ಮನೆ ಕಾನೂನು ಯುಎಪಿಎ ಆರೋಪಿ ಸಮಾಜಕ್ಕೆ ಅಪಾಯಕಾರಿ ಎಂದು ವಿವರಿಸಲು ಪೊಲೀಸರು ವಿಫಲವಾದರೆ ಜಾಮೀನು ನೀಡಬಹುದು: ಕಾಶ್ಮೀರ ಹೈಕೋರ್ಟ್

ಯುಎಪಿಎ ಆರೋಪಿ ಸಮಾಜಕ್ಕೆ ಅಪಾಯಕಾರಿ ಎಂದು ವಿವರಿಸಲು ಪೊಲೀಸರು ವಿಫಲವಾದರೆ ಜಾಮೀನು ನೀಡಬಹುದು: ಕಾಶ್ಮೀರ ಹೈಕೋರ್ಟ್

0

ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯಿದೆ (ಯುಎಪಿಎ) ಅಡಿಯ ಪ್ರಕರಣಗಳಲ್ಲಿ ಜಾಮೀನು ಕೋರಿದಾಗ ತಾನು ಬಂಧಿಸಿರುವ ಆರೋಪಿಗಳು ಸಮಾಜದ ಭದ್ರತೆಗೆ ಹೇಗೆ ಸ್ಪಷ್ಟವಾಗಿ ಅಪಾಯಕಾರಿ ಎಂಬುದನ್ನು ತನಿಖಾ ಸಂಸ್ಥೆ ಸಮರ್ಥಿಸಿಕೊಳ್ಳಬೇಕಾಗುತ್ತದೆ ಎಂದು ಜಮ್ಮು- ಕಾಶ್ಮೀರ ಹಾಗೂ ಲಡಾಖ್ ಹೈಕೋರ್ಟ್ ಈಚೆಗೆ ಹೇಳಿದೆ.

ಸಮಾಜಕ್ಕೆ ಹೇಗೆ ಕಂಟಕ ಎಂಬ ಕುರಿತು ಯಾವುದೇ ಸಮರ್ಥನೆ ಇಲ್ಲದೆ ಇದ್ದರೆ ಅಂತಹ ಆರೋಪಿ ವಿರುದ್ಧ ಮೇಲ್ನೋಟದ ಸಾಕ್ಷ್ಯಗಳು ಪ್ರಯೋಜನಕ್ಕೆ ಬರುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.

“ಯುಎಪಿಎ ಅಡಿಯಲ್ಲಿ ಪ್ರಕರಣದ ತನಿಖೆ ನಡೆಸುತ್ತಿರುವ ತನಿಖಾ ಸಂಸ್ಥೆಗೆ ಆ ಕಾಯಿದೆಯಡಿ ಬಂಧಿಸಲು ಅಥವಾ ಬಂಧಿಸದಿರಲು ಅನಿಯಂತ್ರಿತ ಅಧಿಕಾರವಿದೆ … ಆದರೂ ಬಂಧನದ ನಂತರ, ಜಾಮೀನಿನ ಮೇಲೆ ಬಿಡುಗಡೆಗೊಳ್ಳಲಿರುವ ಆರೋಪಿಗಳು ಸಮಾಜದ ಭದ್ರತೆಗೆ ಹೇಗೆ ಕಂಟಕ ಎಂಬುದನ್ನು ತನಿಖಾ ಸಂಸ್ಥೆ ಸಮರ್ಥಿಸಿಕೊಳ್ಳಬೇಕಾಗುತ್ತದೆ” ಎಂದು ನ್ಯಾಯಾಲಯ ತೀರ್ಪು ನೀಡಿದೆ.

ಈ ವಿಚಾರವಾಗಿ ತನಿಖಾ ಸಂಸ್ಥೆ ನ್ಯಾಯಾಲಯವನ್ನು ತೃಪ್ತಿ ಪಡಿಸದಿದ್ದರೆ, ಬಂಧನ ಸಮರ್ಥಿಸಲು ಸಾಧ್ಯವಾಗದಿದ್ದರೆ, ಅದು ಆರೋಪಿಯ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ನ್ಯಾಯಮೂರ್ತಿಗಳಾದ ಅತುಲ್ ಶ್ರೀಧರನ್ ಮತ್ತು ಮೋಹನ್ ಲಾಲ್ (ಈಗ ನಿವೃತ್ತರು) ಅವರಿದ್ದ ವಿಭಾಗೀಯ ಪೀಠ ನ. 17ರಂದು ನೀಡಿದ ತೀರ್ಪಿನಲ್ಲಿ ತಿಳಿಸಿದೆ.

