ಮನೆ ಕಾನೂನು ನ್ಯಾಯಾಧೀಶರ ಹುದ್ದೆ: ಪ್ರಕರಣಗಳ ಮಾಹಿತಿ ಬಚ್ಚಿಟ್ಟಿದ್ದ ವಕೀಲರ ವಿರುದ್ಧದ ಆರೋಪ ಪಟ್ಟಿ ರದ್ದಿಗೆ ಹೈಕೋರ್ಟ್‌ ನಕಾರ

ನ್ಯಾಯಾಧೀಶರ ಹುದ್ದೆ: ಪ್ರಕರಣಗಳ ಮಾಹಿತಿ ಬಚ್ಚಿಟ್ಟಿದ್ದ ವಕೀಲರ ವಿರುದ್ಧದ ಆರೋಪ ಪಟ್ಟಿ ರದ್ದಿಗೆ ಹೈಕೋರ್ಟ್‌ ನಕಾರ

0

ಭದ್ರತೆಯಿರುವ ಉದ್ಯೋಗ ಮೌಲ್ಯಯುತವಾದ ಆಸ್ತಿಗೆ ಸಮಾನವಾದದ್ದು ಎಂದಿರುವ ಕರ್ನಾಟಕ ಹೈಕೋರ್ಟ್, ಜಿಲ್ಲಾ ನ್ಯಾಯಾಧೀಶರ ಹುದ್ದೆಗೆ ಅರ್ಜಿ ಸಲ್ಲಿಸುವಾಗ ತಮ್ಮ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ಬಗ್ಗೆ ಮರೆ ಮಾಚಿದ ಆರೋಪ ಎದುರಿಸುತ್ತಿದ್ದ ವಕೀಲರೊಬ್ಬರ ವಿರುದ್ಧದ ಆರೋಪ ಪಟ್ಟಿ ರದ್ದು ಪಡಿಸಲು ನ್ಯಾಯಾಲಯ ಈಚೆಗೆ ನಿರಾಕರಿಸಿದೆ.

ಜಿಲ್ಲಾ ನ್ಯಾಯಾಧೀಶರ ಹುದ್ದೆಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ತನ್ನ ವಿರುದ್ಧ ವಿಚಾರಣಾ ಹಂತದಲ್ಲಿದ್ದ ಕ್ರಿಮಿನಲ್ /ಸಿವಿಲ್ ಪ್ರಕರಣಗಳನ್ನು ಮರೆ ಮಾಚಿದ್ದ ಆರೋಪದಲ್ಲಿ ದಾಖಲಾಗಿದ್ದ ಪ್ರಕರಣ ಕುರಿತಂತೆ ಸಲ್ಲಿಕೆಯಾಗಿದ್ದ ಆರೋಪ ಪಟ್ಟಿಯನ್ನು ಪ್ರಶ್ನಿಸಿ ಸೋಮವಾರಪೇಟೆ ತಾಲ್ಲೂಕಿನ ವಕೀಲ ಎಸ್ ಎಸ್ ಪಾಲಾಕ್ಷ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠ ವಜಾ ಮಾಡಿದೆ.

ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ಮೋಸದಿಂದ ಯಾವುದೇ ಸ್ವತ್ತನ್ನು ತನ್ನಲ್ಲಿಟ್ಟುಕೊಳ್ಳುವುದು ವಂಚನೆಗೆ ಸಮ. ಇದು ಭಾರತೀಯ ದಂಡ ಸಂಹಿತೆ ಸೆಕ್ಷನ್ 415ರ ಪ್ರಕಾರ ಅಪರಾಧ. ಹೀಗಾಗಿ, ಭದ್ರತೆಯಿರುವ ಉದ್ಯೋಗವೂ ಒಂದು ಮೌಲ್ಯಯುತ ಸ್ವತ್ತಾಗಿದೆ. ಇದನ್ನು ಪಡೆಯುವುದಕ್ಕಾಗಿ ಸುಳ್ಳು ಮಾಹಿತಿ ನೀಡುವುದು ವಂಚನೆ ಮಾಡಿದಂತೆ ಎಂದು ಪೀಠ ತಿಳಿಸಿದೆ.

