ಮನೆ ರಾಜಕೀಯ ಬ್ಲ್ಯಾಕ್ ಮೇಲ್ ತಂತ್ರದಿಂದ ರಾಜ್ಯಾಧ್ಯಕ್ಷರ ನೇಮಕ: ಬಸನಗೌಡ ಪಾಟೀಲ್ ಯತ್ನಾಳ್ ಕಿಡಿ

ಬ್ಲ್ಯಾಕ್ ಮೇಲ್ ತಂತ್ರದಿಂದ ರಾಜ್ಯಾಧ್ಯಕ್ಷರ ನೇಮಕ: ಬಸನಗೌಡ ಪಾಟೀಲ್ ಯತ್ನಾಳ್ ಕಿಡಿ

0

ಬೆಂಗಳೂರು: ಬ್ಲ್ಯಾಕ್ ಮೇಲ್ ತಂತ್ರದಿಂದ ರಾಜ್ಯಾಧ್ಯಕ್ಷರ ನೇಮಕವಾಗಿದೆ. ಬಿಜೆಪಿ ಯಾವುದೋ ಒಂದು ಕುಟುಂಬದ ಪಕ್ಷವಲ್ಲ. ಇದನ್ನು ನಾವು ಕೂಡ ಒಪ್ಪುವುದಿಲ್ಲ ಎಂದು ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,. ಬಿಜೆಪಿಗಾಗಿ, ನರೇಂದ್ರ ಮೋದಿಯವರನ್ನು ಪ್ರಧಾನಿ ಮಾಡಲು ನಾನು ಪ್ರಾಣ ಕೊಡಲೂ ತಯಾರಾಗಿದ್ದೇನೆ. ಆದರೆ ಕೆಲ ಚೇಲಾಗಳ ಮಾತು ಕೇಳಿ ವರಿಷ್ಠರು ನಿರ್ಧಾರ ತೆಗೆದುಕೊಳ್ಳಬಾರದು. ಇವರ ತರ ನಾನು ಥರ್ಢ್ ಕ್ಲಾಸ್ ಇಲ್ಲ. ಅಧ್ಯಕ್ಷನಾಗಬೇಕು, ವಿರೋಧ ಪಕ್ಷದ ನಾಯಕನಾಗಬೇಕು ಎಂದು ನಾನು ಹಲ್ಕಾ ಕೆಲಸ ಮಾಡುವುದಿಲ್ಲ ಎಂದರು.

ನಿನ್ನ ಯಾರು ಬೆನ್ನು ಹತ್ತಿಲ್ಲ ಅಂದರೆ ನೀನೊಬ್ಬನೇ ಹೋಗು ಎಂದು ಅಟಲ್ ಬಿಹಾರಿ ವಾಜಪೇಯಿ ಹೇಳಿದ್ದರು.  ಅದಕ್ಕಾಗಿ ಸತ್ಯ ಹಿಡಿದು ನಾನೊಬ್ಬನೇ ಹೋಗಿದ್ದಕ್ಕೆ ಉತ್ತರ ಕರ್ನಾಟಕ ಭಾಗದವರಿಗೆ ಗೌರವ ಸಿಕ್ಕಿದೆ. ನಾನು ಇವರ ತರ ಹೊಂದಾಣಿಕೆಯಾಗಿದ್ದರೆ ಬೇಕಾದಷ್ಟು ದುಡ್ಡು ಮಾಡಿಕೊಳ್ಳಬಹುದಿತ್ತು. ಇಂತಹ ಸ್ಲಮ್ ನಲ್ಲಿ ನಾನು ವಾಸ ಮಾಡುತ್ತಿರುತ್ತಿರಲಿಲ್ಲ. ಇದನ್ನೆಲ್ಲಾ ನಾನು ವೀಕ್ಷಕರಿಗೆ ಹೇಳಿದ್ದೇನೆ. ಇವರ ಬಣ್ಣವನ್ನು ಬಯಲು ಮಾಡುವ ಕೆಲಸ ಮಾಡಿದ್ದೇನೆ ಎಂದರು.

ಯಡಿಯೂರಪ್ಪ, ವಿಜಯೇಂದ್ರ‌ರಿಂದ ಯತ್ನಾಳ್ ಸಂಪರ್ಕ ವಿಚಾರವಾಗಿ ಕೇಳಿದ ಪ್ರಶ್ನೆಗೆ, ಕೆಲಸ ಇದ್ದಾಗ ಮಾಡುತ್ತಾರೆ, ಮುಂದೆ ತುಳಿಯುವ ಕೆಲಸಕ್ಕಾಗಿ ನನಗೆ ಕರೆ ಮಾಡುತ್ತಾರೆ. ನನ್ನಂತಹ ಬಡಪಾಯಿ ಮನೆಗೆ ವೀಕ್ಷಕರು ಬಂದಿದ್ದರು. ಅದೇ ಯಡಿಯೂರಪ್ಪ ಮನೆಗೆ ಹೋಗಿದ್ದರೆ ಬೆಳ್ಳಿ ತಟ್ಟೆ ಊಟ ಸಿಕ್ತಿತ್ತು ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.