ಯುಎಪಿಎ ಅಡಿಯಲ್ಲಿ ಆರೋಪಿಗಳನ್ನು ಬಿಡುಗಡೆ ಮಾಡಲು ಕಠಿಣ ಷರತ್ತುಗಳಿದ್ದರೂ ಬಂಧನ ಸಮರ್ಥಿಸಿಕೊಳ್ಳಲಾಗದ ಸನ್ನಿವೇಶದಲ್ಲಿ ಆರೋಪಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬಹುದು ಎಂದು ಅದು ಹೇಳಿದೆ. ಇದೇ ವೇಳೆ, ಆರೋಪಿ ಸಮಾಜದ ಭದ್ರತೆಗೆ ಕಂಟಕಕಾರಿ ಎಂದು ನಿರ್ಣಯಿಸಲು ಯಾವುದೇ ನಿಯಮವಿಲ್ಲ. ಪ್ರತಿ ಪ್ರಕರಣದ ನಿರ್ದಿಷ್ಟ ಸಂದರ್ಭ- ಸನ್ನಿವೇಶಗಳ ಹಿನ್ನೆಲೆಯಲ್ಲಿ ಇದನ್ನು ಪರಿಶೀಲಿಸಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಸುದ್ದಿ ಜಾಲತಾಣ ʼದಿ ಕಾಶ್ಮೀರ್ ವಾಲಾʼದಲ್ಲಿ ಪ್ರಕಟವಾದ ಲೇಖನಕ್ಕೆ ಸಂಬಂಧಿಸಿದಂತೆ ಯುಎಪಿಎ ಅಡಿ ಪ್ರಕರಣ ಎದುರಿಸುತ್ತಿದ್ದ ಕಾಶ್ಮೀರಿ ಪತ್ರಕರ್ತ ಫಹಾದ್ ಶಾ ಅವರಿಗೆ ಜಾಮೀನು ನೀಡುವಾಗ ನ್ಯಾಯಾಲಯ ಈ ಐತಿಹಾಸಿಕ ತೀರ್ಪು ನೀಡಿದೆ.

ಫಹಾದ್ ಶಾ ಅವರು ಕಣಿವೆ ರಾಜ್ಯ ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ಚಳವಳಿ ಕಟ್ಟಿ ಪ್ರಚಾರ ಮಾಡುವ ಕಾರ್ಯಾಚರಣೆಯ ಭಾಗವಾಗಿದ್ದರು, ಇದಕ್ಕಾಗಿ ಅವರು ವಿದೇಶಿ ದೇಣಿಗೆ (ನಿಯಂತ್ರಣ) ಕಾಯಿದೆ ಉಲ್ಲಂಘಿಸಿ ವಿದೇಶದಿಂದ ಹಣ ಸ್ವೀಕರಿಸುತ್ತಿದ್ದರು ಎಂದು ಪೊಲೀಸರು ಆರೋಪಿಸಿದ್ದರು.

ಶಾ ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಯುಎಪಿಎಯ ಸೆಕ್ಷನ್ 43 ಡಿ (5) ರ ಅಡಿಯಲ್ಲಿ ಜಾಮೀನಿಗಾಗಿ ಕಠಿಣ ಷರತ್ತುಗಳನ್ನು ರೂಪಿಸಿರುವ ಶಾಸಕಾಂಗ ಉದ್ದೇಶ ಸಮಾಜದ ಭದ್ರತೆಗೆ ಮತ್ತು ಅಪರಾಧದೊಂದಿಗೆ ನಿಕಟ ಮತ್ತು ನೇರ ಸಂಬಂಧವನ್ನು ಹೊಂದಿರುವವರಿಗೆ ವಿಚಾರಣೆ ಬಾಕಿ ಇರುವಾಗ ಜಾಮೀನು ನೀಡದಂತೆ ನೋಡಿಕೊಳ್ಳುವುದಾಗಿದೆ. ತಪ್ಪು ಸಮಯದಲ್ಲಿ ತಪ್ಪು ಸ್ಥಳದಲ್ಲಿದ್ದ, ಗೊತ್ತಿಲ್ಲದೆ ಕಾನೂನು ಉಲ್ಲಂಘಿಸಿದವರನ್ನು ಸೆರೆಮನೆಯಲ್ಲಿಡಲು ಆ ಕಾಯಿದೆ ಇಲ್ಲ ಎಂದು ಅಭಿಪ್ರಾಯಪಟ್ಟಿದೆ.

ಯಾವುದೇ ಕಾನೂನು ಸಮರ್ಥನೆ ಇಲ್ಲದೆ ಯುಎಪಿಎ ಕಾಯಿದೆ ಅಡಿಯಲ್ಲಿ ವ್ಯಕ್ತಿಗಳನ್ನು ಬಂಧಿಸುವುದು ಪೊಲೀಸರಿಗೆ ನೀಡಲಾದ ವಿವೇಚನೆಯ ನಿರಂಕುಶ ಬಳಕೆಯಾಗುತ್ತದೆ ಅಂತಹ ಬಂಧನ ಸಂವಿಧಾನದ 14 ಮತ್ತು 21ನೇ ವಿಧಿಗಳ ಉಲ್ಲಂಘನೆಯಾಗುತ್ತದೆ ಎಂಬುದಾಗಿ ನ್ಯಾಯಾಲಯ ಎಚ್ಚರಿಕೆ ನೀಡಿದೆ.

ಹೀಗಾಗಿ, ಯುಎಪಿಎಯ ಸೆಕ್ಷನ್ 43 ಡಿ (5) ಉಲ್ಲಂಘಿಸಿರುವುದು ಯಾವುದೇ ಪರಿಣಾಮ ಬೀರುವುದಿಲ್ಲ ಮತ್ತು ಆರೋಪಿ ಜಾಮೀನು ಪಡೆಯಲು ಅರ್ಹ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.