ಮನೆ ರಾಜ್ಯ ಕಾರು ಅಪಘಾತವನ್ನು ಮರೆಮಾಚಿ ರಾಜಕೀಯ ಲಾಭಕ್ಕಾಗಿ ಹಲ್ಲೆಯೆಂದು ಬಿಂಬಿಸಿದ ಮಣಿಕಂಠ ರಾಠೋಡ

ಕಾರು ಅಪಘಾತವನ್ನು ಮರೆಮಾಚಿ ರಾಜಕೀಯ ಲಾಭಕ್ಕಾಗಿ ಹಲ್ಲೆಯೆಂದು ಬಿಂಬಿಸಿದ ಮಣಿಕಂಠ ರಾಠೋಡ

0

ಕಲಬುರಗಿ: ಗುರುಮಠಕಲ್‌ ನಲ್ಲಿ ಸಂಭವಿಸಿದ್ದ ಕಾರು ಅಪಘಾತವನ್ನು ಮರೆಮಾಚಿ, ಅದನ್ನು ರಾಜಕೀಯವಾಗಿ ಲಾಭಪಡೆಯಲು ತನ್ನ ಮೇಲೆ ಹಲ್ಲೆಯಾಗಿದೆ ಎಂದು ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಬಿಂಬಿಸಿರುವುದು ತನಿಖೆಯಿಂದ ಗೊತ್ತಾಗಿದೆ.

ಚಿತ್ತಾಪುರ ಮತಕ್ಷೇತ್ರ ವ್ಯಾಪ್ತಿಯ ಮಾಲಗತ್ತಿ ಸಮೀಪ ರಾಷ್ಟ್ರೀಯ ಹೆದ್ದಾರಿ-150 ರ ಬದಿಯಲ್ಲಿ ಇರುವ ತಮ್ಮ ಫಾರ್ಮ್ ಹೌಸ್‌ನಿಂದ ಕಲಬುರಗಿಗೆ ತೆರಳುತ್ತಿದ್ದೆ. ಶಂಕರವಾಡಿ ಕ್ರಾಸ್ ಹತ್ತಿರ ಅಪರಿಚಿತ ದುಷ್ಕರ್ಮಿಗಳು ಹಲ್ಲೆ ಮಾಡಿ ಓಡಿ ಹೋಗಿದ್ದರು ಎಂದು ಆರೋಪಿಸಿ ಮಣಿಕಂಠ ರಾಠೋಡ ಅವರು ಶಹಾಬಾದ್ ಪೊಲೀಸ್ ಠಾಣೆಯಲ್ಲಿ ನವೆಂಬರ್ 19ರಂದು ದೂರು ದಾಖಲಿಸಿದ್ದ.

ದೂರು ಆಧರಿಸಿ ತನಿಖೆ ನಡೆಸಿದ ಪೊಲೀಸರಿಗೆ ಅಪಘಾತವನ್ನು ಹಲ್ಲೆಯಾಗಿ ಬಿಂಬಿಸಿದ್ದು ಗೊತ್ತಾಗಿದೆ.

ಶಹಾಬಾದ್ ತಾಲ್ಲೂಕಿನ ಶಂಕರವಾಡಿ ಕ್ರಾಸ್ ಬಳಿ ಹಲ್ಲೆ ಆಗಿದ್ದಾಗಿ ಮುಖಂಡ ಮಣಿಕಂಠ ರಾಠೋಡ ದೂರು ನೀಡಿದ್ದರು. ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಕೊಲೆಯತ್ನ ಅಲ್ಲ, ಅಪಘಾತವನ್ನು ಹಲ್ಲೆ ಎಂದು ಬಿಂಬಿಸಿರುವುದು ತನಿಖೆಯಿಂದ ತಿಳಿದುಬಂದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಸಲು ತಿಳಿಸಿದರು.

ಮಣಿಕಂಠ ಕುಳಿತಿದ್ದ ಬಿಳಿ ಬಣ್ಣದ ಕಾರು ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲ್ಲೂಕಿನ ಚಪೇಟ್ಲಾ ಗ್ರಾಮದ ಸಮೀಪ ಮರಕ್ಕೆ ಡಿಕ್ಕಿ ಹೊಡೆದು ಅಪಘಾತ ಆಗಿತ್ತು. ಅಲ್ಲಿಂದ ಮತ್ತೊಂದು ಕಾರಿನಲ್ಲಿ ಕುಳಿತು ಕಲಬುರಗಿಗೆ ಬರುವಾಗ ಮಾರ್ಗ ಮಧ್ಯದಲ್ಲಿ ತನ್ನ ಮೇಲೆ ನಡೆದಿದೆ ಎಂದು ಬಿಂಬಿಸಿದ್ದಾರೆ. ಇದನ್ನು ಕೆಲ ಪ್ರತ್ಯಕ್ಷದರ್ಶಿ ಸಾಕ್ಷಿಗಳು ತನಿಖೆ ವೇಳೆ ಬಾಯಿಬಿಟ್ಟಿದ್ದಾರೆ. ಈ ಸಂಬಂಧ ಕೆಲವು ತಾಂತ್ರಿಕ  ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ ಎಂದರು.

ಪ್ರತ್ಯಕ್ಷದರ್ಶಿಯ ಸಾಕ್ಷಿಯನ್ನು ನ್ಯಾಯಾಧೀಶರ ಮುಂದೆ ಹಾಜರಿಪಡಿಸಿ ಆತನ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ. ತನಿಖೆಯು ಪ್ರಗತಿಯಲ್ಲಿದೆ ಎಂದು ಹೇಳಿದರು.