ತುಮಕೂರು: ಮೃತ ವ್ಯಕ್ತಿ ಹೆಸರಿನಲ್ಲಿ ಅಂಗವಿಕಲ, ವಯಸ್ಸಿನ ದೃಢೀಕರಣ ಪತ್ರ ವಿತರಣೆ ಮಾಡಿದ ಜಿಲ್ಲೆಯ ಮಧುಗಿರಿ ಆಸ್ಪತ್ರೆಯ ಇಬ್ಬರು ವೈದ್ಯರನ್ನು ಅಮಾನತು ಮಾಡಲಾಗಿದೆ.
ಡಾ.ಮಹೇಶ್ ಸಿಂಗ್ ಮತ್ತು ಡಾ.ಪುರುಷೋತ್ತಮ್ ಸಸ್ಪೆಂಡ್ ಆದ ವೈದ್ಯರು.
ಘಟನೆ ಸಂಬಂಧ ಆರೋಗ್ಯ ಇಲಾಖೆ ಆರ್ ಟಿಐ ಕಾರ್ಯಕರ್ತರು ದೂರು ನೀಡಿದ್ದು, ಆರೋಪ ಸಾಬೀತು ಹಿನ್ನೆಲೆ ಇಬ್ಬರು ವೈದ್ಯರ ಅಮಾನತು ಮಾಡಿ ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ ಪಿ.ಚಂದ್ರಕಾಂತ್ ಆದೇಶ ಹೊರಡಿಸಿದ್ದಾರೆ.
2022ರಲ್ಲಿ ಮೃತಪಟ್ಟಿದ್ದ ಹನುಮಂತರಾಯಪ್ಪ ಹೆಸರಲ್ಲಿ ದೃಢೀಕರಣ ಪತ್ರ, ಅಂಗವಿಕಲ ಪ್ರಮಾಣಪತ್ರ ಮತ್ತು ವಯಸ್ಸಿನ ದೃಢೀಕರಣ ಪತ್ರವನ್ನು ವೈದ್ಯರು ನೀಡಿದ್ದರು.
ಆರೋಗ್ಯ ಇಲಾಖೆಯ ಮುಖ್ಯ ಜಾಗೃತಾಧಿಕಾರಿಗಳಿಂದ ತನಿಖೆ ಮಾಡಿದ್ದು, ಇಬ್ಬರು ವೈದ್ಯರು ತಪ್ಪಿತಸ್ಥರು ಎಂದು ಮೇಲ್ನೋಟಕ್ಕೆ ದೃಢವಾಗಿದೆ. ಇಲಾಖಾ ತನಿಖೆ ಬಾಕಿ ಇರಿಸಿ ಇಬ್ಬರನ್ನೂ ಆರೋಗ್ಯ ಇಲಾಖೆ ಅಮಾನತು ಮಾಡಿದೆ.
ಕಳೆದ ಕೆಲ ದಿನಗಳ ಹಿಂದೆ ಹಾವೇರಿ ಜಿಲ್ಲೆಯ ಸವಣೂರಿಗೆ ಡಾ.ಮಹೇಶ್ ಸಿಂಗ್, ಕೋಲಾರ ಜಿಲ್ಲೆಯ ಕೆ.ಜಿ.ಎಫ್ಗೆ ಡಾ.ಪುರುಷೋತ್ತಮ್ ಅವರನ್ನು ಆರೋಗ್ಯ ಇಲಾಖೆ ವರ್ಗಾವಣೆ ಮಾಡಿತ್ತು. ಪ್ರಕರಣ ಸಂಬಂಧ ಮಧುಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.