ಮನೆ ರಾಜ್ಯ ಬಿ.ಆರ್.ಪಾಟೀಲ ಪತ್ರದ ಕುರಿತು ಅಂತಿಮ ತೀರ್ಮಾನ ಸಿಎಂ ತೆಗೆದುಕೊಳ್ಳಲಿದ್ದಾರೆ: ಕೃಷ್ಣ ಭೈರೇಗೌಡ

ಬಿ.ಆರ್.ಪಾಟೀಲ ಪತ್ರದ ಕುರಿತು ಅಂತಿಮ ತೀರ್ಮಾನ ಸಿಎಂ ತೆಗೆದುಕೊಳ್ಳಲಿದ್ದಾರೆ: ಕೃಷ್ಣ ಭೈರೇಗೌಡ

0

ವಿಜಯಪುರ: ಸಚಿವರ ಹೇಳಿಕೆಯಿಂದ ನನಗೆ ಅಪಮಾನವಾಗಿದೆ. ನನ್ನ ಮೇಲಿನ ಆರೋಪದ ಕುರಿತು ತನಿಖೆಯಾಗಿ, ಆರೋಪ ಮುಕ್ತವಾಗುವವರೆಗೂ ಸದನಕ್ಕೆ ಬರುವುದಿಲ್ಲ ಎಂದು ಕಾಂಗ್ರೆಸ ಹಿರಿಯ ಶಾಸಕ ಬಿ.ಆರ್.ಪಾಟೀಲ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಕುರಿತು ಮುಖ್ಯಮಂತ್ರಿಗಳೇ ಮುಂದಿನ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಪ್ರತಿಕ್ರಿಯಿಸಿದ್ದಾರೆ.

ಬುಧವಾರ ಜಿಲ್ಲೆಯ ಬರ ಪರಿಸ್ಥಿತಿ ಹಾಗೂ ಪ್ರಗತಿ ಪರಿಶೀಲನೆ ಸಭೆಗೆ ಆಗಮಿಸಿದಾಗ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮಳೆ ಇಲ್ಲದೇ ಭೀಕರ ಬರ ಆವರಿಸಿದೆ. ಕಂದಾಯ ಇಲಾಖೆಯಲ್ಲಿ‌ ಜನರ ಹತ್ತು ಹಲವು ಸಮಸ್ಯಗಳಿವೆ. ಪ್ರತಿ ಜಿಲ್ಲೆಗೂ ಹೋಗಿ ಆಯಾ ಜಿಲ್ಲೆಯ ಸಮಸ್ಯೆ ಆಲಿಸಿ, ಪರಿಹಾರ ಕಾರ್ಯಕ್ಕೆ ಮುಂದಾಗಬೇಕಿದೆ. ಸದ್ಯ ವಿಜಯಪುರ ಜಿಲ್ಲೆಯ ಜನರ ಸಮಸ್ಯೆ ಇದ್ದರೆ ಮಾತ್ರ ತಮ್ಮೊಂದಿಗೆ ಚರ್ಚಿಸುತ್ತೇನೆ. ಅನಗತ್ಯವಾಗಿ ವಿವಾದ ಸೃಷ್ಟಿಸಲು ನಾನು ಇಲ್ಲಿಗೆ ಬಂದಿಲ್ಲ ಎಂದು ಪತ್ರಕರ್ತರು ಕೇಳಿದ ಬಿ.ಆರ್.ಪಾಟೀಲ ಪತ್ರದ ಕುರಿತಾದ ಪ್ರಶ್ನೆಗಳ ಸುರಿಮಳೆಗೆ ಉತ್ತರಿಸಲು ನಿರಾಕರಿಸಿದರು.

ಈ ಕುರಿತು ನಾನು ಸದನದಲ್ಲಿ ಉತ್ತರಿಸಿರುವ ವಿಷಯದ ಕುರಿತು ಮಾಹಿತಿ ನೀಡುತ್ತೇನೆ. ಸದನದಲ್ಲಿ ಏನು ಹೇಳಿದ್ದೇನೆ, ಏನು ಬಿಟ್ಟಿದ್ದೇನೆ ಎಂಬುದನ್ನು ನೀವೇ ತೀರ್ಮಾನಿಸಿ ಎಂದು ಪತ್ರಕರ್ತರಿಗೆ ಹೇಳಿದ ಕಂದಾಯ ಸಚಿವರು, ಅಂತಿಮವಾಗಿ ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ತೀರ್ಮಾನಿಸಲಿದ್ದಾರೆ ಎಂದರು.

ಸಚಿವರ ಹೇಳಿಕೆಯಿಂದ ನನಗೆ ಅವಮಾನವಾಗಿದೆ ಎಂದು ಶಾಸಕ ಬಿ.ಆರ್.ಪಾಟೀಲ ಹೇಳಿರುವ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡಲಾರೆ. ಸದ್ಯ ವಿಜಯಪುರ ಜಿಲ್ಲೆಯ ಪ್ರಗತಿ ಪರಿಶೀಲನಾ ಪ್ರವಾಸದಲ್ಲಿರುವ ನಾನು, ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತ್ರ ಗಮನ ಹರಿಸುತ್ತೇನೆ ಎಂದರು.

ಭೂ ಸೇನಾ ನಿಗಮದಲ್ಲಿ ಹಣ ಇಲ್ಲ ಎಂಬ ವಿಚಾರದ ಕುರಿತಾಗಿ ಸದನದಲ್ಲಿನ ಮಾಹಿತಿಯ ಪ್ರತಿಯನ್ನೇ ಪತ್ರಕರ್ತರಿಗೆ ನೀಡುತ್ತೇನೆ, ನೀವೆ ನೋಡಿ ತಿಳಿಯಿರಿ ಎಂದರು.

ಇಷ್ಟಕ್ಕೂ ಸದರಿ ಇಲಾಖೆ ನನಗೆ ಬರುವುದೇ ಇಲ್ಲ. ಶಾಸಕ ಬಿ.ಆರ್. ಪಾಟೀಲ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ತನಿಖೆ ಮಾಡುವುದು ಬಿಡುವುದು ಆ ಇಲಾಖೆಗೆ ಮತ್ತು ಮುಖ್ಯಮಂತ್ರಿಗಳಿಗೆ ಬಿಟ್ಟದ್ದು. ನನಗೆ ಸಂಬಂಧ ಇಲ್ಲದ ಇಲಾಖೆ ತನಿಖೆ ಕುರಿತು ನಾನು ಹೇಳಿಕೆ ನೀಡುವುದು ಸರಿಯಲ್ಲ ಎಂದರು.