ಮನೆ ರಾಜ್ಯ ಸಮಾಜ ಒಡೆಯಲೆಂದೇ ಕಾಂಗ್ರೆಸ್​ನಿಂದ ಜಾತಿಗಣತಿ: ಎಚ್.ಡಿ.ಕುಮಾರಸ್ವಾಮಿ

ಸಮಾಜ ಒಡೆಯಲೆಂದೇ ಕಾಂಗ್ರೆಸ್​ನಿಂದ ಜಾತಿಗಣತಿ: ಎಚ್.ಡಿ.ಕುಮಾರಸ್ವಾಮಿ

0

ಮಂಡ್ಯ:ಜಾತಿ ಗಣತಿ ಮೂಲಕ ಸಮಾಜ ಒಡೆಯುವುದು ಕಾಂಗ್ರೆಸ್​ನ ಉದ್ದೇಶವಾಗಿದೆ. ಅದರ ಪ್ರತಿಫಲವನ್ನು ಅವರು ಅನುಭವಿಸುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಜಾತಿಗಣತಿಗೆ ಸಂಬಂಧಿಸಿದಂತೆ ಸಿಎಂ ಟ್ವೀಟ್ ಗಮನಿಸಿದ್ದೇನೆ. ರಾಹುಲ್ ಗಾಂಧಿ ಭಾವನೆಗೆ ಸ್ಪಂದಿಸಿ ಜಾತಿಗಣತಿ ವರದಿ ಪಡೆಯುವ ನಿರ್ಧಾರ ಮಾಡಿದ್ದಾರೆ. ಕಾಂತರಾಜು ವರದಿಯ ಮೂಲಪ್ರತಿ ಕಳ್ಳತನವಾದ ಮಾಹಿತಿ ಇದೆ. ಅಂತೆಯೇ ಆ ವರದಿಯನ್ನು ಕುಮಾರಸ್ವಾಮಿ ತಿರಸ್ಕಾರ ಮಾಡಿದ್ದರೆಂದು ಆರೋಪಿಸಿದ್ದಾರೆ. ಹಾಗಿದ್ದರೆ, ಇವರು ಅಧಿಕಾರಕ್ಕೆ ಬಂದ ಈ ಆರು ತಿಂಗಳಲ್ಲಿ ಏಕೆ ವರದಿಗೆ ಒಪ್ಪಿಗೆ ಕೊಡಲಿಲ್ಲ? ಎಂದು ಪ್ರಶ್ನಿಸಿದರು.
ಸಂಪೂರ್ಣ ಜನಗಣತಿ ಆಗಿಲ್ಲ, ಮನೆಗಳಿಗೆ ಭೇಟಿ ಕೊಟ್ಟಿಲ್ಲ. ಅವರಿಗೆ ಬೇಕಾದಂತೆ ವರದಿ ಸಿದ್ಧವಾಗಿರುವುದು ಜಗಜ್ಜಾಹೀರು. ರಾಷ್ಟ್ರೀಯ ನಾಯಕರನ್ನು ಮೆಚ್ಚಿಸಲು ಈಗ ವರದಿ ತೆಗೆದುಕೊಳ್ಳುವ ನಿರ್ಧಾರ ಮಾಡಿದ್ದಾರೆ ಎಂದು ಟೀಕಾಪ್ರಹಾರ ಮಾಡಿದರು.
ಕಾಂತರಾಜು ಕಮಿಟಿ ರಚನೆ ಮಾಡಿ 10 ವರ್ಷಗಳು ಕಳೆದಿವೆ. ಈ ಅವಧಿಯಲ್ಲಿ ಹಲವಾರು ಬೆಳವಣಿಗೆಗಳು ಆಗಿವೆ. ಮನೆಯಲ್ಲಿ ಕುಳಿತು ಬರೆದರೋ, ಇಲ್ಲವೋ ಆಗಿನ ಸಿಎಂ ಬರೆಸಿದ್ದಾರೋ ಗೊತ್ತಿಲ್ಲ. ಆದರೆ, ಅವತ್ತಿನ ಮೆಂಬರ್ ಸೆಕ್ರೆಟರಿ ವರದಿಗೆ ಸಹಿ ಹಾಕದಿರಲು ಕಾರಣವೇನು? ಎಂದು ಪ್ರಶ್ನಿಸಿದರು.
ಸಮಾಜವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಇವರಿಗೆ ಬೇಕಿಲ್ಲ. ಜಾತಿಯ ಹೆಸರಿನಿಂದ ನಾನು ವಿರೋಧ ವ್ಯಕ್ತಪಡಿಸಲ್ಲ. ಸುಳ್ಳು ನಮ್ಮ ಮನದೇವರೆಂದು ಆರೋಪಿಸುತ್ತಾರೆ. ಪಾಪ ಇವರು ಸತ್ಯಹರಿಶ್ಚಂದ್ರ ವಂಶದವರು ಅಲ್ವಾ? ಕಳೆದ ಚುನಾವಣೆಯಲ್ಲಿ ಪೇಪರ್, ಪೆನ್ ಕೇಳಿದವರು ಇಂದು ಚರ್ಚೆ ಮಾಡಬೇಕು. ಇವರಿಗೆ ಅಧಿಕಾರ ಇದೆ, ಕ್ಯಾಬಿನೆಟ್​ನಲ್ಲಿ ಸತ್ಯಾಂಶ ಚರ್ಚೆ ಮಾಡಿ ಸಮಸ್ಯೆ ಬಗೆಹರಿಸಬೇಕು ಎಂದು ಸವಾಲು ಹಾಕಿದರು.
ಬಿಜೆಪಿಗರು ಹೇಳಿದರೆ ಕುಮಾರಸ್ವಾಮಿ ಚಡ್ಡಿಯನ್ನು ಬೇಕಾದರೂ ಹಾಕುತ್ತಾರೆ, ದತ್ತಮಾಲೆಯನ್ನು ಹಾಕುತ್ತಾರೆನ್ನುವ ಸಚಿವ ಎನ್.ಚಲುವರಾಯಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಹೇಳಿದರೆ ಚಲುವರಾಯಸ್ವಾಮಿ ಏನು ಹಾಕುತ್ತಾರೆಂದು ಹೇಳಲಿ. ನಂತರ ನನ್ನ ಬಗ್ಗೆ ಮಾತನಾಡಲಿ ಎಂದು ತಿರುಗೇಟು ನೀಡಿದರು.