ಮನೆ ರಾಜ್ಯ ಪಿಎಸ್ಐ ನೇಮಕಾತಿ ಹಗರಣ: ಮುಖ್ಯೋಪಾಧ್ಯಾಯ ಕಾಶಿನಾಥ್‌ ಪೊಲೀಸರಿಗೆ ಶರಣು

ಪಿಎಸ್ಐ ನೇಮಕಾತಿ ಹಗರಣ: ಮುಖ್ಯೋಪಾಧ್ಯಾಯ ಕಾಶಿನಾಥ್‌ ಪೊಲೀಸರಿಗೆ ಶರಣು

0

ಕಲಬುರಗಿ (Kallaburgi)- ಪಿಎಸ್ಐ ಪರೀಕ್ಷೆಯ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಪ್ರಮುಖ ಆರೋಪಿ ಜ್ಞಾನಜ್ಯೋತಿ ಶಾಲೆಯ ಮುಖ್ಯೋಪಾಧ್ಯಾಯ ಕಾಶಿನಾಥ್ ಪೊಲೀಸರಿಗೆ ಶರಣಾಗಿದ್ದಾರೆ.

ಕಳೆದ 22 ದಿನಗಳಿಂದ ತಲೆಮರೆಸಿಕೊಂಡಿದ್ದ ಕಾಶಿನಾಥ್‌ ಸಿಐಡಿ ತಂಡದ ಎದುರಿಗೆ ಶರಣಾಗಿದ್ದಾರೆ. ಇದರಿಂದ ಸಂಖ್ಯೆ 26ಕ್ಕೆ ಏರಿದೆ. ಆ ಮೂಲಕ ಶಾಲೆಯಲ್ಲಿನ ಅಕ್ರಮಕ್ಕೆ ಸಂಬಂಧಿಸಿದ ಬಹುತೇಕರು ಈಗ ಬಂಧನವಾದಂತಾಗಿದೆ.

ಮೂಲಗಳ ಪ್ರಕಾರ ಒಎಂಆರ್ ಶೀಟ್ ತಿದ್ದುಪಡಿ ಹಾಗೂ ಬ್ಲೂಟೂತ್ ಬಳಕೆಯಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ಕಾಶಿನಾಥ್ ಪ್ರಮುಖ ಪಾತ್ರ ವಹಿಸಿದ್ದ ಎನ್ನಲಾಗಿದೆ. ಜ್ಞಾನಜ್ಯೋತಿ ಶಾಲೆಯ ಮುಖ್ಯಸ್ಥೆ ಹಾಗೂ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಅಕ್ರಮದಲ್ಲಿ ಶಾಲೆಯ ಮುಖ್ಯ ಗುರು ಕಾಶಿನಾಥ್ ‌ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಸಿಐಡಿ ತಂಡದ ಎದುರು ಹೇಳಿದ್ದರಿಂದ ಕಾಶಿನಾಥ್ ಶರಣಾಗತಿ ಅತ್ಯಂತ ಮಹತ್ವ ಪಾತ್ರ ವಹಿಸಿದೆ. 

ನಿನ್ನೆ ಅಂದರೆ ಭಾನುವಾರ ಬೆಳಗ್ಗೆ ಪ್ರಕರಣದ ಮತ್ತೋರ್ವ ಆರೋಪಿ ನೀರಾವರಿ ಇಲಾಖೆಯ ಸಹಾಯಕ ಎಂಜಿನಿಯರ್‌ ಮಂಜುನಾಥ ಮೇಳಕುಂದಿ ಸಿಐಡಿ ಮುಂದೆ ಶರಣಾಗಿದ್ದರು. ಸಿಐಡಿ ಮೂಲಗಳ ಪ್ರಕಾರ, ಮಂಜುನಾಥ್ ಅವರು ಜ್ಞಾನಜ್ಯೋತಿ ಸಂಸ್ಥೆಯನ್ನು ಪಿಎಸ್‌ಐ ಸಿಇಟಿ ಪರೀಕ್ಷಾ ಕೇಂದ್ರವಾಗಿ ಪಡೆಯಲು ಅಭ್ಯರ್ಥಿಗಳಿಗೆ ಸಹಾಯ ಮಾಡುವ ಬಗ್ಗೆ ಕಾಶಿನಾಥ್ ಅವರೊಂದಿಗೆ ವ್ಯವಹರಿಸುತ್ತಿದ್ದರು ಮತ್ತು ಉತ್ತಮ ಅಂಕಗಳನ್ನು ಪಡೆಯಲು ಸಹಾಯ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ. ಪ್ರತಿಯಾಗಿ ಕಾಶಿನಾಥ್ ಅವರು ಜ್ಞಾನ ಗಂಗಾ ಆಂಗ್ಲ ಮಾಧ್ಯಮ ಶಾಲೆಯ ಕಾರ್ಯದರ್ಶಿ ದಿವ್ಯಾ ಹಾಗರಗಿ ಅವರಿಗೆ ಒಪ್ಪಂದದ ಬಗ್ಗೆ ವಿವರಿಸಿ ಒಪ್ಪಿಗೆ ಪಡೆದ ಹಣವನ್ನು ನೀಡುತ್ತಿದ್ದರು. ದಿವ್ಯಾಳ ವಿಚಾರಣೆ ವೇಳೆ ಕಾಶಿನಾಥ್ ಮಧ್ಯವರ್ತಿಗಳೊಂದಿಗೆ ವ್ಯವಹರಿಸುತ್ತಿದ್ದ ವಿಷಯಗಳು ಬಹಿರಂಗವಾಗಿದ್ದವು ಎಂದು ವರದಿಯಾಗಿದೆ.

ಈ ನಡುವೆ ಸಿಐಡಿ ಅಧಿಕಾರಿಗಳು ಭಾನುವಾರ ಸಂಜೆ ಮತ್ತೋರ್ವ ಆರೋಪಿ ಶ್ರೀಧರ್ ಪವಾರ್‌ನನ್ನು ಬಂಧಿಸಿದ್ದು, ಶ್ರೀಧರ್ ಪಿಎಸ್ಐ ಸಿಇಟಿಯಲ್ಲಿ ನಡೆದಿರುವ ಹಗರಣವನ್ನು ಬಯಲಿಗೆಳೆದ ವ್ಯಕ್ತಿ ಎನ್ನಲಾಗಿದೆ. ಪಿಎಸ್‌ಐ ಸಿಇಟಿಯಲ್ಲಿ ಸಹಾಯ ಪಡೆಯಲು ವೀರೇಶ್‌ಗೆ (ಪೊಲೀಸರು ಬಂಧಿಸಿದ ಮೊದಲ ವ್ಯಕ್ತಿ) ಮಧ್ಯವರ್ತಿಗಳನ್ನು ಪಡೆಯಲು ಶ್ರೀಧರ್ ಸಹಾಯ ಮಾಡಿದರು ಎಂದು ಮೂಲಗಳು ತಿಳಿಸಿವೆ.