ಮನೆ ಸ್ಥಳೀಯ ಹೆಚ್ ಐವಿ ಕುರಿತು ಅರಿವಿರಬೇಕು, ಕೇಳರಿಮೆಯಲ್ಲ: ಟಿ.ಎಸ್ ಶ್ರೀವತ್ಸ

ಹೆಚ್ ಐವಿ ಕುರಿತು ಅರಿವಿರಬೇಕು, ಕೇಳರಿಮೆಯಲ್ಲ: ಟಿ.ಎಸ್ ಶ್ರೀವತ್ಸ

0

ಮೈಸೂರು: ಎಚ್ ಐವಿ ಸೋಂಕಿನ ಬಗ್ಗೆ ಅರಿವು, ಮುಂಜಾಗ್ರತೆಯಿರಬೇಕೇ ಹೊರತು ಕೀಳರಿಮೆಯಲ್ಲ ಎಂದು ಕೃಷ್ಣರಾಜ ಕ್ಷೇತ್ರದ ಶಾಸಕರಾದ ಟಿ ಎಸ್ ಶ್ರೀವತ್ಸ ಅವರು ತಿಳಿಸಿದರು.

ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮೈಸೂರು, ಕರ್ನಾಟಕ ರಾಜ್ಯ ಏಡ್ಸ್ ಪ್ರವೆನ್ಷನ್ ಸೊಸೈಟಿ ಬೆಂಗಳೂರು, ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ ಮೈಸೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮೈಸೂರು, ಲಯನ್ಸ್ ಬ್ಲಡ್ ಸೆಂಟರ್ ಜೀವಧಾರ, ಆಶಾ ಕಿರಣ, ಆನಂದ ಜ್ಯೋತಿ ಪಾಸಿಟೀವ್ ನೆಟ್ವರ್ಕ್, ಆಶೋದಯ ಸಮಿತಿ, ಎಸ್‌ವಿವೈಎಂ ಮೈಸೂರು, ಎಲ್ ಡಬ್ಲ್ಯೂಎಸ್‌ ಗಾರ್ಡ್ ಸಂಸ್ಥೆ, ಮಹಾನ್ ಐ ಎಂ ಎ ಮೈಸೂರು ಹಾಗೂ ಇತರೆ ಸ್ವಯಂ ಸೇವಾ ಸಂಸ್ಥೆಗಳ ಸಹಕಾರದೊಂದಿಗೆ ಜೆಕೆ ಗ್ರೌಂಡ್ ನ ಅಮೃತ ಮಹೋತ್ಸವ ಭವನದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಏಡ್ಸ್ ದಿನ-2023 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಈ ಹಿಂದೆ ಸಮಾಜದೊಳಗೆ ಹೆಚ್ಐವಿ ಸೋಂಕಿತರನ್ನು ನೋಡುವ ರೀತಿ ಹಾಗೂ ಅವರ ಜೊತೆ ವರ್ತಿಸುವ ರೀತಿ ಬೇರೆಯೇ ಆಗಿತ್ತು. ಕಾಲ ಕಳೆದಂತೆ ಸಮಾಜದಲ್ಲಿ ಅರಿವು ಹೆಚ್ಚಾಗಿ, ಹೆಚ್ಐವಿ ಸೋಂಕಿತರನ್ನು ಸಾಮಾನ್ಯರಂತೆ ಪರಿಗಣಿಸಲಾಗುತ್ತಿರುವುದು ಸಮಾಜದ ಉತ್ತಮ ಬೆಳವಣಿಗೆಯಾಗಿದೆ. ಹಿಂದಿನ ದಿನಗಳಲ್ಲಿ ಹೆಚ್ಚಾಗಿ ಸೋಂಕಿಗೆ ಒಳಗಾದರೆ ಕೀಳರಿಮೆ ಹಾಗೂ ಭಯದಿಂದ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಇತ್ತು. ಆದರೆ ಸರ್ಕಾರ ಹಾಗೂ ಇತರೆ ಸ್ವಯಂಸೇವಾ ಸಂಸ್ಥೆಗಳ ಅರಿವಿನ ಕಾರ್ಯಕ್ರಮಗಳು, ಆತ್ಮಸ್ಥೈರ್ಯ ತುಂಬುವ ಚಟುವಟಿಕೆಗಳು ಎಚ್ಐವಿ ಸೋಂಕಿಗೆ ಒಳಗಾದ ರೋಗಿಗಳ ಮನಸ್ಥಿತಿಯನ್ನು ಬದಲಿಸಿವೆ ಎಂದರು.

