ಮನೆ ರಾಜ್ಯ ಪಿಎಸ್‌ ಐ ನೇಮಕಾತಿ ಅಕ್ರಮ: ಪ್ರಮುಖ ಆರೋಪಿ ಮಂಜುನಾಥ ಮೇಳಕುಂದಿ ಪೊಲೀಸರಿಗೆ ಶರಣು

ಪಿಎಸ್‌ ಐ ನೇಮಕಾತಿ ಅಕ್ರಮ: ಪ್ರಮುಖ ಆರೋಪಿ ಮಂಜುನಾಥ ಮೇಳಕುಂದಿ ಪೊಲೀಸರಿಗೆ ಶರಣು

0

ಕಲಬುರಗಿ (Kalburgi)- ಪಿಎಸ್‌ಐ ಪರೀಕ್ಷಾ ಅಕ್ರಮ ಪ್ರಕರಣದ ಕಿಂಗ್‌ಪಿನ್‌, ನೀರಾವರಿ ಇಲಾಖೆಯ ಕಿರಿಯ ಎಂಜಿನಿಯರ್‌ ಮಂಜುನಾಥ ಮೇಳಕುಂದಿ ಭಾನುವಾರ ಖುದ್ದಾಗಿ ಸಿಐಡಿಗೆ ಶರಣಾಗಿದ್ದಾರೆ.

ಇದರೊಂದಿಗೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 24ಕ್ಕೆ ಏರಿಕೆಯಾಗಿದೆ. ಇನ್ನು ಈ ಪ್ರಕರಣದಲ್ಲಿ ಬಂಧನಕ್ಕೊಳಗಾದ 12 ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ ಸಿಐಡಿ ಅಧಿಕಾರಿಗಳು ಸೋಮವಾರ ವಶಕ್ಕೆ ಪಡೆಯಲಿದ್ದಾರೆ.

ಪ್ರಕರಣ ಬೆಳಕಿಗೆ ಬಂದಾಗಿನಿಂದ ತಲೆಮರೆಸಿಕೊಂಡಿದ್ದ ಈತನ ವಿರುದ್ಧ ವಿರುದ್ಧ ಬಂಧನದ ವಾರಂಟ್‌ ಹೊರಡಿಸಲಾಗಿತ್ತು. ವಾರದೊಳಗೆ ಹಾಜರಾಗದೇ ಇದ್ದರೆ ಆಸ್ತಿ ಮುಟ್ಟುಗೋಲು ಹಾಕುವ ಆದೇಶ ಹೊರಡಿಸಲಾಗಿತ್ತು. ಮಂಜುನಾಥ ಸೇರಿದಂತೆ ಮುಖ್ಯಶಿಕ್ಷಕ ಕಾಶಿನಾಥ, ಮಹಿಳಾ ಅಭ್ಯರ್ಥಿ ಶಾಂತಿಬಾಯಿ ಹಾಗೂ ಒಬ್ಬ ಶಿಕ್ಷಕಿ ವಿರುದ್ಧ ನ್ಯಾಯಾಲಯ ಬಂಧನ ವಾರೆಂಟ್‌ ಕೂಡ ಹೊರಡಿಸಿತ್ತು.

ಯಾರಿಗೂ ಏನೊಂದೂ ಸುಳಿವು ಸಿಗದಂತೆ ನೇರವಾಗಿ ಆಟೋದಲ್ಲಿ ಬಂದ ಮಂಜುನಾಥ, ಇಲ್ಲಿನ ಐವಾನ್‌ ಇ ಶಾಹಿ ಅತಿಥಿಗೃಹದಲ್ಲಿ ಸಿಐಡಿ ಕ್ಯಾಂಪ್‌ ಕಚೇರಿಗೆ ಬಂದರು. ಚಾಲಕನಿಗೆ ಹಣ ಕೊಟ್ಟ ನಂತರ ತಮ್ಮ ಜೊತೆಗೆ ತಂದಿದ್ದ ಬ್ಯಾಗನ್ನು ಹೆಗಲೇರಿಸಿಕೊಂಡು ಒಳಗೆ ಹೋದರು.

