ಮನೆ ಸ್ಥಳೀಯ 2030 ರ ವೇಳೆಗೆ ಸಂಪೂರ್ಣ 100% ಸಾಕ್ಷರತೆ ಸಾಧಿಸುವ ಗುರಿ: ಆರ್ ಲೋಕನಾಥ್

2030 ರ ವೇಳೆಗೆ ಸಂಪೂರ್ಣ 100% ಸಾಕ್ಷರತೆ ಸಾಧಿಸುವ ಗುರಿ: ಆರ್ ಲೋಕನಾಥ್

0

ಮೈಸೂರು: 15 ವರ್ಷ ಮೇಲ್ಪಟ್ಟ ಅನಕ್ಷರಸ್ಥರಿಗೆ ಶಿಕ್ಷಣ ನೀಡಿ 2030 ರ ವೇಳೆಗೆ ಸಂಪೂರ್ಣ 100% ಸಾಕ್ಷರತೆ ಸಾಧಿಸುವ ಗುರಿ ಹೊಂದಿದ್ದು ಈ ನಿಟ್ಟಿನಲ್ಲಿ ಸಂಬoದಿಸಿದ ಅಧಿಕಾರಿಗಳು ಕಾರ್ಯನಿರ್ವಹಿಸಿ ಎಂದು ಅಪರ ಜಿಲ್ಲಾಧಿಕಾರಿಗಳಾದ ಆರ್ ಲೋಕನಾಥ್  ಅವರು ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ವಯಸ್ಕರ ಶಿಕ್ಷಣ ಸಂಬoದಿಸಿದ ಸಾಕ್ಷರತಾ ಕಾರ್ಯಕ್ರಮಗಳ ಅನುಷ್ಟಾನ ಕುರಿತ ಕಾರ್ಯಪಡೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ 3 ಲಕ್ಷ ವಯಸ್ಕ ಅನಕ್ಷರಸ್ಥರು ಇದ್ದಾರೆ. 2030 ರ ವೇಳೆಗೆ ಇವರಿಗೆ ಸಾಕ್ಷರತೆ ನೀಡುವ ಗುರಿ ಹೊಂದಲಾಗಿದೆ. ರಾಜ್ಯದಲ್ಲಿ 2011 ರ ಜನಗಣತಿಯ ಪ್ರಕಾರ ಶೇಕಡಾ 75.36 ಸಾಕ್ಷರತೆ ಇದೆ. ಜಿಲ್ಲೆಯ ಸಾಕ್ಷರತೆ 72.79 ಇದ್ದು, ಸಾಕ್ಷರತೆ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯಕ್ರಮಗಳನ್ನು ರೂಪಿಸಿ. ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರ ಮೂಲಕ ಅನಕ್ಷರಸ್ಥರ ಸರ್ವೇ ಮಾಡಿಸಿ ಅವರಿಗೆ ಅವರ ಮನೆಯಲ್ಲಿಯೇ ಇರುವ ಅಕ್ಷರಸ್ಥರ ಮೂಲಕ ಕಲಿಕೆ ಮಾಡಿಸಬೇಕು ಎಂದು ತಿಳಿಸಿದರು.
ಪ್ರತಿ ಗ್ರಾಮಗಳಲ್ಲಿ ಸ್ವ ಇಚ್ಚೆಯಿಂದ ಭೋದನೆ ಮಾಡುವ ವ್ಯಕ್ತಿಗಳನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡಬೇಕು. ಬೋಧನೆ ಮಾಡುವ ಇವರಿಗೆ ಪ್ರಶಂಸನ ಪತ್ರ ನೀಡಬೇಕು. ಇವರಿಗೆ ಎನ್ ಎಸ್ ಎಸ್, ಎನ್ ಸಿ ಸಿ ವಿಧ್ಯಾರ್ಥಿಗಳಿಗೆ ನೀಡುವ ರೀತಿ ಕೆಲವು ಅವಕಾಶಗಳಲ್ಲಿ ಆಧ್ಯತೆ ನೀಡುವ ಮೂಲಕ ಪ್ರೋತ್ಸಾಹ ನೀಡಬೇಕು ಎಂದು ತಿಳಿಸಿದರು.

ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಶ್ರೀನಿವಾಸ್ ಅವರು ಮಾತನಾಡಿ ಪ್ರತಿ 20 ಜನ ಅನಕ್ಷರಸ್ಥರಿಗೆ ಒಬ್ಬರು   ಸ್ವಯಂ ಭೋಧಕರನ್ನು ನೇಮಕ ಮಾಡಿ ಬೋಧನೆ ಮಾಡಿಸಲಾಗುವುದು. 6 ತಿಂಗಳ ಅವಧಿ ಬೋಧನೆ ಮಾಡಿ ನಂತರ 150 ಅಂಕಗಳಿಗೆ ಪರೀಕ್ಷೆ ನಡೆಸಲಾಗುವುದು. ಇದರಲ್ಲಿ ಶೇ 40 ಹಾಗೂ ಅದಕ್ಕಿಂತ ಹೆಚ್ಚಿನ ಅಂಕ ಪಡೆದವರನ್ನು ಸಾಕ್ಷರರು ಎಂದು ಘೋಷಣೆ ಮಾಡಲಾಗುತ್ತದೆ. ನವ ಸಾಕ್ಷರರಿಗೆ ಪ್ರಮಾಣ ಪತ್ರ ನೀಡಲಾಗುವುದು. 2022-2023 ರಲ್ಲಿ 19560 ಜನರನ್ನು ಸಾಕ್ಷರರನ್ನಾಗಿ ಮಾಡಲಾಗಿದ್ದು, 2023-24 ನೇ ಸಾಲಿಗೆ ರಾಜ್ಯದಿಂದ ಜಿಲ್ಲೆಗೆ 74820 ಸಾಕ್ಷರರನ್ನಾಗಿ ಮಾಡುವ ಗುರಿ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಕಾರ್ಯಪಡೆಯ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.