ಎಷ್ಟೋ ಬಾರಿ ಅವರದಲ್ಲದ ತಪ್ಪಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಹೆಚ್ಐವಿ ಸೋಂಕಿಗೆ ಒಳಗಾಗಿರುತ್ತಾರೆ. ಅಂತಹ ಮಕ್ಕಳಿಗೆ ಆತ್ಮಸ್ಥೈರ್ಯ ತುಂಬುವಲ್ಲಿ ಕೆಲಸ ನಿರ್ವಹಿಸುತ್ತಿರುವ ಎಲ್ಲಾ ಖಾಸಗಿ ಹಾಗೂ ಸ್ವಯಂಸೇವಾ ಸಂಸ್ಥೆಗಳನ್ನು ನಾವು ಸ್ಮರಿಸಲೇಬೇಕು. ಕೋವಿಡ್ ಸಂದರ್ಭದಲ್ಲಿ ತಮ್ಮ ಪ್ರಾಣವನ್ನು ಲೆಕ್ಕಿಸದೆ ಆರೋಗ್ಯ ಇಲಾಖೆ ಕೆಲಸ ಮಾಡಿದೆ. ಎಚ್ಐವಿ ಸೋಂಕಿತರು, ಅವರ ಪರವಾಗಿ ಕೆಲಸ ಮಾಡುವ ಸ್ವಯಂಸೇವಕರು ಸ್ವಯಂ ಸೇವಾ ಸಂಸ್ಥೆಗಳ ಮನವಿಗಳೇನಾದರೂ ಇದ್ದಲ್ಲಿ ಅವುಗಳನ್ನು ಸಲ್ಲಿಸಿ, ಅದನ್ನು ಸರ್ಕಾರದ ಗಮನಕ್ಕೆ ತರುವ ಕೆಲಸ ನಾನು ಮಾಡುತ್ತೇನೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಕೆ.ಎಮ್ ಗಾಯತ್ರಿ ಅವರು ಮಾತನಾಡಿ, ಡಿಸೆಂಬರ್ 1ರಂದು ವಿಶ್ವ ಏಡ್ಸ್ ದಿನಾಚರಣೆಯನ್ನು ಆಚರಣೆ ಮಾಡಲಾಗುತ್ತದೆ. 1986ರಲ್ಲಿ ಕಾಣಿಸಿಕೊಂಡ ಈ ಸೋಂಕಿನ ಬಗ್ಗೆ ಮುಕ್ತವಾಗಿ ಮಾತನಾಡಲು ಎಲ್ಲರೂ ಸಂಕೋಚ ಪಡುತ್ತಿದ್ದರು. ಹಲವಾರು ಅರಿವಿನ ಕಾರ್ಯಕ್ರಮಗಳು ಕಾರ್ಯಗಾರಗಳ ಪರಿಣಾಮದಿಂದಾಗಿ ಈ ದಿನ ಸೋಂಕಿನ ಕುರಿತು, ಸೋಂಕಿತರ ಪರವಾಗಿ ಮುಕ್ತವಾಗಿ ಚರ್ಚಿಸಲು ಸಾಧ್ಯವಾಗಿದೆ ಎಂದರು.

