ಮನೆ ರಾಜ್ಯ ಬೆಳಗಾವಿ: ದಂಡು ಮಂಡಳಿ ಸಿಇಒ ಕರ್ನಲ್​ ಆನಂದ್​ ನಿಗೂಢ ಸಾವು

ಬೆಳಗಾವಿ: ದಂಡು ಮಂಡಳಿ ಸಿಇಒ ಕರ್ನಲ್​ ಆನಂದ್​ ನಿಗೂಢ ಸಾವು

0

ಬೆಳಗಾವಿ: ಬೆಳಗಾವಿಯ ದಂಡು ಮಂಡಳಿ ಸಿಇಒ ಕರ್ನಲ್ ಆನಂದ್​ (40) ಅವರು ಸರ್ಕಾರಿ ನಿವಾಸದಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಇಂದು ಬೆಳಗ್ಗೆ ಸಂಭವಿಸಿದೆ.

ಕಳೆದ ಒಂದೂವರೆ ವರ್ಷಗಳಿಂದ ದಂಡು ಮಂಡಳಿ ಸಿಇಒ ಆಗಿ ಸೇವೆ ಸಲ್ಲಿಸುತ್ತಿರುವ ಆನಂದ್​ ಅವರು ಇಂಡಿಯನ್ ಡಿಫೆನ್ಸ್ ಎಸ್ಟೇಟ್ ಸರ್ವಿಸ್ ​ಗೆ ಸೇರಿದ್ದರು.

ಮೃತ ಆನಂದ ತಮಿಳುನಾಡು ಮೂಲದವರಾಗಿದ್ದು, ವಿವಾಹ ಆಗಿಲ್ಲ, ತಂದೆ-ತಾಯಿ ತಮಿಳುನಾಡಿನಲ್ಲಿದ್ದಾರೆ. ಬೆಳಗಾವಿಯ ಸರ್ಕಾರಿ‌ ನಿವಾಸದಲ್ಲಿ ಒಬ್ಬರೆ ವಾಸವಾಗಿದ್ದರು. ಇಂದು ಬೆಳಗ್ಗೆ ಮನೆ ಬಾಗಿಲು ತೆರೆಯದೇ ಇದ್ದಾಗ ಅನುಮಾನಗೊಂಡ ಮನೆ ಸಿಬ್ಬಂದಿ ಕ್ಯಾಂಪ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಬಾಗಿಲು ಮುರಿದು ಒಳ ನುಗ್ಗಿದಾಗ ಸಿಇಒ ಶವವಾಗಿ ಪತ್ತೆಯಾಗಿದ್ದಾರೆ.

ಇತ್ತಿಚೆಗೆ ದಂಡು ಮಂಡಳಿಯ ಕಚೇರಿ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ಮಾಡಿದ್ದರು. ಇದರಿಂದಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ಸ್ಥಳಕ್ಕೆ ಎಂಎಲ್ಐಆರ್​ಸಿ ಕಮಾಂಡೆಂಟ್ ಬ್ರಿಗೇಡಿಯರ್ ಜೋಯದೀಪ ಮುಖರ್ಜಿ, ಡಿಸಿಪಿ ರೋಹನ್​ ಜಗದೀಶ್​ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಡಿಸಿಪಿ ರೋಹನ ಜಗದೀಶ, ಆನಂದ ಅವರ ಸರ್ಕಾರಿ ನಿವಾಸದಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಪೊಲೀಸ್ ಠಾಣೆಗೆ ಬಂದು ಮಾಹಿತಿ ನೀಡಿದ ಮೇಲೆ ತಪಾಸಣೆ ನಡೆಸಲಾಗುತ್ತಿದೆ. ಮೃತದೇಹವನ್ನು ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗುವುದು. ವೈದ್ಯಕೀಯ ವರದಿ ಬಂದ ಬಳಿಕವೇ ಸಾವು ಹೇಗಾಗಿದೆ ಎಂಬುದು ಸ್ಪಷ್ಟವಾಗಲಿದೆ ಎಂದು ತಿಳಿಸಿದರು.

ಕಳೆದ ಎರಡು ದಿನಗಳ ಹಿಂದೆ ಊಟ ತರಿಸಿಕೊಂಡಿದ್ದರು. ಶುಕ್ರವಾರ ಮನೆಯ ಬಾಗಿಲು ತೆರೆದಿರಲಿಲ್ಲ ಎಂದು ಇಲ್ಲಿ ಕೆಲಸ ಮಾಡುವ ಸಿಬ್ಬಂದಿ ಮಾಹಿತಿ ನೀಡಿದ ಮೇಲೆ ನಮ್ಮ ಸಿಬ್ಬಂದಿ ಬಂದು ಬಾಗಿಲು ತೆರೆದಾಗ ಆನಂದ್​ ಶವವಾಗಿ ಪತ್ತೆಯಾಗಿದ್ದಾರೆ. ಸ್ಥಳದಲ್ಲಿ ಯಾವುದೇ ಆತ್ಮಹತ್ಯೆ ಕುರಿತ ಲೇಟರ್ ಸಿಕ್ಕಿಲ್ಲ. ಆನಂದ್​ ಅವರ ಮೊಬೈಲ್ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು. ವೈಜ್ಞಾನಿಕ ಆಧಾರದ ಮೇಲೆ ತನಿಖೆ ನಡೆಸಲಾಗುವುದು. ತಮಿಳುನಾಡಿನಲ್ಲಿರುವ ಆನಂದ್​ ಅವರ ತಂದೆ-ತಾಯಿಗೆ ಮಾಹಿತಿ ತಿಳಿಸಿದ್ದೇವೆ ಎಂದರು.