ಮನೆ ರಾಷ್ಟ್ರೀಯ ಮಹಾಪರಿನಿರ್ವಾಣ ದಿನ: ಅಂಬೇಡ್ಕರ್ ಅವರನ್ನು ಸ್ಮರಿಸಿದ ಪ್ರಧಾನಿ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು

ಮಹಾಪರಿನಿರ್ವಾಣ ದಿನ: ಅಂಬೇಡ್ಕರ್ ಅವರನ್ನು ಸ್ಮರಿಸಿದ ಪ್ರಧಾನಿ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು

0

ನವದೆಹಲಿ: ಡಾ.ಭೀಮರಾವ್ ರಾಮ್‌ ಜಿ ಅಂಬೇಡ್ಕರ್ ಅವರ ಸ್ಮರಣಾರ್ಥ ಇಂದು ದೇಶದಲ್ಲಿ ಮಹಾಪರಿನಿರ್ವಾಣ ದಿನವನ್ನು ಆಚರಿಸಲಾಗುತ್ತಿದ್ದು,  ಪ್ರಧಾನಿ ನರೇಂದ್ರ ಮೋದಿ ಬಾಬಾಸಾಹೇಬರನ್ನು ಸ್ಮರಿಸಿ ನಮನ ಸಲ್ಲಿಸಿದರು.

ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಉಪಾಧ್ಯಕ್ಷ ಜಗದೀಪ್ ಧನಕರ್ ಅವರು ಸಂಸತ್ತಿನ ಸಂಕೀರ್ಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುಣ್ಯತಿಥಿ ನಿಮಿತ್ತ ಶ್ರದ್ಧಾಂಜಲಿ ಸಲ್ಲಿಸಿದರು.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ ಆ್ಯಪ್ ​ನಲ್ಲಿ ಪೋಸ್ಟ್​ ಮಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, “ಪೂಜ್ಯ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಭಾರತೀಯ ಸಂವಿಧಾನದ ಸೃಷ್ಟಿಕರ್ತ ಮತ್ತು ಸಾಮಾಜಿಕ ಸಾಮರಸ್ಯದ ಅಮರ ಬೆಂಬಲಿಗರಾಗಿದ್ದರು. ಶೋಷಿತರು ಮತ್ತು ವಂಚಿತರ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟರು. ಇಂದು ಅವರ ಮಹಾಪರಿನಿರ್ವಾಣ ದಿನ, ಅವರಿಗೆ ನನ್ನ ಗೌರವಪೂರ್ವಕ ನಮನಗಳು” ಎಂದು ತಿಳಿಸಿದ್ದಾರೆ.

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಕೂಡ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. “ಅಂಬೇಡ್ಕರ್ ಅವರು ತಮ್ಮ ಇಡೀ ಜೀವನವನ್ನು ಸಮಾನ ಮತ್ತು ನ್ಯಾಯಯುತ ಸಮಾಜದ ಸ್ಥಾಪನೆ, ರಾಷ್ಟ್ರದ ಪ್ರಗತಿ, ಮಾನವ ಹಕ್ಕುಗಳು ಮತ್ತು ಎಲ್ಲರಿಗೂ ಸಾಮಾಜಿಕ ನ್ಯಾಯಕ್ಕಾಗಿ ಮುಡಿಪಾಗಿಟ್ಟಿದ್ದರು. ಅವರ ಪುಣ್ಯತಿಥಿಯಂದು ಅವರಿಗೆ ನನ್ನ ಭಾವಪೂರ್ವಕ ಶ್ರದ್ಧಾಂಜಲಿ ಸಲ್ಲಿಸುತ್ತೇನೆ” ಎಂದಿದ್ದಾರೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಎಕ್ಸ್​ ಆ್ಯಪ್ ​ನಲ್ಲಿ ಪೋಸ್ಟ್​ ಮಾಡಿ, ‘ಮಹಾಪರಿನಿರ್ವಾಣ ದಿವಸ್’ದಂದು ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಅವರು ದೇಶಕ್ಕೆ ನೀಡಿದ ಗಮನಾರ್ಹ ಕೊಡುಗೆಯನ್ನು ಸ್ಮರಿಸುತ್ತಿದ್ದೇನೆ. ಅವರ ಆಲೋಚನೆಗಳು ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡಿದೆ. ನಮ್ಮ ಮುಂದಿನ ಪೀಳಿಗೆಗಳು ಭಾರತದ ಸಂವಿಧಾನದ ರಚನೆಯಲ್ಲಿ ಅವರ ಪಾತ್ರವನ್ನು ಎಂದಿಗೂ ಮರೆಯುವುದಿಲ್ಲ ಎಂದು ಭಾವಿಸುತ್ತೇನೆ ಎಂದು ಹೇಳಿದ್ದಾರೆ.