ಅರ್ಜಿದಾರರು, ಜಿಲ್ಲಾ ನ್ಯಾಯಾಧೀಶರ ಹುದ್ದೆಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಕಣ್ತಪ್ಪಿನಿಂದ ತಪ್ಪಾಗಿದೆ ಎಂದು ಒಪ್ಪಿಕೊಳ್ಳಲಾಗುವುದಿಲ್ಲ. ಗ್ರೂಪ್ ಡಿ ನೌಕರಿಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ತಪ್ಪಾಗಿದೆ ಎಂದರೆ ಒಪ್ಪಬಹುದು. ಆದರೆ, ಸತತ 13 ವರ್ಷಗಳ ಕಾಲ ವಕೀಲ ವೃತ್ತಿ ಮಾಡಿ ಜಿಲ್ಲಾ ನ್ಯಾಯಾಧೀಶರ ಹುದ್ದೆಗೆ ಅರ್ಜಿ ಸಲ್ಲಿಸುವಾಗ ಈ ತಪ್ಪು ಆಗದಂತೆ ನೋಡಿಕೊಳ್ಳಬೇಕಿತ್ತು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ನೇಮಕಾತಿ ಅಧಿಸೂಚನೆಯಲ್ಲಿ ಪ್ರಸ್ತುತ ಇರುವ ಹಾಗೂ ಹಿಂದೆ ಇದ್ದ ಪ್ರಕರಣಗಳ ಬಗ್ಗೆ ಸ್ಪಷ್ಟವಾಗಿ ಕೇಳಲಾಗಿದೆ. ಆದರೆ, ಅರ್ಜಿದಾರರು ನೇಮಕಾತಿ ಅರ್ಜಿ ಭರ್ತಿ ಮಾಡುವ ಸಂದರ್ಭದಲ್ಲಿ ಅದಕ್ಕೂ ಹಿಂದೆ ಇದ್ದ ಪ್ರಕರಣಗಳನ್ನು ಮರೆ ಮಾಚಿದಂತಿದೆ ಎಂದು ಅಭಿಪ್ರಾಯಪಟ್ಟಿದೆ. ಸುಪ್ರೀಂ ಕೋರ್ಟ್‌ ನ ಹಲವು ತೀರ್ಪುಗಳನ್ನು ಉಲ್ಲೇಖಿಸಿರುವ ಪೀಠವು ಈ ರೀತಿಯ ಪ್ರಕರಣದಲ್ಲಿ ಮಧ್ಯ ಪ್ರವೇಶಿಸಲಾಗದು ಎಂದಿದೆ.

ಪ್ರಕರಣದ ಹಿನ್ನೆಲೆ: ರಾಜ್ಯ ವಕೀಲರ ಪರಿಷತ್‌ನಲ್ಲಿ ವಕೀಲರಾಗಿ ನೋಂದಣಿಯಾಗಿರುವ ಅರ್ಜಿದಾರರು 13 ವರ್ಷಗಳ ಕಾಲ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2019ರ ಸೆಪ್ಟಂಬರ್ 15ರಂದು ಜಿಲ್ಲಾ ನ್ಯಾಯಾಧೀಶರ ಹುದ್ದೆಗೆ ಭರ್ತಿ ಮಾಡಲು ಹೈಕೋರ್ಟ್ ಅರ್ಜಿ ಆಹ್ವಾನಿಸಿತ್ತು. ಅರ್ಜಿ ಸಲ್ಲಿಸುವರು ತಮ್ಮ ವಿರುದ್ಧ ಪ್ರಸ್ತುತ ಇರುವ ಹಾಗೂ ಹಿಂದೆ ಇದ್ದಂತಹ ಕ್ರಿಮಿನಲ್/ಸಿವಿಲ್ ಪ್ರಕರಣಗಳು ಬಗ್ಗೆ ತಿಳಿಸಬೇಕು ಎಂಬ ಷರತ್ತು ನೀಡಲಾಗಿತ್ತು. ಆದರೆ, ಅರ್ಜಿದಾರರ ತಮ್ಮ ವಿರುದ್ಧ ಸಿವಿಲ್ ಮತ್ತು ಕ್ರಿಮಿನಲ್ ಸೇರಿ ಒಂಭತ್ತು ಪ್ರಕರಣಗಳು ದಾಖಲಾಗಿದ್ದರೂ, ಯಾವುದೇ ಪ್ರಕರಣ ಇಲ್ಲ ಎಂಬುದಾಗಿ ಉಲ್ಲೇಖಿಸಿದ್ದರು.

