ಮನೆ ರಾಜಕೀಯ 7 ದಶಕಗಳ ಕಾಫಿ ಬೆಳೆಗಾರರ ಸಮಸ್ಯೆಗೆ ಶಾಶ್ವತ ಪರಿಹಾರ: ಸಚಿವ ಕೆ.ಗೋಪಾಲಯ್ಯ

7 ದಶಕಗಳ ಕಾಫಿ ಬೆಳೆಗಾರರ ಸಮಸ್ಯೆಗೆ ಶಾಶ್ವತ ಪರಿಹಾರ: ಸಚಿವ ಕೆ.ಗೋಪಾಲಯ್ಯ

0

ಹಾಸನ(Hassan): ಕಳೆದ 70 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕಾಫಿ ಬೆಳೆಗಾರರ ಸಮಸ್ಯೆಗಳನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದ ನಮ್ಮ ಸರ್ಕಾರ ಬಗೆಹರಿಸಲು ಕ್ರಮ ಕೈಗೊಂಡಿದೆ ಎಂದು ಜಿಲ್ಲಾ ಉಸ್ತುವಾರಿ ಮತ್ತು ಅಬಕಾರಿ ಸಚಿವ ಕೆ.ಗೋಪಾಲಯ್ಯ ಹೇಳಿದ್ದಾರೆ.

ಹಾಸನ ಜಿಲ್ಲೆ ಆಲೂರು ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಮರಸು ಗ್ರಾಮದಲ್ಲಿ ಶ್ರೀಕಲ್ಲೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿಂದು ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ತಾನ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ಕಲ್ಲೇಶ್ವರ ಸ್ವಾಮಿ, ಶ್ರೀಗಣಪತಿ, ಶ್ರೀ ಕಾಲಭೈರವೇಶ್ವರ ಸ್ವಾಮಿ ದೇವಸ್ಥಾನ ದ್ವಾರಮಂಟಪ,ಗರುಡ ಕಂಬ ಉದ್ಘಾಟನೆ ಮತ್ತು ಪುನರ್ ಪ್ರತಿಷ್ಠಾಪನಾ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕಳೆದ ವರ್ಷ ಸಕಲೇಶಪುರ,ಬೇಲೂರು ಭಾಗದಲ್ಲಿ ಆನೆಗಳ ಹಾವಳಿಗೆ ಎಂಟತ್ತು ಜನರ ಅಸುನೀಗಿದ್ದಾರೆ. ಈ ಅನಾಹುತ ತಡೆಗೆ ನೂರು ಕೋಟಿ ರೂ ಅನುದಾನಬೇಕು ಎಂದು ಈ ಭಾಗದ ಜನಪ್ರತಿನಿಧಿಗಳು ಸಿಎಂ ಬಳಿ ಕೇಳಿಕೊಂಡಾಗ ಅವರು ಆನೆ ಹಾವಳಿಗೆ ಬ್ಯಾರಿಕೇಡ್ ನಿರ್ಮಾಣಕ್ಕೆ ಬಜೆಟ್‌ನಲ್ಲಿ ಅನುಮೋದನೆ ನೀಡಿದ್ದಾರೆ ಎಂದರು.

ಕೇರಳ ಮಾದರಿಯಲ್ಲಿ ಕಾಫಿ ಬೆಳೆಗಾರರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಈಗಾಗಲೇ ಕಂದಾಯ ಸಚಿವರು ಭರವಸೆ ನೀಡಿದ್ದಾರೆ. ಸರ್ಕಾರಿ ಭೂಮಿ ಒತ್ತುವರಿ ವಿಚಾರದಲ್ಲಿ ಈ ಭಾಗದ ಜನಪ್ರತಿನಿಧಿಗಳು ಮುಖ್ಯಮಂತ್ರಿಗಳು ಮತ್ತು ಕಂದಾಯ ಸಚಿವರ ಗಮನಕ್ಕೆ ತಂದಿದ್ದಾರೆ. ಇದರಲ್ಲಿ ಈ ಭಾಗದ ಶಾಸಕರಾದ ಎಚ್.ಕೆ.ಕುಮಾರಸ್ವಾಮಿ ಅವರ ಪಾತ್ರ ಕೂಡ ಇದೆ. ಈ ಹಿನ್ನೆಲೆಯಲ್ಲಿ ಕಂದಾಯ ಸಚಿವರು ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಮುಂದಾಗಿದ್ದು, ಇದೇ ಮೇ11 ರಂದು ಮಡಿಕೇರಿಯಲ್ಲಿ ಮತ್ತೊಂದು ಸಭೆ ನಡೆಸಲಿದ್ದಾರೆ ಎಂದರು.

ಕಂದಾಯ ಸಚಿವರ ನಿರ್ಧಾರದಿಂದ ಸಕಲೇಶಪುರ,ಆಲೂರು, ಬೇಲೂರು ಭಾಗದ ಸಾವಿರಾರು ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದ ಸಚಿವರು, ಮರಸು  ಗ್ರಾಮದ ಅಭಿವೃದ್ಧಿ ಕಾರ್ಯಗಳಿಗೆ ಎಲ್ಲ ಅಗತ್ಯ ಸಹಕಾರ ನೀಡಲಾಗುವುದು ಎಂದರು.