ಮನೆ ರಾಷ್ಟ್ರೀಯ ಸಂಸತ್ ನಲ್ಲಿ ಭದ್ರತಾ ಲೋಪ: ಸ್ಪೀಕರ್ ಗೆ ವರದಿ ನೀಡಿದ ಪ್ರತಾಪ್ ಸಿಂಹ

ಸಂಸತ್ ನಲ್ಲಿ ಭದ್ರತಾ ಲೋಪ: ಸ್ಪೀಕರ್ ಗೆ ವರದಿ ನೀಡಿದ ಪ್ರತಾಪ್ ಸಿಂಹ

0

ಹೊಸದಿಲ್ಲಿ: ಭಾರತದ ಸಂಸತ್ ಭವನದ ಒಳಗೆ ಬುಧವಾರ ಕಲಾಪ ನಡೆಯುತ್ತಿದ್ದಂತೆ ಆಗಂತುಕರಿಬ್ಬರು ನುಗ್ಗಿ ಆತಂಕ ಸೃಷ್ಟಿಸಿದ ಘಟನೆ ನಡೆದಿತ್ತು. ಸದನಕ್ಕೆ ಜಿಗಿದ ಇಬ್ಬರಿಗೆ ಮೈಸೂರಿನ ಸಂಸದ ಪ್ರತಾಪ್ ಸಿಂಹ ಅವರ ಕಚೇರಿಯಿಂದ ಪ್ರೇಕ್ಷಕರ ಪಾಸ್ ನೀಡಲಾಗಿದ್ದ ವಿಚಾರ ತೀವ್ರ ಚರ್ಚೆಗೆ ಕಾರಣವಾಗಿತ್ತು.

ಪ್ರತಾಪ್ ಸಿಂಹ ಅವರು ಲೋಕಸಭಾಧ್ಯಕ್ಷ ಓಂ ಬಿರ್ಲಾ ಅವರನ್ನು ಭೇಟಿಯಾಗಿ ಘಟನೆಯ ಬಗ್ಗೆ ವಿವರಣೆ ನೀಡಿದ್ದಾರೆ. ಆರೋಪಿಗಳಲ್ಲಿ ಒಬ್ಬನ ತಂದೆ ತನ್ನ ಕ್ಷೇತ್ರವಾದ ಮೈಸೂರಿನವರು. ಅವರು ನೂತನ ಸಂಸತ್ ಭವನವನ್ನು ವೀಕ್ಷಿಸುವ ಸಲುವಾಗಿ ತನ್ನ ಪಿಎ ಮತ್ತು ಕಚೇರಿಯೊಂದಿಗೆ ಸತತ ಸಂಪರ್ಕದಲ್ಲಿದ್ದರು ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.

ಅಲ್ಲದೆ ಆರೋಪಿಯ ಬಗ್ಗೆ ತನಗೆ ಬೇರೆ ಯಾವುದೇ ಮಾಹಿತಿ ಇಲ್ಲ ಎಂದು ಪ್ರತಾಪ್ ಸಿಂಹ ಅವರು ಸ್ಪೀಕರ್ ಗೆ ಹೇಳಿದ್ದಾರೆಂದು ವರದಿ ತಿಳಿಸಿದೆ.

ಸಂದರ್ಶಕರ ಗ್ಯಾಲರಿಯಲ್ಲಿ ಕುಳಿತಿದ್ದ ಸಾಗರ್ ಶರ್ಮಾ ಮತ್ತು ಮನೋರಂಜನ್ ಎಂಬಿಬ್ಬರು ಗ್ಯಾಸ್ ಕ್ಯಾನಿಸ್ಟರ್ ಗಳೊಂದಿಗೆ ಸದನಕ್ಕೆ ಜಿಗಿದರು. ಹಳದಿ ಗ್ಯಾಸನ್ನು ಹೊರ ಚೆಲ್ಲಿದ ಇಬ್ಬರು ಸ್ಪೀಕರ್ ರತ್ತ ಓಡುವ ಸಂದರ್ಭದಲ್ಲಿ ಸಂಸದರ ಕೈಗೆ ಸಿಕ್ಕಿಬಿದ್ದರು.

ಪ್ರತಾಪ್ ಸಿಂಹ ಅವರ ಹೆಸರಿನಲ್ಲಿ ನೀಡಲಾದ ಸಂದರ್ಶಕರ ಪಾಸ್ ಬಳಸಿ ಆರೋಪಿಗಳು ಲೋಕಸಭೆ ಪ್ರವೇಶಿಸಿದ್ದಾರೆ ಎಂಬುದು ಬಹಿರಂಗವಾದ ನಂತರ, ಮೈಸೂರಿನಲ್ಲಿರುವ ಅವರ ಕಚೇರಿಯ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.