ಮನೆ ಕಾನೂನು ಅಭ್ಯರ್ಥಿ ಕ್ರಿಮಿನಲ್‌ ವಿವರ ನೀಡಲು ಪ್ರತ್ಯೇಕ ನಮೂನೆ ಒದಗಿಸಿ: ಹೈಕೋರ್ಟ್‌

ಅಭ್ಯರ್ಥಿ ಕ್ರಿಮಿನಲ್‌ ವಿವರ ನೀಡಲು ಪ್ರತ್ಯೇಕ ನಮೂನೆ ಒದಗಿಸಿ: ಹೈಕೋರ್ಟ್‌

0

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲೂ ಅಭ್ಯರ್ಥಿಗಳು ಕ್ರಿಮಿನಲ್ ಹಿನ್ನೆಲೆ ಬಹಿರಂಗಪಡಿಸಬೇಕು ಎಂಬ ಸುಪ್ರೀಂ ಕೋರ್ಟ್ ನಿರ್ದೇಶನ ಪಾಲನೆಗೆ ಅಭ್ಯರ್ಥಿಗಳು ಬಾಕಿಯಿರುವ ಕ್ರಿಮಿನಲ್ ಪ್ರಕರಣಗಳ ವಿವರ ನೀಡಲು ಪ್ರತ್ಯೇಕ ನಮೂನೆ ಒದಗಿಸಬೇಕು ಎಂದು ರಾಜ್ಯ ಚುನಾವಣಾ ಆಯೋಗ ಮತ್ತು ಇತರ ಸಂಸ್ಥೆಗಳಿಗೆ ಕರ್ನಾಟಕ ಹೈಕೋರ್ಟ್ ಈಚೆಗೆ ನಿರ್ದೇಶನ ನೀಡಿದೆ.

ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠ ವಜಾಗೊಳಿಸಿದೆ.

ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವಾಗ ಅವರ ವಿರುದ್ಧ ಯಾವುದಾದರೂ ಕ್ರಿಮಿನಲ್ ಪ್ರಕರಣ ಬಾಕಿ ಇದ್ದರೆ ಅದರ ವಿವರಗಳನ್ನು ಚುನಾವಣಾ ಆಯೋಗಕ್ಕೆ ಒದಗಿಸಬೇಕು ಮತ್ತು ಆ ಮಾಹಿತಿಯನ್ನು ಟಿಕೆಟ್ ನೀಡುವ ರಾಜಕೀಯ ಪಕ್ಷಕ್ಕೂ ಒದಗಿಸಬೇಕು. ಆಯಾ ಪಕ್ಷದ ವೆಬ್‌ ಸೈಟಿನಲ್ಲೂ ಅಭ್ಯರ್ಥಿಗಳ ಕ್ರಿಮಿನಲ್ ಹಿನ್ನೆಲೆ ತಿಳಿಸಬೇಕು. ಅಭ್ಯರ್ಥಿಗಳು ಪತ್ರಿಕೆಗಳಲ್ಲೂ ಕ್ರಿಮಿನಲ್ ಹಿನ್ನೆಲೆ ಪ್ರಕಟಿಸಬೇಕು ಎಂದು ರಾಜ್ಯ ಚುನಾವಣಾ ಆಯೋಗಕ್ಕೆ ಪೀಠ ಸೂಚನೆ ನೀಡಿದೆ.

ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು ತಮ್ಮ ವಿರುದ್ಧ ಬಾಕಿ ಇರುವ ಕ್ರಿಮಿನಲ್ ಪ್ರಕರಣಗಳ ವಿವರಗಳನ್ನು ರಾಜ್ಯ ಚುನಾವಣಾ ಆಯೋಗ ಮತ್ತು ಇತರ ಸಂಸ್ಥೆಗಳಿಗೆ ಒದಗಿಸಬೇಕು. ಆ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಜಾರಿಗೊಳಿಸಬೇಕು ಮತ್ತು ರಾಜ್ಯದ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ  ನಾಮಪತ್ರ ಸಲ್ಲಿಸುವ ವೇಳೆ ಕ್ರಿಮಿನಲ್ ಪ್ರಕರಣಗಳ ಉಲ್ಲೇಖಕ್ಕೆ ಪ್ರತ್ಯೇಕ ನಮೂನೆಯನ್ನು ಒದಗಿಸಬೇಕು ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

ಸುಪ್ರೀಂ ಕೋರ್ಟ್ 2018ರಲ್ಲಿ ಪಬ್ಲಿಕ್‌ ಇಂಟೆರೆಸ್ಟ್‌ ಫೌಂಡೇಷನ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಅಭ್ಯರ್ಥಿಗಳ ಕ್ರಿಮಿನಲ್ ವಿವರ ಘೋಷಿಸುವ ಸಂಬಂಧದ ಹಲವು ನಿರ್ದೇಶನಗಳನ್ನು ಉಲ್ಲೇಖಿಸಿದೆ. ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ವ್ಯಾಪಕ ಪ್ರಚಾರ ನೀಡುವ ಅಗತ್ಯವಿದೆ ಎಂದು ಪೀಠ ಆದೇಶಿಸಿದೆ.

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಹರಿದ್ರಾವತಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಎಚ್‌ ವಿ ಅಶೋಕ್ ಆಯ್ಕೆಯಾಗಿದ್ದರು. ಆದರೆ, ಅವರು ಕ್ರಿಮಿನಲ್ ಹಿನ್ನೆಲೆ ಬಹಿರಂಗಪಡಿಸದ ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾ ಆಯೋಗ ಅವರ ಆಯ್ಕೆಯನ್ನು ರದ್ದುಗೊಳಿಸಿತ್ತು. ಸಿವಿಲ್ ನ್ಯಾಯಾಲಯವು ಆ ಆದೇಶವನ್ನು ಎತ್ತಿ ಹಿಡಿದಿತ್ತು. ಅದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ್ದ ಏಕಸದಸ್ಯ ಪೀಠ ಅಸಿಂಧು ಆದೇಶವನ್ನು ಊರ್ಜಿತಗೊಳಿಸಿತ್ತು. ಹೀಗಾಗಿ, ಅಶೋಕ್ ಹೈಕೋರ್ಟ್‌ ನ ವಿಭಾಗೀಯ ಪೀಠದ ಮೊರೆ ಹೋಗಿದ್ದರು.