆಪಿಸಿಸಿ ಅಧ್ಯಕ್ಷರಿಗಿಲ್ಲವೇ? : ಬಿಜೆಪಿ ಪ್ರಶ್ನೆ

ಶಾಸಕರನ್ನು ಪ್ರಶ್ನಿಸುವ ಸಾಮರ್ಥ್ಯ ಕೆಪಿಸಿಸಿ ಅಧ್ಯಕ್ಷರಿಗಿಲ್ಲವೇ? : ಬಿಜೆಪಿ ಪ್ರಶ್ನೆ

0

ಬೆಂಗಳೂರು (Bengaluru)- ಕಾಂಗ್ರೆಸ್‌ ಶಾಸಕರೊಬ್ಬರನ್ನು ಪ್ರಶ್ನಿಸುವಷ್ಟೂ ಸಾಮರ್ಥ್ಯ ಕೆಪಿಸಿಸಿ ಅಧ್ಯಕ್ಷರಿಗೆ ಇಲ್ಲವೇ? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ (D.K.Shivakumar) ಅವರನ್ನು ಬಿಜೆಪಿ ಪ್ರಶ್ನಿಸಿದೆ.

ಹುಬ್ಬಳ್ಳಿ ಗಲಭೆ ಪ್ರಕರಣದ ಆರೋಪಿಗಳ ಕುಟುಂಬಕ್ಕೆ ಫುಡ್ ಕಿಟ್ ಹಾಗೂ ಧನ ಸಹಾಯ ಮಾಡಲು ಮುಂದಾಗಿದ್ದ ಜಮೀರ್ ಅಹ್ಮದ್ ಖಾನ್ ನಡೆ ವಿವಾದಕ್ಕೆ ಕಾರಣವಾಗಿತ್ತು. ಆದರೆ ಈ ಸಂಬಂಧ ನಂತರ ಅವರು ಸ್ಪಷ್ಟನೆಯನ್ನೂ ನೀಡಿದ್ದರು. ಈ ಸಂಬಂಧ ಟ್ವೀಟ್‌ ಮಾಡಿದ್ದ ಡಿ.ಕೆ.ಶಿವಕುಮಾರ್‌ ಪಕ್ಷಕ್ಕೂ ಇದಕ್ಕೂ ಸಂಬಂಧವಿಲ್ಲ ಎಂದಿದ್ದರು.

ಇದಕ್ಕೆ ಪ್ರತಿಕ್ರಿಯಿಸಿ ಸರಣಿ ಟ್ವೀಟ್‌ ಮಾಡಿರುವ ಬಿಜೆಪಿ, ಕೆಪಿಸಿಸಿ #ಭ್ರಷ್ಟಾಧ್ಯಕ್ಷ ಡಿಕೆಶಿ ಅವರೇ, ಅವರಿಗೂ ನಮಗೂ ಸಂಬಂಧವಿಲ್ಲ ಎಂಬ ಸೋಗಲಾಡಿತನ ಬಿಡಿ. ಫುಡ್ ಕಿಟ್ ಹಂಚಲು ತಯಾರಾಗಿದ್ದ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಅವರಿಗೂ ನಿಮ್ಮ ಪಕ್ಷಕ್ಕೂ ಸಂಬಂಧ ಇದೆಯೋ, ಇಲ್ಲವೋ ಎಂಬುದನ್ನು ಮೊದಲು ಸ್ಪಷ್ಟಪಡಿಸಿ. ಈ ರೀತಿ ತಿಪ್ಪೆಸಾರಿಸುವ ಬದಲು ಸತ್ಯ ಒಪ್ಪಿಕೊಳ್ಳಿ ಎಂದಿದೆ.

ಹುಬ್ಬಳ್ಳಿ ಗಲಭೆಯ ಆರೋಪಿಗಳಿಗೆ ಆರ್ಥಿಕ ಮತ್ತು ಆಹಾರ ಕಿಟ್ ಒದಗಿಸಲು ಹೊರಟ ಕಾಂಗ್ರೆಸ್‌ ಶಾಸಕರೊಬ್ಬರನ್ನು ಪ್ರಶ್ನಿಸುವಷ್ಟೂ ಸಾಮರ್ಥ್ಯ ಕೆಪಿಸಿಸಿ ಅಧ್ಯಕ್ಷರಿಗೆ ಇಲ್ಲವೇ?ಜಮೀರ್ ಅವರಿಗೆ ನೋಟಿಸ್ ನೀಡಿದರೆ ಸಿದ್ದರಾಮಯ್ಯ ಬಣದಿಂದ ಆಕ್ರೋಶ ವ್ಯಕ್ತವಾಗುವ ಭಯ ಡಿಕೆಶಿ ಅವರನ್ನು ಕಾಡುತ್ತಿದೆಯೇ? ಎಂದು ಪ್ರಶ್ನಿಸಿದೆ.

