ಮೈಸೂರು: ಅರಮನೆ ಸುತ್ತ ಶುಕ್ರವಾರ ಮತ್ತೊಂದು ಪ್ರತಿಮೆ ಪ್ರತಿಷ್ಠಾಪನೆ ಮಾಡಲಾಗಿದ್ದು, ಗನ್ ಹೌಸ್ ವೃತ್ತದಲ್ಲಿ ಲಿಂಗೈಕ್ಯ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಪ್ರತಿಮೆಯನ್ನು ರಾತ್ರೋರಾತ್ರಿ ಕಾನೂನು ಉಲ್ಲಂಘಿಸಿ ಪ್ರತಿಮೆ ಪ್ರತಿಷ್ಠಾಪನೆ ಮಾಡಲಾಗಿದೆ.
ಪಾರಂಪರಿಕ ಕಟ್ಟಡ ಸಮೀಪ ಪ್ರತಿಮೆ ನಿರ್ಮಾಣಕ್ಕೆ ಅವಕಾಶ ಇಲ್ಲವಾಗಿದ್ದು, ಇದೇ ಕಾರಣಕ್ಕೆ ಮಹಾನಗರ ಪಾಲಿಕೆ ಕೌನ್ಸಿಲ್ ನಲ್ಲೂ ಗೊಂದಲ ಉಂಟಾಗಿತ್ತು. ಜಿಲ್ಲಾಡಳಿತ, ಸುತ್ತೂರು ಮಠದ ನಡುವೆ ಪತ್ರ ವ್ಯವಹಾರ ನಡೆದಿತ್ತು. ಇದೀಗ ಏಕಾಏಕಿ ಖಾಲಿ ತಳಹದಿ ಮೇಲೆ ಪ್ರತಿಮೆ ಪ್ರತಿಷ್ಠಾಪನೆ ಮಾಡಲಾಗಿದೆ.
ಸಮುದಾಯದ ಮುಖಂಡರು ಕ್ರೇನ್ ಮೂಲಕ ಪ್ರತಿಮೆ ತಂದು ನಿಲ್ಲಿಸಿದ್ದಾರೆ. ಸ್ಥಳಕ್ಕೆ ಬಂದರೂ ಕಂಡು ಕಾಣದಂತೆ ಪೊಲೀಸರು ಇದ್ದರು. ಹಲವು ವರ್ಷಗಳಿಂದ ವಿವಾದವಾಗಿ ಉಳಿದಿದ್ದ ಪ್ರತಿಮೆ ನಿರ್ಮಾಣ ವಿಚಾರ ಮುಂದಿನ ದಿನಗಳಲ್ಲಿ ವಿವಾದ ಆಗುವ ಸಾಧ್ಯತೆ ಇದೆ.
ಪ್ರತಿಮೆ ಪ್ರತಿಷ್ಠಾಪನೆ ವಿಚಾರವಾಗಿ ಕೆಲವರಿಂದ ವಿರೋಧ ವ್ಯಕ್ತವಾಗಿದ್ದು, ಅನಧಿಕೃತವಾಗಿ ಪ್ರತಿಮೆ ನಿಲ್ಲಿಸಿರುವುದರಿಂದ ಕೂಡಲೇ ತೆರವು ಮಾಡಬೇಕು ಎಂದು ಅರಸು ಸಮುದಾಯ ಮುಖಂಡರು ಪ್ರತಿಭಟನೆ ನಡೆಸಿದ್ದಾರೆ.