ಈ ನಡುವೆ ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ ಹಾಗೂ ಮೌಖಿಕ ಪರೀಕ್ಷೆಯಲ್ಲಿಯೂ ಅರ್ಜಿದಾರರು ಆಯ್ಕೆಯಾಗಿದ್ದರು. ಜಿಲ್ಲಾ ನ್ಯಾಯಾಧೀಶರಿಗೆ ಆಯ್ಕೆಯಾಗಿದ್ದ ಒಟ್ಟು ಮೂರು ಅಭ್ಯರ್ಥಿಗಳಲ್ಲಿ ಅರ್ಜಿದಾರರೂ ಒಬ್ಬರಾಗಿದ್ದರು.

ಈ ನಡುವೆ ಅನಾಮಧೇಯರಿಂದ ಹೈಕೋರ್ಟ್‌ ಗೆ ದೂರೊಂದು ಬಂದಿದ್ದು, ಅರ್ಜಿದಾರರ ವಿರುದ್ಧ ಕ್ರಿಮಿನಲ್ ಪ್ರಕರಣಗಳು ಇರುವ ಸಂಬಂಧ ಗೊತ್ತಾಗಿತ್ತು. ಈ ಕುರಿತಂತೆ ವಿವರಣೆ ನೀಡುವಂತೆ ಹೈಕೋರ್ಟ್ ಅರ್ಜಿದಾರರಿಗೆ ಷೋಕಾಸ್ ನೋಟಿಸ್ ಜಾರಿ ಮಾಡಿತ್ತು. ಇದಕ್ಕೆ ಅರ್ಜಿದಾರರು ಉತ್ತರಿಸಿದ್ದರು. ಜೊತೆಗೆ, ಮೌಖಿಕವಾಗಿ ವಿಚಾರಣೆಯನ್ನು ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಎಲ್ಲ ಪ್ರಕರಣಗಳು ಇತ್ಯರ್ಥವಾಗಿದೆ. ಕೇವಲ ಒಂದು ಪ್ರಕರಣ ಬಾಕಿಯಿದೆ. ಅದಕ್ಕೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಅಚಾರ್ತುಯದಿಂದ ತಪ್ಪಾಗಿದೆ ಎಂದು ವಿವರಣೆ ನೀಡಿದ್ದರು. ನಂತರ ಹೈಕೋರ್ಟ್ ರಿಜಿಸ್ಟ್ರಾರ್ ಅವರು ವಿಧಾನಸೌಧ ಪೊಲೀಸ್ ಠಾಣೆಗೆ ಅರ್ಜಿದಾರರ ವಿರುದ್ಧ ವಂಚನೆ ಆರೋಪದಲ್ಲಿ ದೂರು ದಾಖಲಿಸಿದ್ದರು.

ಪ್ರಕರಣ ಸಂಬಂಧ ತನಿಖೆ ನಡೆಸಿದ್ದ ಪೊಲೀಸರು ಅರ್ಜಿದಾರರ ವಿರುದ್ಧ ಆರೋಪ ಪಟ್ಟಿಯನ್ನು ದಾಖಲಿಸಿದ್ದರು. ಇದನ್ನು ಪರಿಗಣಿಸಿದ್ದ ವಿಚಾರಣಾಧೀನ ನ್ಯಾಯಾಲಯ ಅರ್ಜಿದಾರರ ವಿರುದ್ಧ ಸಂಜ್ಞೇ ತೆಗೆದುಕೊಂಡಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.

ಅರ್ಜಿದಾರರ ಪರವಾಗಿ ಹಿರಿಯ ವಕೀಲ ಕೆ ಎನ್‌ ಫಣೀಂದ್ರ ಮತ್ತು ವಕೀಲ ಅಕ್ಕಿ ಮಂಜುನಾಥ ಗೌಡ ವಾದಿಸಿದ್ದರು. ಪ್ರತಿವಾದಿಗಳ ಪರವಾಗಿ ಹಿರಿಯ ವಕೀಲ ಎಸ್‌ ಎಸ್‌ ನಾಗಾನಂದ್‌, ವಕೀಲರಾದ ಕೆ ಪಿ ಯಶೋಧಾ ಮತ್ತು ಎಸ್‌ ಕೃಷ್ಣ ವಾದಿಸಿದ್ದರು.