ಮನೆ ರಾಜ್ಯ ಲೀಲಾವತಿ ಅವರ ಅಂತಿಮ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ

ಲೀಲಾವತಿ ಅವರ ಅಂತಿಮ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ

0

ಬೆಂಗಳೂರು: ಲೀಲಾವತಿ ಅವರು ಡಿಸೆಂಬರ್ 8ರಂದು ನಿಧನರಾಗಿದ್ದು, ಬೆಂಗಳೂರಿನ ಹೊರವಲಯದಲ್ಲಿರುವ ಸೋಲದೇವನಹಳ್ಳಿಯಲ್ಲಿರುವ ನಿವಾಸದ ಸಮೀಪದ ತೋಟದಲ್ಲಿ ಅವರ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿದೆ. ಈ ವೇಳೆ ಸಿದ್ದರಾಮಯ್ಯ ಅವರು ಅಂತಿಮ ದರ್ಶನ ಪಡೆದು ಮಾಧ್ಯಮಗಳ ಜೊತೆ ಮಾತನಾಡಿದರು.

‘ವಾರದ ಹಿಂದೆ ನಾನು ಲೀಲಾವತಿ ಅವರನ್ನು ಭೇಟಿ ಮಾಡಿದ್ದೆ. ಆಗ ವಿನೋದ್ ರಾಜ್ ಕೂಡ ಇದ್ದರು. ವಿನೋದ್ ರಾಜ್​ ಗೆ ತಾಯಿ ಮೇಲೆ ಬಹಳ ಪ್ರೀತಿ ಇತ್ತು. ಅವರು ಆದರ್ಶಯುತ ತಾಯಿ ಮಕ್ಕಳು. ಅಮ್ಮನ ಚೆನ್ನಾಗಿ ನೋಡ್ಕೋಳಪ್ಪ ಎಂದು ಹೇಳಿದ್ದೆ. ಸರ್ಕಾರದಿಂದ ಸಹಾಯ ಬೇಕಿದ್ರೆ ಕೇಳು ಎಂದು ಕೂಡ ಹೇಳಿದ್ದೆ. ಆದರೆ, ಅವರು ಸಹಾಯ ಕೇಳಲಿಲ್ಲ. ಲೀಲಾವತಿ ಅವರಿಗೆ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ಮಾಡಲು ಆದೇಶ ನೀಡಿದ್ದೇನೆ. ಚಿತ್ರರಂಗ ಕಂಡ ಅದ್ಭುತ ಕಲಾವಿದೆ ಅವರು’ ಎಂದಿದ್ದಾರೆ ಸಿದ್ದರಾಮಯ್ಯ.

 ‘ರಂಗಭೂಮಿಯಿಂದ ಸಿನಿಮಾ ರಂಗಕ್ಕೆ ಬಂದು 600ಕ್ಕೂ ಅಧಿಕ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ನಟನೆ ಮಾಡಿದ್ದಾರೆ. ಅವರು ಬಹುಭಾಷಾ ಕಲಾವಿದೆ. ಯಾವುದೇ ಪಾತ್ರವಾದರೂ ಉತ್ತಮವಾಗಿ ನಟಿಸುತ್ತಿದ್ದರು. ಅದು ತಾಯಿ ಪಾತ್ರ ಇರಲಿ ಅಥವಾ ಹೀರೋಯಿನ್ ಪಾತ್ರ ಇರಲಿ. ಎಲ್ಲದಕ್ಕೂ ನ್ಯಾಯ ಒದಗಿಸುತ್ತಿದ್ದರು. ಮನೋಜ್ಞವಾಗಿ ಅಭಿನಯಿಸುತ್ತಿದ್ದರು. ಅವರ ಹಲವು ಸಿನಿಮಾಗಳನ್ನು ನೋಡಿದ್ದೇನೆ. ರಾಜ್ ​ಕುಮಾರ್, ಲೀಲಾವತಿ ಜೋಡಿ ಸಖತ್ ಜನಪ್ರಿಯತೆ ಪಡೆದಿತ್ತು. ಅವರ ಎಲ್ಲಾ ಸಿನಿಮಾಗಳೂ ಇಷ್ಟವಾಗಿತ್ತು’ ಎಂದಿದ್ದಾರೆ ಸಿದ್ದರಾಮಯ್ಯ.

ಲೀಲಾವತಿ ಪರಿಪೂರ್ಣ ಕಲಾವಿದೆ

‘ಲೀಲಾವತಿ ಪರಿಪೂರ್ಣ ಕಲಾವಿದೆ. ಹಾಸ್ಯ, ಐತಿಹಾಸಿಕ, ಸಾಮಾಜಿಕ ಹೀಗೆ ಯಾವುದೇ ಪಾತ್ರಕೊಟ್ಟರೂ ಲೀಲಾಜಾಲವಾಗಿ ನಟಿಸುತ್ತಿದ್ದರು. ಅವರ ಸಾವು ಸಾಕಷ್ಟು ದುಃಖ ತಂದಿದೆ. ಭಕ್ತ ಕುಂಬಾರದಲ್ಲಿ ಅವರ ಅಭಿನಯ ಪ್ರಶಂಸೆಗೆ ಪಾತ್ರವಾಗಿತ್ತು. ಅವರು ಗಳಿಸಿದ ಹಣವನ್ನು ಬಚ್ಚಿಟ್ಟುಕೊಳ್ಳಲಿಲ್ಲ. ಆಸ್ಪತ್ರೆ ಕಟ್ಟಿಸಿದ್ದಾರೆ, ಬಡವರಿಗೆ ಸಹಾಯ ಮಾಡಿದ್ದಾರೆ. ಪ್ರಾಣಿಗಳ ಕಂಡರೆ ಅಪಾರ ಪ್ರೀತಿ ಇತ್ತು. ಎಲ್ಲ ಮನುಷ್ಯರೂ ಇದೇ ರೀತಿ ಮಾಡಬೇಕು. ದಯವೇ ಧರ್ಮದ ಮೂಲ. ಇದು ಅವರಿಗೆ ರಕ್ತಗತವಾಗಿ ಬಂದಿತ್ತು. ಲೀಲಾವತಿಗೆ ಬೇರೆಯವರ ಕಷ್ಟವನ್ನು ಅರ್ಥ ಮಾಡಿಕೊಳ್ಳುವ ಮನಸ್ಸು ಇತ್ತು’ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

 ‘ರಾಷ್ಟ್ರ ಮಟ್ಟದಲ್ಲಿ ಅವರಿಗೆ ಹಲವು ಪ್ರಶಸ್ತಿ ಸಿಗಬೇಕಿತ್ತು. ಆದರೆ, ಸಿಗಲಿಲ್ಲ. ರೈತಾಪಿ ಕೆಲಸ ಮಾಡಿದ್ದಾರೆ. ಯಾವುದೇ ಕೆಲಸ ಮಾಡಿದರೂ ಅವರು ತಮ್ಮನ್ನು ತಾವು ಅದಕ್ಕೆ ಅರ್ಪಿಸಿಕೊಂಡಿದ್ದರು. ಪರಿಪೂರ್ಣ ಕಲಾವಿದೆ’ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.