ವೈದ್ಯರು ಮಾತ್ರ ರೋಗಿಗಳ ಶುಶ್ರೂಷೆ ಮಾಡುವುದಲ್ಲ, ರೋಗಿಗಳಲ್ಲಿ ಸಮುದಾಯದವರು ಸಹ ಆತ್ಮವಿಶ್ವಾಸ ಹೆಚ್ಚಿಸಬೇಕು. ಈ ನಿಟ್ಟಿನಲ್ಲಿ ‘ಸಮುದಾಯಗಳು ಮುನ್ನಡೆಸಲಿ’ ಎಂಬ ಘೋಷ ವಾಕ್ಯದೊಂದಿಗೆ ಈ ಬಾರಿಯ ವರ್ಷಾಚರಣೆಯನ್ನು ಮಾಡಲಾಗುತ್ತಿದೆ.  ಈ ಕಾಯಿಲೆಯನ್ನು ಸಂಪೂರ್ಣವಾಗಿ ವಾಸಿ ಮಾಡಲು ಸಾಧ್ಯವಾಗದಿದ್ದರೂ, ಉತ್ತಮ ರೀತಿಯ ಜೀವನ ನಿರ್ವಹಣೆ ಹಾಗೂ ಸರಿಯಾಗಿ ಔಷಧಿ ತೆಗೆದುಕೊಳ್ಳುವುದರಿಂದ ಜನಸಾಮಾನ್ಯರಂತೆ  ಬದುಕುವ ಅವಕಾಶಗಳಿವೆ. ಸೋಂಕಿನ ಗೌಪ್ಯತೆಯನ್ನ ಕಾಪಾಡುವುದರಿಂದ ಹಿಡಿದು ಸೋಂಕಿಗೆ ಒಳಗಾದ ರೋಗಿಯ ಕೌನ್ಸಲಿಂಗ್ ಹಾಗೂ ಕಾಳಜಿ ಮಾಡುವ ಎಲ್ಲಾ ಸಿಬ್ಬಂದಿಗಳಿಗೆ ಅಭಿನಂದನೆ ಸಲ್ಲಿಸಿದರು.

2022 ರಲ್ಲಿ 50 ಸಾವಿರ ಗರ್ಭಿಣಿಯರಿಗೆ ಎಚ್ಐವಿ ಚಿಕಿತ್ಸೆ ಮಾಡಲಾಗಿದ್ದು, 25 ಪಾಸಿಟಿವ್ ಕೇಸ್ಗಳು ಬಂದಿವೆ. 2023-24 ನೇ ಸಾಲಿನಲ್ಲಿ ಮೈಸೂರು ಜಿಲ್ಲೆಯ ಎಚ್ಐವಿ ಏಡ್ಸ್ ಪ್ರಿವೆಲೆನ್ಸ್ ಶೇ. 0.04 ನಷ್ಟಿದ್ದು, ಜಿಲ್ಲೆಯಲ್ಲಿ ಎಚ್ಐವಿ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿರುವುದು ಸಂತಸದ ವಿಷಯ. ಇದನ್ನು ಶೂನ್ಯಕ್ಕಿಳಿಸಲು ಮತ್ತಷ್ಟು ಶ್ರಮಿಸೋಣ. ಎಚ್ಐವಿ ಸೋಂಕಿತರನ್ನು ಗೌರವಿಸಿ, ಹೊಸ ಸೋಂಕಿತರಾಗದಂತೆ ಎಚ್ಚರ ವಹಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳು ಮುಂದುವರೆಯಲಿ ಎಂದರು.

ಕಾರ್ಯಕ್ರಮದಲ್ಲಿ ಎಚ್ಐವಿ ಸೋಂಕಿತರ ಜೊತೆ ಕೆಲಸ ಮಾಡುವ ವೈದ್ಯರು, ಕೌನ್ಸಿಲರ್ ಗಳು ಹಾಗೂ ಇತರೆ ಸಿಬ್ಬಂದಿಗಳಿಗೆ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಆರ್‌ಸಿಎಚ್ ಡಾ.ಜಯಂತ್, ಜಿಲ್ಲಾ ಏಡ್ಸ್ ಪ್ರತಿಬಂಧಕ ಹಾಗೂ ನಿಯಂತ್ರಣ ಘಟಕದ ಕಾರ್ಯಕ್ರಮಾಧಿಕಾರಿಗಳಾದ ಡಾ.ಮೊಹಮ್ಮದ್ ಸಿರಾಜ್, ಎಆರ್ ಟಿ ಮೆಡಿಕಲ್ ಆಫೀಸರ್ ಗೋವಿಂದರಾಜು, ಚೆಲುವಾಂಬ ಹೆಚ್.ಓ.ಡಿ ಡಾ.ಸುಧಾ, ಜೀವಧಾರ ಬ್ಲಡ್ ಬ್ಯಾಂಕ್ ನ ಗಿರೀಶ್ ಸೇರಿದಂತೆ ಇತರರು ಭಾಗವಹಿಸಿದ್ದರು.