ಹಾಸನ: ಶಾಲಾ ಶಿಕ್ಷಕಿ ಅರ್ಪಿತಾ ಅಪಹರಣ ಪ್ರಕರಣ ಸುಖಾಂತ್ಯ ಕಂಡಿದ್ದು, ಘಟನೆ ನಡೆದ ಏಳೇ ಗಂಟೆಗಳಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಶಿಕ್ಷಕಿ ಅರ್ಪಿತಾ ಅವರಿಗೆ ಆರೋಪಿ ರಾಮು ಮಾವನಾಗಬೇಕು. ಹೀಗಾಗಿ ಆರೋಪಿ ರಾಮು ಮತ್ತು ಆತನ ಪೋಷಕರು 15 ದಿನಗಳ ಹಿಂದೆ ಮದುವೆ ಪ್ರಸ್ತಾಪದೊಂದಿಗೆ ಅರ್ಪಿತಾ ಮನೆಗೆ ಬಂದಿದ್ದರು. ಆದರೆ ಅರ್ಪಿತಾ ಮತ್ತು ಆಕೆಯ ಪೋಷಕರು ಇದಕ್ಕೆ ಒಪ್ಪಿರಲಿಲ್ಲ.
ಇದರಿಂದ ಕೋಪಗೊಂಡ ಆರೋಪಿ ರಾಮು ಹೇಗಾದರು ಸರಿ ಅರ್ಪಿತಾಳನ್ನು ಮದುವೆಯಾಗಲೇ ಬೇಕೆಂದು ಗುರುವಾರ (ನ.30) ಬೆಳಿಗ್ಗೆ 8 ಗಂಟೆಗೆ 5 ನಿಮಿಷಕ್ಕೆ ಶಾಲೆಗೆ ಹೋಗುತ್ತಿದ್ದ ಅರ್ಪಿತಾರನ್ನು ಇನ್ನೋವಾ ಕಾರ್ ಅಪಹರಣ ಮಾಡಿದ್ದನು. ಆರೋಪಿ ರಾಮು ಕಾರಿನಲ್ಲೇ ಯುವತಿಯ ಮನವೊಲಿಸಿ ತಾಳಿಕಟ್ಟಲು ಯತ್ನಿಸಿದ್ದಾನೆ. ಆದರೆ ಯುವತಿ ಇದಕ್ಕೆ ಒಪ್ಪಲಿಲ್ಲ.
ಇತ್ತ ಅಪಹರಣ ವಿಚಾರ ತಿಳಿಯುತ್ತಿದ್ದಂತೆ ಆಕ್ಟಿವ್ ಆದ ಹಾಸನ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದರು. ಆರೋಪಿಗಳು ದಕ್ಷಿಣ ಕನ್ನಡ ಜಿಲ್ಲೆಯತ್ತ ಸಾಗುತ್ತಿದ್ದಾರೆ ಎಂಬ ವಿಚಾರ ಪೊಲೀಸರಿಗೆ ತಿಳಿಯುತ್ತದೆ. ಕೂಡಲೆ ಪೊಲೀಸರು ಆರೋಪಿಗಳನ್ನು ಬೆನ್ನು ಹತ್ತುತ್ತಾರೆ. ಪೊಲೀಸರು ಬೆನ್ನ ಹತ್ತುತ್ತಲೇ ಕಾರಿನಲ್ಲಿ ರಾಮುನನ್ನು ಮಾತ್ರ ಬಿಟ್ಟು ಉಳಿದವರು ಎಸ್ಕೇಪ್ ಆಗುತ್ತಾರೆ.
ಕೊನೆಗೆ ಪೊಲೀಸರು ಸಂಜೆ ಐದು ಗಂಟೆ ಸುಮಾರಿಗೆ ದಕ್ಷಿಣ ಕನ್ನಡದ ನೆಲ್ಯಾಡಿ ಬಳಿ ಆರೋಪಿ ರಾಮುನನ್ನು ಬಂಧಿಸಿದ್ದಾರೆ. ಪೊಲೀಸರು ರಾತ್ರಿ ಅರ್ಪಿತಾರನ್ನು ಸುರಕ್ಷಿತವಾಗಿ ಪೋಷಕರಿಗೆ ಒಪ್ಪಿಸಿದ್ದಾರೆ.
ಹಾಸನ ನಗರ ಪೊಲೀಸರ ಕಾರ್ಯಾಚರಣೆಗೆ ಕುಟುಂಬ ಸದಸ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.