ಕರ್ನಾಟಕದಲ್ಲಿ ಆಗಿರುವ ಬೆಳವಣಿಗೆ, ಚುನಾವಣೆಯಲ್ಲಿ ಯಾರು ಪಕ್ಷಕ್ಕೆ ದ್ರೋಹ ಮಾಡಿದ್ದಾರೆ, ಒಂದು ವರ್ಗದ ಕೇಂದ್ರೀಕೃತವಾಗಿ ಮಾಡಿದ್ದರು ಎಂದು ವಿವರಿಸಿದ್ದೇನೆ. ಅವರಿಗೆ ಎಷ್ಟೋ ವಿಷಯ ಗೊತ್ತಿರಲಿಲ್ಲ. ನಾನು ಧೈರ್ಯದಿಂದ ಎಲ್ಲವನ್ನೂ ಹೇಳಿದ್ದೇನೆ. ನಾವು ಈ ದೇಶದಲ್ಲಿ ಉಳಿಯಬೇಕಾದರೆ ಮೋದಿ ಮತ್ತೆ ಪ್ರಧಾನಿಯಾಗಬೇಕು. ವರಿಷ್ಠರು ಕೆಲವೇ ಚೇಲಾಗಳ ಮಾತು ಕೇಳಿ ನಿರ್ಧಾರ ತೆಗೆದುಕೊಳ್ಳಬಾರದು. ಕೆಲವರು ಬ್ಲ್ಯಾಕ್ ಮೇಲ್ ಮಾಡಲು ಪ್ರಯತ್ನ ಮಾಡುತ್ತಾರೆ, ನಾನು ಅಂಜಲ್ಲ ಎಂದು ಹೇಳಿದ್ದೇನೆ. ಇಬ್ಬರೂ ಬಹಳ ಖುಷಿಯಾದರು. ನೀವು ಎಲ್ಲವನ್ನೂ ಧೈರ್ಯವಾಗಿ ಹೇಳಿದ್ದೀರಿ, ಅಧ್ಯಕ್ಷರು ಮತ್ತು ಪ್ರಧಾನಿಗೆ ಹೇಳುತ್ತೇವೆ ಎಂದು ಹೇಳಿದ್ದಾರೆ. ನಿಮ್ಮನ್ನು ಮನೆಗೆ ಕರೆಸುವಷ್ಟು ದೊಡ್ಡ ಮನೆ ನಂದಲ್ಲ ಎಂದು ಹೇಳಿದೆ. ನನ್ನ ಮನೆಯೂ ಸಣ್ಣದಿದೆ, ಮುಂದಿನ ಸಲ ನನ್ನ ಮನೆ ತೋರಿಸುತ್ತೇನೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು ಎಂದು ಯತ್ನಾಳ್ ಹೇಳಿದರು.

ಶಾಸಕಾಂಗ ಪಕ್ಷದ ಸಭೆಗೆ ಹೋಗುತ್ತೇನೆ, ಅಲ್ಲಿ ನನ್ನ ಅಭಿಪ್ರಾಯ ಹೇಳುತ್ತೇನೆ. ವಿಪಕ್ಷ ನಾಯಕ ಉತ್ತರ ಕರ್ನಾಟಕ್ಕೆ ಕೊಡಬೇಕು, ಅದರಲ್ಲಿ ರಾಜಿ ಇಲ್ಲ. ದಕ್ಷಿಣ ಕರ್ನಾಟಕದವರೇ ಆಗಬೇಕಾ? ಮಂಗಳೂರು ಬಿಟ್ಟರೆ ದಕ್ಷಿಣ ಕರ್ನಾಟಕದ ಎಷ್ಟು ಶಾಸಕರರಿದ್ದಾರೆ. ಬಹಳಷ್ಟು ಶಾಸಕರು ನಮ್ಮ ಜೊತೆಗಿದ್ದಾರೆ ಆದರೆ ಅವರಿಗೆ ಮಾತಾಡಲು ಧಮ್ ಇಲ್ಲ. ಅವರಲ್ಲಿ ಬಹಳಷ್ಟು ಜನ ತಮ್ಮ ಮಕ್ಕಳನ್ನು ಲೋಕಸಭೆಗೆ ನಿಲ್ಲಿಸಬೇಕೆಂದು ಇದ್ದಾರೆ. ಜೀ ಹುಜೂರ್ ಸಂಸ್ಕೃತಿ ನನ್ನದಲ್ಲ. ಪಂಚಮಸಾಲಿ ಸಮುದಾಯವನ್ನು ಯಾವಾಗಲೂ ನಿರ್ಲಕ್ಷ್ಯ ಮಾಡಿದ್ದಾರೆ. ಎಲ್ಲ ಈ ಕಡೆಯವರೇ ಆದರೆ ನಾವು ಸರ್ ಸರ್ ಅಂತಾ ಅವರ ಬಾಲ ಹಿಡಿದುಕೊಂಡು ಅವರ ಮನೆಗೆ ಹೋಗಬೇಕೆ ಎಂದು ಪ್ರಶ್ನಿಸಿದರು.

ವಿರೋಧ ಪಕ್ಷದ ನಾಯಕ ಯಾರೇ‌ ಆದರೂ ಅದಕ್ಕೆ ನಿಮ್ಮ ಸಹಕಾರ ಇರುತ್ತದಾ ಎಂಬ ಪ್ರಶ್ನೆಗೆ ಯತ್ನಾಳ್, ಸಂಜೆಯ ಸಭೆಯಲ್ಲಿನ ಹೆಸರು ನೋಡಿ ಮುಂದೆ ಮಾತನಾಡುತ್ತೇನೆ ಎಂದರು.