ಡಿಕೆಶಿ ಅವರೇ, ನಿಮ್ಮ ಸದಾರಮೆ ನಾಟಕವನ್ನು ನಿಲ್ಲಿಸಿ. ಹಿಜಾಬ್‌ಗೂ ಕಾಂಗ್ರೆಸ್ ಪಕ್ಷಕ್ಕೂ ಸಂಬಂಧವಿಲ್ಲ ಎನ್ನುತ್ತಲೇ ಕಾನೂನು ಹೋರಾಟಕ್ಕೆ ನೇರವಾಗಿ ಸಹಕರಿಸಿದಿರಿ. ಹರ್ಷ ಕೊಲೆಯಾದಾಗ ಅಂತರ ಕಾಯ್ದುಕೊಂಡ ನೀವು ಈಗ ಹುಬ್ಬಳ್ಳಿ ಗಲಭೆಕೋರರಿಗೆ ಆರ್ಥಿಕ ಸಹಾಯ ನೀಡಲು ಹೊರಟಿದ್ದೀರಿ. ಏನಿದೆಲ್ಲ? ಪ್ರಶ್ನೆಗಳ ಸುರಿಮಳೆಗೈದಿದೆ.

ಅಧಿಕಾರದಲ್ಲಿದ್ದಾಗ ಸಮಾಜ ಘಾತುಕ ಪಿಎಫ್‌ಐ, ಎಸ್‌ಡಿಪಿಐ ಕಾರ್ಯಕರ್ತರ ಮೇಲಿನ ಪ್ರಕರಣಗಳನ್ನು ಖುಲಾಸೆ ಮಾಡಿದಿರಿ. ಕಾಂಗ್ರೆಸ್‌ ಪಕ್ಷದ ಕೃಪಾಶೀರ್ವಾದದಿಂದ ಬೆಳೆದ ಅದೇ ಮತಾಂಧರು ಸಮಾಜ ಘಾತುಕ ಚಟುವಟಿಕೆಗಳಲ್ಲಿ ಈಗ ತೊಡಗಿಸಿಕೊಂಡಿದ್ದಾರೆ.ನೀವೇ ಬೆಳೆಸಿದ ಸಂಘಟನೆಗಳನ್ನು ಈಗ ನಿಷೇಧಿಸಿ ಎನ್ನುವುದಕ್ಕೆ ಅರ್ಥವಿದೆಯೇ? ಎಂದು ತರಾಟೆಗೆ ತೆಗೆದುಕೊಂಡಿದೆ.

ಪಕ್ಷ ಮುನ್ನಡೆಸುವುದಕ್ಕೂ ಸಾಮರ್ಥ್ಯ ಬೇಕು. ಪದೇ ಪದೇ ನಿಮ್ಮ ನಿರ್ದೇಶನಗಳನ್ನು ಉಲ್ಲಂಘಿಸುವ ಸಿದ್ದರಾಮಯ್ಯ ಬಣದ ವಿರುದ್ಧ ಕ್ರಮ ತೆಗೆದುಕೊಳ್ಳುವುದಕ್ಕೆ ಅಂಜುವ ನೀವು ಅಸಹಾಯಕ ಅಧ್ಯಕ್ಷ ರೇ? ಡಿಕೆಶಿ ನೋಟು, ಸಿದ್ದರಾಮಯ್ಯ ಸೂಟು!!! ಸಿದ್ದರಾಮಯ್ಯ ರಾಜಕೀಯ ಹೊಡೆತ ತಾಳಲಾರದೇ ಅಸಹಾಯಕ ಅಧ್ಯಕ್ಷ ಡಿಕೆಶಿ ಸ್ವಾಸ್ಥ್ಯ ಕಳೆದುಕೊಂಡಿದ್ದಾರೆಯೇ? ಡಿಕೆಶಿ ಅವರೇ, ಹುಬ್ಬಳ್ಳಿ ಗಲಭೆಕೋರರಿಗೆ ಫುಡ್ ಕಿಟ್ ಹಂಚಲು ಹೋದ ಜಮೀರ್ ಅವರಿಗೆ ನೊಟೀಸ್‌ ನೀಡುವುದು ಬಿಟ್ಟು ಅಂತರ ಕಾಯ್ದುಕೊಂಡಿದ್ದೇಕೆ ? ಎಂದು ಪ್ರಶ್ನೆ ಮಾಡಿದೆ.