ಹಾಸನ: ಲೋಕಸಭೆ ಚುನಾವಣೆ ಸಿದ್ಧತೆಗಾಗಿ ಬೇಲೂರಿನಲ್ಲಿ ಶನಿವಾರ ಆಯೋಜಿಸಿದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಎರಡು ಬಣಗಳ ನಡುವೆ ಮಾರಾಮಾರಿ ನಡೆದಿದೆ.
ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಾಜಿ ಸಚಿವ ಬಿ ಶಿವರಾಂ ಬೇಲೂರು ತಾಲ್ಲೂಕಿನ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ಕರೆದಿದ್ದರು. ಟಿಕೆಟ್ ಆಕಾಂಕ್ಷಿ ಜತ್ತೇನಹಳ್ಳಿ ರಾಮಚಂದ್ರ ಕೂಡ ಸಭೆಯಲ್ಲಿ ಭಾಗಿಯಾಗಿದ್ದರು. ಇದೇ ಸಭೆಗೆ ಸ್ಥಳೀಯ ಮುಖಂಡ ಹಾಗೂ ಕಳೆದ ವಿದಾನಸಭೆ ಚುನಾವಣೆಯ ಟಿಕೆಟ್ ಆಕಾಂಕ್ಷಿಯಾಗಿದ್ದ ಗ್ರಾನೈಟ್ ರಾಜಶೇಖರ್ ಸಹ ಆಗಮಿಸಿದ್ದರು.
ರಾಜಶೇಖರ್ ಬಂದ ವೇಳೆ ಸಭೆಯಲ್ಲಿ ಬಿ ಶಿವರಾಂ ಮಾತನಾಡುತ್ತಿದ್ದರು. ನಮ್ಮ ಕಾರ್ಯಕರ್ತರು, ಮುಖಂಡರಲ್ಲಿ ಒಗ್ಗಟ್ಟು ಇಲ್ಲದಿರುವುದೇ ಬೇಲೂರಿನಲ್ಲಿ ಕಾಂಗ್ರೆಸ್ ಸೋಲಲು ಕಾರಣ ಎಂದು ಬಿ ಶಿವರಾಂ ಹೇಳಿದರು. ಇದರಿಂದ ಕೆರಳಿದ ರಾಜಶೇಖರ್ ಬೆಂಬಲಿಗಳು, ಶಿವರಾಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಬಿ ಶಿವರಾಂ ಹಾಗೂ ರಾಜಶೇಖರ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆಯಿತು.
ಉಭಯ ಬಣಗಳ ಕಾರ್ಯಕರ್ತರ ನಡುವಣ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ಇಬ್ಬರು ನಾಯಕರ ಬೆಂಬಲಿಗರು ಕೈಕೈ ಮಿಲಾಯಿಸಿದರು. ಕುರ್ಚಿಗಳನ್ನು ಹಿಡಿದು ಹೊಡೆದಾಡಿಕೊಂಡರು. ಘಟನೆಯಲ್ಲಿ ಹತ್ತಾರು ಕುರ್ಚಿಗಳು ಪುಡಿಯಾಗಿವೆ.
ಗಲಾಟೆ ಜೋರಾಗುತ್ತಿದ್ದಂತೆ ನಾಯಕರು ಸಭೆಯಿಂದ ಕಾಲ್ಕಿತ್ತಿದ್ದಾರೆ. ಗಲಾಟೆಯಲ್ಲಿ ಹಲವರಿಗೆ ಗಾಯಗಳಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ.















