ಮನೆ ರಾಜ್ಯ ಕುರಿ ಮೇಯಿಸುವ ವೇಳೆ ರೈತನ ಮೇಲೆ ಚಿರತೆ ದಾಳಿ: ಪ್ರಾಣಾಪಾಯದಿಂದ ಪಾರಾದ ರೈತ

ಕುರಿ ಮೇಯಿಸುವ ವೇಳೆ ರೈತನ ಮೇಲೆ ಚಿರತೆ ದಾಳಿ: ಪ್ರಾಣಾಪಾಯದಿಂದ ಪಾರಾದ ರೈತ

0

ಮದ್ದೂರು:ಜಮೀನಿನಲ್ಲಿ ಕುರಿ ಮೇಯಿಸುವ ವೇಳೆ ರೈತನ ಮೇಲೆ ಚಿರತೆಯೊಂದು ದಾಳಿ ಮಾಡಿದ್ದು, ರೈತ ಪ್ರಕಾಶ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮದ್ದೂರು ತಾಲೂಕಿನ ಆತಗೂರು ಹೋಬಳಿಯ ಅಡಗನಹಳ್ಳಿ ಗ್ರಾಮದ ರೈತ ಪ್ರಕಾಶ್ (40) ದಾಳಿಗೆ ಒಳಗಾಗುವ ವ್ಯಕ್ತಿಯಾಗಿದ್ದಾರೆ.

ರೈತ ಪ್ರಕಾಶ್ ಶುಕ್ರವಾರ ಬೆಳಿಗ್ಗೆ ತಮ್ಮ ಜಮೀನಿನಲ್ಲಿ ಕುರಿ ಮೇಯಿಸುವ ವೇಳೆ ಚಿರತೆಯೊಂದು ಕುರಿ ಮಂದೆ ಮೇಲೆ ಏಕಾಏಕಿ ದಾಳಿ ಮಾಡಿ ಕುರಿ ಮರಿಯೊಂದನ್ನು ಎತ್ತೋಯ್ಯುವ ವೇಳೆ ಅದನ್ನು ಬಿಡಿಸಿಕೊಳ್ಳಲು ರೈತ ಪ್ರಕಾಶ್ ಯತ್ನಿಸಿದ್ದಾರೆ. ಆದರೆ, ಚಿರತೆ ಕುರಿ ಮರಿ ಬಿಟ್ಟು ರೈತ ಪ್ರಕಾಶ್ ಮೇಲೆ ದಾಳಿ ಮಾಡಿ ಕಿವಿ ಮತ್ತು ದೇಹದ ವಿವಿಧ ಭಾಗಗಳಲ್ಲಿ ಚಿರತೆ ಗಾಯಗೊಳಿಸಿ ಪರಾರಿಯಾಗಿದ್ದು, ರೈತ ಪ್ರಕಾಶ್ ಗೆ ಕೆಸ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನು ಮದ್ದೂರು ತಾಲೂಕಿನಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು, ಪ್ರತಿನಿತ್ಯ ಒಂದಿಲ್ಲೊಂದು ಘಟನೆಗಳು ಸಂಭವಿಸುತ್ತಿವೆ. ಇಷ್ಟಾದರೂ ಚಿರತೆಗಳ ಸೆರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮ ವಹಿಸುತ್ತಿಲ್ಲ. ಹೀಗಾಗಿ ಚಿರತೆಗಳ ಸೆರೆಗೆ ಆದಷ್ಟು ಬೇಗ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ ಎಂದು ರೈತ ಮುಖಂಡ ಪ್ರದೀಪ್ ಎಚ್ಚರಿಕೆ ನೀಡಿದರು.

ಈಗಾಗಲೇ ಆತಗೂರು ಹೋಬಳಿಯ ಹೂತಗೆರೆ, ಕೆಸ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು, ಸೆರೆಗೆ ಮೂರು ಬೋನುಗಳನ್ನು ಇಡಲಾಗಿದ್ದು, ಮುಂದಿನ ದಿನಗಳಲ್ಲಿ ಚಿರತೆ ಸೆರೆಗೆ ಮತ್ತಷ್ಟು ಬೋನುಗಳನ್ನು ಇಟ್ಟು ಚಿರತೆಗಳನ್ನು ಕಾಡಿಗೆ ಬಿಡಲಾಗುವುದು ಎಂದು ವಲಯ ಅರಣ್ಯಾಧಿಕಾರಿ ಗವಿಯಪ್ಪ ತಿಳಿಸಿದರು.