ತುಮಕೂರು: ಇಂದು ಸಿದ್ಧಗಂಗಾ ಮಠದಲ್ಲಿ ವಿ.ಸೋಮಣ್ಣ ಪ್ರತಿಷ್ಠಾನದಿಂದ ನಿರ್ಮಾಣಗೊಂಡಿರುವ ಗುರುಭವನ ಲೋಕಾರ್ಪಣೆ ನೆಪದಲ್ಲಿ ಮಾಜಿ ಸಚಿವ ವಿ.ಸೋಮಣ್ಣ ಶಕ್ತಿಪ್ರದರ್ಶನ ಮಾಡುತ್ತಾರಾ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಗುರುಭವನ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಅಧಿವೇಶನ ಇದ್ದರೂ ಗೃಹ ಸಚಿವ ಜಿ.ಪರಮೇಶ್ವರ್, ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಭಾಗಿಯಾಗಲಿದ್ದಾರೆ.
ರಾಜ್ಯ ಬಿಜೆಪಿ ನಾಯಕತ್ವದ ವಿರುದ್ಧ ತೊಡೆ ತಟ್ಟಿರುವ ವಿ.ಸೋಮಣ್ಣ ಕಾಂಗ್ರೆಸ್ ಸೇರುವ ನಿರ್ಧಾರ ಇಲ್ಲಿಂದಲೇ ಪ್ರಕಟಿಸುತ್ತಾರಾ ಎಂಬ ಪ್ರಶ್ನೆ ಎದುರಾಗಿದೆ.
ಮಾಜಿ ಸಿಎಂ ಯಡಿಯೂರಪ್ಪರ ರಾಜಕೀಯ ಶಕ್ತಿ ಕೇಂದ್ರದಂತಿರುವ ಸಿದ್ದಗಂಗಾ ಮಠದಿಂದಲೇ ಸೋಮಣ್ಣ ಪಾಂಚಜನ್ಯ ಮೊಳಗಿಸ್ತಾರಾ ಎಂಬ ಕುತೂಹಲ ಮೂಡಿದೆ.
ಕಾರ್ಯಕ್ರಮದಲ್ಲಿ ವಿ.ಸೋಮಣ್ಣ ಪತ್ನಿ ಶೈಲಜಾ ಸೋಮಣ್ಣ, ಪುತ್ರ ಅರುಣ್ ಸೋಮಣ್ಣ, ಸಂಸದ ಜಿ.ಎಸ್.ಬಸವರಾಜು, ಬಿಜೆಪಿ ಶಾಸಕರಾದ ಜ್ಯೋತಿಗಣೇಶ್, ಸುರೇಶ್ ಗೌಡ, ಕಾಂಗ್ರೆಸ್ ಪರಿಷತ್ತ್ ಸದಸ್ಯ ರಾಜೇಂದ್ರ ರಾಜಣ್ಣ ಭಾಗಿಯಾಗಲಿದ್ದಾರೆ.
ಬೆಳಗ್ಗೆ 10.30ಕ್ಕೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಹಳೆ ಮಠದ ಆವರಣದಲ್ಲಿ ವೇದಿಕೆ ಸಿದ್ದಗೊಂಡಿದೆ.