ಮನೆ ಕಾನೂನು ವಂಚನೆ ಪ್ರಕರಣ: ಚೈತ್ರಾ ಸೇರಿದಂತೆ ಇಬ್ಬರಿಗೆ ಜಾಮೀನು ಮಂಜೂರು

ವಂಚನೆ ಪ್ರಕರಣ: ಚೈತ್ರಾ ಸೇರಿದಂತೆ ಇಬ್ಬರಿಗೆ ಜಾಮೀನು ಮಂಜೂರು

0

ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಅಭ್ಯರ್ಥಿಯೊಬ್ಬರಿಗೆ ಟಿಕೆಟ್ ಕೊಡಿಸುವುದಾಗಿ ಕೋಟ್ಯಂತರ ರೂಪಾಯಿ ಹಣ ಪಡೆದು ವಂಚಿಸಿದ್ದ ಪ್ರಕರಣದಲ್ಲಿ ಬಂಧಿತಳಾಗಿದ್ದ ಚೈತ್ರಾ ಸೇರಿದಂತೆ ಇಬ್ಬರಿಗೆ ಬೆಂಗಳೂರು ಮ್ಯಾಜಿಸ್ಟ್ರೇಟ್ ಕೋರ್ಟ್ ಜಾಮೀನು ಮಂಜೂರು ಮಾಡಿದೆ.

ವಂಚನೆ ಆರೋಪ ಪ್ರಕರಣ ಸಂಬಂಧ ಕಳೆದ ಸೆಪ್ಟೆಂಬರ್ ​ನಲ್ಲಿ ಚೈತ್ರಾ ಬಂಧನವಾಗಿತ್ತು.ಉದ್ಯಮಿ ಗೋವಿಂದ್ ಪೂಜಾರಿ ಅವರಿಗೆ ಬೈಂದೂರು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ವಂಚಿಸಿದ ಪ್ರಕರಣದಲ್ಲಿ ಚೈತ್ರಾ ಜೈಲು ಸೇರಿದ್ದರು.

ಈ ಪ್ರಕರಣದ ಪ್ರಮುಖ ಆರೋಪಿ ಚೈತ್ರಾ ಹಾಗೂ 7ನೇ ಆರೋಪಿ ಶ್ರೀಕಾಂತ್‌ಗೆ 3ನೇ ಎಸಿಎಂಎಂ ಕೋರ್ಟ್ ಜಾಮೀನು ಮಂಜೂರು ಮಾಡಿದ್ದು, ಮಂಗಳವಾರ ಪರಪ್ಪನ ಅಗ್ರಹಾರ ಕಾರಾಗೃಹದಿಂದ ಬಿಡುಗಡೆಯಾಗಲಿದ್ದಾರೆ.

ಈ ಮೂಲಕ ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ ಜಾಮೀನು ಸಿಕ್ಕಂತಾಗಿದೆ.

ವಂಚನೆ ಸಂಬಂಧ ಉದ್ಯಮಿ ಗೋವಿಂದಬಾಬು ಪೂಜಾರಿ ಸೆ.8ರಂದು ಬಂಡೇಪಾಳ್ಯ ಠಾಣೆಯಲ್ಲಿ ಚೈತ್ರಾ ಮತ್ತು ಇತರೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದರು. ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆ ಆಗಿತ್ತು. ಬಳಿಕ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು, ಚೈತ್ರಾ, ಗಗನ್ ಕಡೂರು, ಹೊಸಪೇಟೆಯ ಸ್ವಾಮೀಜಿ ಹಾಲಶ್ರೀ ಸ್ವಾಮೀಜಿ, ಚನ್ನನಾಯ್ಕ, ಧನರಾಜ್, ಶ್ರೀಕಾಂತ್, ಪ್ರಜ್ವಲ್ ಸೇರಿ 9 ಮಂದಿಯನ್ನು ಬಂಧಿಸಲಾಗಿತ್ತು.

ಬಳಿಕ ಚೈತ್ರಾ ಸೇರಿದಂತೆ ಆರೋಪಿಗಳು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಸಿಸಿಬಿಯು ಆರೋಪಿಗಳ ವಿರುದ್ಧ ಸುಮಾರು 800 ಪುಟಗಳ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿತ್ತು.