ಮನೆ ರಾಷ್ಟ್ರೀಯ ‘ಮಿಚಾಂಗ್‌’ ಚಂಡಮಾರುತ: ತಮಿಳುನಾಡಿನಲ್ಲಿ ಮೃತರ ಸಂಖ್ಯೆ 8ಕ್ಕೆ ಏರಿಕೆ

‘ಮಿಚಾಂಗ್‌’ ಚಂಡಮಾರುತ: ತಮಿಳುನಾಡಿನಲ್ಲಿ ಮೃತರ ಸಂಖ್ಯೆ 8ಕ್ಕೆ ಏರಿಕೆ

0

ಚೆನ್ನೈ: ತಮಿಳುನಾಡಿನಲ್ಲಿ ‘ಮಿಚಾಂಗ್‌’ ಚಂಡಮಾರುತದ ಅಬ್ಬರ ಮಂಗಳವಾರವೂ ಮುಂದುವರಿದಿದೆ. ಧಾರಾಕಾರ ಮಳೆ, ಗಾಳಿಯಿಂದ ಸಂಭವಿಸಿದ ಅವಘಡಗಳಲ್ಲಿ ಮೃತಪಟ್ಟವರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.

ಮಳೆ ಪ್ರಮಾಣ ತುಸು ತಗ್ಗಿದ್ದು, ಚೆನ್ನೈ ವಿಮಾನ ನಿಲ್ದಾಣದಲ್ಲಿ ಎಲ್ಲಾ ವಿಮಾನಗಳು ಹಾರಾಟ ನಡೆಸುತ್ತಿವೆ. ಇತ್ತ ಮುಖ್ಯಮಂತ್ರಿ ಸ್ಟಾಲಿನ್ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಪರಿಹಾರ ಕ್ರಮಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ.

ತಮಿಳುನಾಡಿನ ಹಲವು ಜಿಲ್ಲೆಗಳಲ್ಲಿ ಸೋಮವಾರ ವ್ಯಾಪಕ ಮಳೆಯಾಗಿದ್ದು, ಕೋಟ್ಯಾಂತರ ರೂಪಾಯಿ ಮೌಲ್ಯದ ಆಸ್ತಿ ನಷ್ಟವಾಗಿದೆ.

ಚೆನ್ನೈ ವಿಮಾನನಿಲ್ದಾಣ ರನ್‌ವೇ ಜಲಾವೃತಗೊಂಡಿದ್ದರಿಂದ ಅಧಿಕಾರಿಗಳು 70 ವಿಮಾನಗಳ ಯಾನ ರದ್ದುಪಡಿಸಿದ್ದರು. ರೈಲು, ಬಸ್ಸುಗಳ ಸಂಚಾರವೂ ವಿಳಂಬ ಅಥವಾ ರದ್ದತಿ ಕಾರಣದಿಂದಾಗಿ ವ್ಯತ್ಯಯಗೊಂಡಿತ್ತು. ಕೊಯಮತ್ತೂರು, ಮೈಸೂರು ಕಡೆಗೆ ತೆರಳಬೇಕಿದ್ದ ರೈಲುಗಳ ಸಂಚಾರ ರದ್ದಾಗಿದೆ ಎಂದು ರೈಲ್ವೆ ಇಲಾಖೆಯು ತಿಳಿಸಿತ್ತು. ಅಲ್ಲದೆ, ಚೆನ್ನೈನಲ್ಲಿ 14 ಸಬ್‌ ವೇಗಳು ಜಲಾವೃತವಾಗಿದ್ದು, ಸಂಚಾರ ಸ್ಥಗಿತವಾಗಿತ್ತು.

ರಜೆ ಘೋಷಣೆ

ತಮಿಳುನಾಡು ಸರ್ಕಾರ, ಚೆನ್ನೈ ಹಾಗೂ ತಿರುವಲ್ಲೂರು, ಕಾಂಚೀಪುರಂ, ಚೆಂಗಲಪಟ್ಟು ಜಿಲ್ಲೆಗಳಲ್ಲಿ ಇಂದು ರಜೆ ಘೋಷಿಸಿದೆ.

ಅಗ್ನಿಶಾಮಕ ಸೇವೆ, ಆಸ್ಪತ್ರೆ, ಪೆಟ್ರೋಲ್‌ ಬಂಕ್‌, ಹೋಟೆಲ್‌ ಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ ಎಂದು ತಿಳಿಸಿದೆ.