ಮನೆ ಸ್ಥಳೀಯ ಜಿಲ್ಲಾಧಿಕಾರಿಗಳಿಂದ ಛೀಮಾರಿ: ಕೋವಿಡ್ ಕಡತಗಳನ್ನು ಈಗ ತಯಾರಿಸುತ್ತಿರುವ ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ...

ಜಿಲ್ಲಾಧಿಕಾರಿಗಳಿಂದ ಛೀಮಾರಿ: ಕೋವಿಡ್ ಕಡತಗಳನ್ನು ಈಗ ತಯಾರಿಸುತ್ತಿರುವ ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಅಧಿಕಾರಿಗಳು

0

ಮೈಸೂರು: ಕೋವಿಡ್ -19ರ ದಾಖಲೆಯನ್ನು / ಕಡತಗಳನ್ನು ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಅಧಿಕಾರಿಗಳು ಈಗ ಸೃಷ್ಟಿಸುತ್ತಿದ್ದಾರೆ ಎಂಬ ಮಾಹಿತಿ ಕಾಲೇಜು ಮತ್ತು ಆಸ್ಪತ್ರೆಗಳಲ್ಲಿ ಹರಿದಾಡುತ್ತಿದ್ದೆ. ಕೆಲವು ದಿನಗಳ ಹಿಂದೆ ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರ ಅವರ ಅಧ್ಯಕ್ಷತೆಯಲ್ಲಿ ನಡೆದ ಕೋವಿಡ್-19ಕ್ಕೆ ಸಂಬಂಧಪಟ್ಟ ಸಭೆಯಲ್ಲಿ ಜಿಲ್ಲಾಧಿಕಾರಿಗಳಿಂದ ಛೀಮಾರಿ ಹಾಕಿಸಿಕೊಂಡ ಬಳಿಕ ಎಚ್ಚೆತ್ತಿರುವ ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಕಛೇರಿಯ ಅಧಿಕಾರಿಗಳು ಈಗ ತರಾತುರಿಯಲ್ಲಿ ದಾಖಲೆ ಹಾಗೂ ವರದಿಗಳನ್ನು ತಯಾರಿ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ಜಿಲ್ಲಾಧಿಕಾರಿಗಳ ಸಭೆಗೆ ಅತಿಯಾದ ಆತ್ಮವಿಶ್ವಾಸದಿಂದ ಫೈಲ್ ಗಳನ್ನು ತೆಗೆದುಕೊಂಡು ಹೋಗಿದ್ದ ಅಧಿಕಾರಿಗಳಿಗೆ ಭಾರಿ ಮುಖಭಂಗವಾಗಿದೆ. ಸೂಕ್ತ ಹಾಗೂ ಸಮರ್ಪಕ ಕಡತಗಳನ್ನು ಆದಷ್ಟು ಶೀಘ್ರವಾಗಿ ಸಲ್ಲಿಸಲು ಜಿಲ್ಲಾಧಿಕಾರಿಗಳು ಸೂಚಿಸಿದ್ದು, ಈ ಹಿನ್ನಲೆ ಕಡತಗಳನ್ನು ಸಲ್ಲಿಸಲು ಕೆಲವೇ ದಿನಗಳು ಬಾಕಿ ಇರುವ ಹಿನ್ನಲೆಯಲ್ಲಿ ಅಧಿಕಾರಿಗಳು ಸಂಸ್ಥೆಯಲ್ಲಿ ಎಲ್ಲಾ ಕೆಲಸವನ್ನು ಬದಿಗಿಟ್ಟು ಸುಳ್ಳು ಕಡತ ತಯಾರು ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ. 

ಕೋವಿಡ್ ಬಂದು ಎರಡು ವರ್ಷಗಳು ಕಳೆದು ಹೋದ ನಂತರ ಈಗ ಅಧಿಕಾರಿಗಳು ವರದಿ ತಯಾರಿಸುತ್ತಿದ್ದು, ಇದರಲ್ಲಿ ಎಷ್ಟರಮಟ್ಟಿಗೆ ಸತ್ಯವಿರಲಿದೆ ಎಂಬುದು ಊಹಿಸಬಹುದು. 2 ವರ್ಷಗಳ ಕಾಲ ಅಧಿಕಾರಿಗಳು ಕೋವಿಡ್ ಗೆ ಸಂಬಂಧಿಸಿದ ಕಡತಗಳನ್ನು ನಿರ್ವಹಿಸದಿರುವುದು ಅಧಿಕಾರಿಗಳ ಬೇಜವಬ್ದಾರಿಗೆ ಮತ್ತು ಭ್ರಷ್ಟಾಚಾರಕ್ಕೆ ಹಿಡಿದ ಕನ್ನಡಿ. ಇಂತಹ ಅಧಿಕಾರಿಗಳಿಂದ ಸತ್ಯನಿಷ್ಠ ವರದಿಯನ್ನು ನಿರೀಕ್ಷಿಸಲು ಸಾಧ್ಯವೇ ಇಲ್ಲ. ಇದುವರೆಗೆ ಸಂಸ್ಥೆಯಲ್ಲಿ ನಡೆದಿರುವ ಭ್ರಷ್ಟಾಚಾರವನ್ನೆಲ್ಲಾ ಮರೆಮಾಚಿ, ಅಧಿಕಾರಿಗಳು, ಆಡಳಿತ ಮಂಡಳಿಗೆ ಬೇಕಾದಂತೆ ವರದಿಯನ್ನು ತಯಾರು ಮಾಡುತ್ತಿದ್ದಾರೆ ಎಂಬ ಮಾಹಿತಿಯನ್ನು ನಂಬಲಾರ್ಹ ಮೂಲಗಳಿಂದ ತಿಳಿದುಬಂದಿದೆ.

ಆದ್ದರಿಂದ ಈಗ ಅಧಿಕಾರಿಗಳು ನೀಡುವ ವರದಿಯನ್ನು ಜಿಲ್ಲಾಧಿಕಾರಿಗಳು ಪರಿಶೀಲಿಸಬೇಕು. ಸೂಕ್ತ ತನಿಖೆ ನಡೆಸಬೇಕು. ಇಲ್ಲವಾದರೆ ಈಗಾಗಲೇ ಭ್ರಷ್ಟಚಾರದ ಕೂಪವಾಗಿರುವ ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಮತ್ತಷ್ಟು ಹಗರಣಗಳಿಗೆ ಸಾಕ್ಷಿಯಾಗುತ್ತದೆ. ಇದುವರೆಗೆ ಕಡತವನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸದ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕು. ಇದು ಇತರ ಇಲಾಖೆಯ ಭ್ರಷ್ಟ ಅಧಿಕಾರಿಗಳಿಗೆ ಒಂದು ಪಾಠವಾಗುತ್ತದೆ.