ಮನೆ ಮನರಂಜನೆ ಹಿರಿಯ ನಟಿ ಲೀಲಾವತಿ ನಿಧನ

ಹಿರಿಯ ನಟಿ ಲೀಲಾವತಿ ನಿಧನ

0

ಬೆಂಗಳೂರು: ಕಳೆದ ಕೆಲವು ತಿಂಗಳಿಂದ  ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದ ಕನ್ನಡ ಚಿತ್ರರಂಗದ ಖ್ಯಾತ ನಟಿ ಲೀಲಾವತಿ ಅವರು ಅವರು ಇಂದು ಇಹಲೋಕ ತ್ಯಜಿಸಿದ್ದಾರೆ.

ಅವರಿಗೆ 86 ವರ್ಷ ವಯಸ್ಸಾಗಿತ್ತು.

ನಟಿ ಲೀಲಾವತಿ ಅವರು ನೆಲಮಂಗಲದ ಸೋಲದೇವನಹಳ್ಳಿ ಬಳಿ ಪುತ್ರ ವಿನೋದ್​ ರಾಜ್​ ಜೊತೆ ವಾಸವಾಗಿದ್ದರು. ಪುತ್ರ ವಿನೋದ್​ ರಾಜ್​ ಅವರನ್ನು ಲೀಲಾವತಿ ಅಗಲಿದ್ದಾರೆ.

ದಕ್ಷಿಣ ಕನ್ನಡ ದ ಬೆಳ್ತಂಗಡಿ ಮೂಲದ ಲೀಲಾವತಿ ( ಲೀಲಾ ಕಿರಣ್) ಕನ್ನಡ, ತಮಿಳು ಮತ್ತು ತೆಲುಗು ಚಲನಚಿತ್ರಗಳಲ್ಲಿ ನಟಿಸಿದ್ದ ಹಿರಿಯ ಭಾರತೀಯ ನಟಿ.

50 ವರ್ಷಗಳಿಗೂ ಹೆಚ್ಚು ಕಾಲ ತಮ್ಮ ವೃತ್ತಿಜೀವನದುದ್ದಕ್ಕೂ 600 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದರು. ಕನ್ನಡದಲ್ಲಿ 400 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಮನೆ ಮಾತಾಗಿದ್ದರು. ಭಕ್ತ ಕುಂಬಾರ, ಮನ ಮೆಚ್ಚಿದ ಮಡದಿ ಮತ್ತು ಸಂತ ತುಕಾರಂ ಚಿತ್ರಗಳಲ್ಲಿನ ಸ್ಮರಣೀಯ ಅಭಿನಯಕ್ಕಾಗಿ ಅವರು ಜನಪ್ರಿಯತೆಯ ಉತ್ತುಂಗಕ್ಕೆ ಏರಿದ್ದರು. ವರು 1999 ರಲ್ಲಿ ಡಾ. ರಾಜ್‌ಕುಮಾರ್ ಪ್ರಶಸ್ತಿ ಮತ್ತು ಫಿಲ್ಮ್‌ಫೇರ್ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ನಟನೆ ಮಾತ್ರವಲ್ಲದೇ ಸಾಮಾಜಿಕ ಕೆಲಸಗಳ ಮೂಲಕವೂ ಲೀಲಾವತಿ ಗುರುತಿಸಿಕೊಂಡಿದ್ದರು.  ಸಿನಿಮಾದಿಂದ ದೂರ ಉಳಿದುಕೊಂಡಿದ್ದ ಅವರು ಕೃಷಿ ಕೆಲಸದಲ್ಲಿ ತೊಡಗಿಕೊಂಡಿದ್ದರು. ವಿನೋದ್​ ರಾಜ್​ ಕೂಡ ಕೃಷಿ ಕೆಲಸ ಮಾಡುತ್ತಿದ್ದಾರೆ. ಲೀಲಾವತಿ ಅವರ ಅನಾರೋಗ್ಯದ ವಿಷಯ ತಿಳಿದ ಬಳಿಕ ಕನ್ನಡ ಚಿತ್ರರಂಗದ ಅನೇಕರು ಸೋಲದೇವನಹಳ್ಳಿಗೆ ಬಂದು ಆರೋಗ್ಯ ವಿಚಾರಿಸಿದ್ದರು.

ಶಿವರಾಜ್ ​ಕುಮಾರ್​, ಗೀತಾ ಶಿವರಾಜ್​ಕುಮಾರ್​, ದರ್ಶನ್​, ಅಭಿಷೇಕ್​ ಅಂಬರೀಷ್​, ಅರ್ಜುನ್​ ಸರ್ಜಾ, ಡಿ.ಕೆ. ಶಿವಕುಮಾರ್​, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅನೇಕರು ಬಂದು ವಿನೋದ್​ ರಾಜ್ ​ಗೆ ಧೈರ್ಯ ತುಂಬಿದ್ದರು.

ಲೀಲಾವತಿ ಅವರು ಇನ್ನೂ ಒಂದಷ್ಟು ವರ್ಷಗಳ ಕಾಲ ಆರೋಗ್ಯಯುತವಾಗಿ ಇರಲಿ ಎಂದು ಎಲ್ಲರೂ ಹಾರೈಸಿದ್ದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು ಅವರು ಕೊನೆಯುಸಿರು ಎಳೆದಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ಪ್ರಾರ್ಥಿಸುತ್ತಿದ್ದಾರೆ.

ಲೀಲಾವತಿ ಅವರು ಚಿತ್ರರಂಗದಿಂದ ದೂರ ಉಳಿದುಕೊಂಡಿದ್ದರೂ ಕೂಡ ಸಿನಿಮಾ ಕಲಾವಿದರ ಬಗ್ಗೆ ಕಾಳಜಿ ಹೊಂದಿದ್ದರು. ಅನೇಕ ಕಲಾವಿದರಿಗೆ ಮಾಸಾಶನ ಸಿಗುವಂತೆ ಮಾಡಿದ್ದರು. ಪ್ರಾಣಿಗಳ ಬಗ್ಗೆ ಅವರಿಗೆ ಅಪಾರ ಪ್ರೀತಿ ಇತ್ತು. ಅದೇ ಕಾರಣಕ್ಕಾಗಿ ಅವರು ಸ್ವಂತ ಹಣದಲ್ಲಿ ಸೋಲದೇವನಹಳ್ಳಿ ಬಳಿ ಪಶು ಆಸ್ಪತ್ರೆ ನಿರ್ಮಿಸಿದ್ದರು. ಆ ಆಸ್ಪತ್ರೆ ಉದ್ಘಾಟನೆ ಆದ ಕೆಲವೇ ದಿನಗಳ ಬಳಿಕ ಅವರು ಇಹಲೋಕ ತ್ಯಜಿಸಿದ್ದಾರೆ.