ಸ್ಥಳದಲ್ಲಿದ್ದ ಮಾಧ್ಯಮದವರನ್ನು ಕಂಡು ‘ನನ್ನದೇನೂ ತಪ್ಪಿಲ್ಲ. ಸುಮ್ಮನೇ ಪ್ರಕರಣದಲ್ಲಿ ಸಿಕ್ಕಿಸುತ್ತಿದ್ದಾರೆ’ ಎಂದು ಹೇಳಿದರು. ಅಷ್ಟರಲ್ಲಿ ಹೊರಗೆ ಬಂದ ಪೊಲೀಸರು ಅವರನ್ನು ಕಚೇರಿಯ ಒಳಗೆ ಕರೆದೊಯ್ದರು. ಇಷ್ಟು ದಿನ ಸಣ್ಣ ಸುಳಿವೂ ಸಿಗದಂತೆ ತಲೆಮರೆಸಿಕೊಂಡಿದ್ದ ಪ‍್ರಮುಖ ಆರೋಪಿ, ಏಕಾಏಕಿ ಸಿಐಡಿ ಅಧಿಕಾರಿಗಳ ಮುಂದೆ ಹಾಜರಾಗಿದ್ದು ಅಚ್ಚರಿ ಮೂಡಿಸಿದೆ.

ತಲೆಮರೆಸಿಕೊಂಡಿರುವ 10 ಮಂದಿಗೆ ತೀವ್ರ ಶೋಧ

ಪಿಎಸ್‌ಐ ಪರೀಕ್ಷೆಯಲ್ಲಿ ಓಎಂಆರ್‌ ಶೀಟ್‌ ತಿದ್ದುಪಡಿ ಅಕ್ರಮವೆಸಗಿದ್ದ ಆರೋಪದಡಿ ಬೆಂಗಳೂರಿನ ಹೈಗ್ರೌಂಡ್ಸ್‌ ಠಾಣೆ ಪೊಲೀಸರು 12 ಮಂದಿಯನ್ನು ಬಂಧಿಸಿದ್ದು, ತಲೆಮರೆಸಿಕೊಂಡಿರುವ ಹತ್ತು ಮಂದಿಗೆ ಶೋಧ ನಡೆಸುತ್ತಿದ್ದಾರೆ. ಸಿಐಡಿ ತನಿಖಾಧಿಕಾರಿಗಳು ನೀಡಿದ ದೂರಿನನ್ವಯ ಈ ಆರೋಪಿಗಳನ್ನು ಬಂಧಿಸಲಾಗಿದೆ.

ಎಲ್ಲ ಅಭ್ಯರ್ಥಿಗಳ ಓಎಂಆರ್‌ ಶೀಟ್‌ ಹಾಗೂ ಮೌಲ್ಯಮಾಪನ ಕೇಂದ್ರದಲ್ಲಿದ್ದ ಓಎಂಆರ್‌ ಶೀಟ್‌ ಎರಡರ ಜತೆ ವಿಚಾರಣೆಗೊಳಪಡಿಸಲಾಗಿತ್ತು. ಈ ವೇಳೆ ಸುಮಾರು 22 ಓಎಂಆರ್‌ ಶೀಟ್‌ಗಳಲ್ಲಿ ವ್ಯತ್ಯಾಸ ಕಂಡು ಬಂದಿತ್ತು. ಇದರ ಆಧಾರದ ಮೇಲೆ 12 ಮಂದಿಯನ್ನು ಹೈಗ್ರೌಂಡ್ಸ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಇನ್ನೂ ತಲೆಮರೆಸಿಕೊಂಡಿರುವ 10 ಮಂದಿಗಾಗಿ ಬೆಂಗಳೂರು ಸೇರಿದಂತೆ ಹೊರ ಜಿಲ್ಲೆಗಳು ಹಾಗೂ ಅವರ ಸಂಬಂಧಿಕರ ಮನೆಗಳಲ್ಲೂ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಬೆಂಗಳೂರು ಹಾಗೂ ಸುತ್ತಮುತ್ತಲಿನ ಪರೀಕ್ಷಾ ಕೇಂದ್ರಗಳಲ್ಲಿ ಅಕ್ರಮ ನಡೆದಿದ್ದು, ಇದಕ್ಕೆ ರಾಜಕೀಯ ಮುಖಂಡರೊಬ್ಬರ ಕುಮ್ಮಕ್ಕಿದೆ ಎಂಬ ಶಂಕೆ ವ್ಯಕ್ತಪಡಿಸಲಾಗಿದೆ. ತನಿಖೆ ಪೂರ್ಣಗೊಂಡ ಬಳಿಕ ಯಾರ ಪಾತ್ರ ಎಷ್ಟಿದೆ ಎಂಬುದು ತಿಳಿದು ಬರಲಿದೆ.