ಅತ್ಯುತ್ತಮ ಸಿನಿಮಾಗಳಿಗೆ ನೀಡಲಾಗುವ ಸರ್ವೋತ್ತಮ ಪ್ರಶಸ್ತಿ ಎಂದು ಆಸ್ಕರ್ ಅನ್ನು ಗುರುತಿಸಲಾಗುತ್ತದೆ. ಹಾಗೆಯೇ ಟಿವಿ ಶೋಗಳಿಗೆ ನೀಡಲಾಗುವ ವಿಶ್ವದ ಸರ್ವೋತ್ತಮ ಪ್ರಶಸ್ತಿಯೆಂದು ಎಮ್ಮಿ ಪ್ರಶಸ್ತಿಯನ್ನು ಕರೆಯಲಾಗುತ್ತದೆ. ಬೆರಳೆಣಿಕೆಯ ಭಾರತೀಯರಷ್ಟೆ ಈ ಪ್ರಶಸ್ತಿ ಗೆದ್ದಿದ್ದಾರೆ. ಇದೀಗ ಆ ಪಟ್ಟಿಗೆ ಹೊಸ ಸೇರ್ಪಡೆ ಭಾರತದ ಜನಪ್ರಿಯ ಕಮಿಡಿಯನ್ ವೀರ್ ದಾಸ್.
ನೆಟ್ ಫ್ಲಿಕ್ಸ್ ನಲ್ಲಿ ಸ್ಟ್ರೀಮ್ ಆಗುತ್ತಿರುವ ವೀರ್ ದಾಸ್ ರ ಕಾಮಿಡಿ ಸ್ಪೆಷಲ್ ‘ವೀರ್ ದಾಸ್; ಲ್ಯಾಂಡಿಂಗ್’ ಎಮ್ಮಿಯ ಯೂನಿಕ್ ಕಾಮಿಡಿ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ. ಈ ಪ್ರಶಸ್ತಿಯನ್ನು ‘ಡೆರ್ರಿ ಗರ್ಲ್ಸ್-ಸೀಸನ್ 3’ ಜೊತೆಗೆ ಹಂಚಿಕೊಳ್ಳಲಾಗಿದೆ. ‘ವೀರ್ ದಾಸ್; ಲ್ಯಾಂಡಿಂಗ್’ ಹಾಗೂ ‘ಡೆರ್ರಿ ಗರ್ಲ್ಸ್-ಸೀಸನ್ 3’ ಎರಡೂ ಶೋಗಳಿಗೆ ಜಂಟಿಯಾಗಿ ಪ್ರಶಸ್ತಿಯನ್ನು ನೀಡಲಾಗಿದೆ.
‘ವೀರ್ ದಾಸ್; ಲ್ಯಾಂಡಿಂಗ್’ ಶೋನಲ್ಲಿ ವೀರ್ ದಾಸ್, ಅಮೆರಿಕ ಹಾಗೂ ಭಾರತದ ಸಂಸ್ಕೃತಿಗಳ ಬಗ್ಗೆ ರಾಜಕೀಯ ದೃಷ್ಟಿಕೋನದಿಂದ ಮಾತನಾಡಿದ್ದಾರೆ. ರಾಜಕಾರಣಿಯೊಬ್ಬ ಈ ಭಿನ್ನತೆಯನ್ನು ಹೇಗೆ ಗ್ರಹಿಸುತ್ತಾನೆ ಎಂಬುದನ್ನು ಹಾಸ್ಯಮಯವಾಗಿ ವಿವರಿಸಿದ್ದಾರೆ. ಜೊತೆಗೆ ಭಾರತೀಯನಾಗಿ ಅಮೆರಿಕದಲ್ಲಿ ಬೆಳೆದ ತನಗೆ ಸಂಸ್ಕೃತಿ, ಸ್ವಂತ ನೆಲ ಎರಡೂ ಇಲ್ಲದ ಬಗ್ಗೆಯೂ ವೀರ್ ದಾಸ್ ಮಾತನಾಡಿದ್ದಾರೆ.
ವೀರ್ ದಾಸ್ ಭಾರತದ ಜನಪ್ರಿಯ ಕಮಿಡಿಯನ್. ಅವರು ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ತುಂಬಿದ ಗೃಹಗಳ ಕಾಮಿಡಿ ಶೋಗಳನ್ನು ನೀಡಿದ್ದಾರೆ. ಅವರ ಕೆಲವು ಶೋಗಳು ವಿವಾದಕ್ಕೆ ಕಾರಣವಾಗಿದ್ದೂ ಸಹ ಇದೆ. ವಿದೇಶಗಳಲ್ಲಿ ಭಾರತದ ಬಗ್ಗೆ ಕೀಳಾಗಿ ಮಾತನಾಡಿದ್ದಾನೆ ಎಂದು ವೀರ್ ದಾಸ್ ವಿರುದ್ಧ ಆರೋಪ ಮಾಡಲಾಗಿತ್ತು. ದೂರು ಸಹ ದಾಖಲಾಗಿತ್ತು. ವೀರ್ ದಾಸ್ ಅನ್ನು ಭಯೋತ್ಪಾದಕ ಎಂದೂ ಸಹ ಕರೆಯಲಾಗಿತ್ತು. ಈಗ ಅವರಿಗೆ ಪ್ರತಿಷ್ಠಿತ ಎಮ್ಮಿ ಪ್ರಶಸ್ತಿ ಲಭಿಸಿದೆ.
ವೀರ್ ದಾಸ್ ಮಾತ್ರವೇ ಅಲ್ಲದೆ ಭಾರತೀಯ ಟಿವಿ ಜಗತ್ತಿನ ರಾಣಿ ಎಂದೇ ಕರೆಯಲಾಗುವ ಏಕ್ತಾ ಕಪೂರ್ಗೂ ಪ್ರಶಸ್ತಿ ಲಭಿಸಿದೆ. ಭಾರತೀಯ ಟೆಲಿವಿಷನ್ ಜಗತ್ತಿನಲ್ಲಿ ತಂಡ ಬದಲಾವಣೆ ಹಾಗೂ ವೃತ್ತಿಜೀವನದ ಸಾಧನೆಗಾಗಿ ಏಕ್ತಾ ಕಪೂರ್ ಅವರಿಗೆ ಎಮ್ಮಿ ಡೈರೆಕ್ಟೊರೇಟ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.