ಮನೆ ರಾಜ್ಯ ಸಾರಿಗೆ ಇಲಾಖೆಗೆ 5500 ಹೊಸ ಬಸ್, 9000 ಸಿಬ್ಬಂದಿ ಶೀಘ್ರದಲ್ಲೇ ನೇಮಕ: ಸಚಿವ ರಾಮಲಿಂಗಾರೆಡ್ಡಿ ಮಾಹಿತಿ

ಸಾರಿಗೆ ಇಲಾಖೆಗೆ 5500 ಹೊಸ ಬಸ್, 9000 ಸಿಬ್ಬಂದಿ ಶೀಘ್ರದಲ್ಲೇ ನೇಮಕ: ಸಚಿವ ರಾಮಲಿಂಗಾರೆಡ್ಡಿ ಮಾಹಿತಿ

0

ಬೆಳಗಾವಿ: ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿನ ಬಸ್ ಹಾಗೂ ಸಿಬ್ಬಂದಿಗಳ ಕೊರತೆಯನ್ನು ಸಚಿವ ರಾಮಲಿಂಗಾ ರೆಡ್ಡಿಯವರು ಒಪ್ಪಿಕೊಂಡಿದ್ದು, ಸಮಸ್ಯೆ ಬಗೆಹರಿಸಲು ಶೀಘ್ರದಲ್ಲೇ 5,500 ಹೊಸ ಬಸ್ ಖರೀದಿ, 9,000 ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳುವುದಾಗಿ ಬುಧವಾರ ಹೇಳಿದರು.

ವಿಧಾನಪರಿಷತ್ತಿನಲ್ಲಿ ಪ್ರಶ್ನೋತ್ತರ ವೇಳೆ ಮಾತನಾಡಿದ ಸಚಿವರು, 2024ರ ಫೆಬ್ರವರಿ ಅಂತ್ಯದ ವೇಳೆಗೆ ಹೊಸ ಬಸ್​ಗಳ ಸೇರ್ಪಡೆ, ಸಿಬ್ಬಂದಿ ನೇಮಕಾತಿ ಕಾರ್ಯ ಅಂತಿಮಗೊಳ್ಳಲಿದ್ದು, ಬಸ್​ಗಳ ಕೊರತೆ ಬಹುತೇಕ ಕಡಿಮೆಯಾಗಲಿದೆ. ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆಗೆ ತಕ್ಕಂತೆ ಸೌಕರ್ಯಗಳನ್ನು ಹೆಚ್ಚಿಸಲಾಗುತ್ತದೆ ಎಂದು ಹೇಳಿದರು.

ಶಕ್ತಿ ಯೋಜನೆ ಜಾರಿಯಾದ ನಂತರ ರಾಜ್ಯದಲ್ಲಿ 80 ಲಕ್ಷ ಇದ್ದ ಪ್ರಯಾಣಿಕರ ಸಂಖ್ಯೆ 1 ಕೋಟಿಗೆ ತಲುಪಿದೆ. ಆದರೆ, ಅದಕ್ಕೆ ತಕ್ಕಂತೆ ಬಸ್ ಗಳು ಇಲ್ಲ. ಹಿಂದೆ ನಾನೇ ಸಾರಿಗೆ ಸಚಿವ ಆಗಿದ್ದಾಗ ರಾಜ್ಯದ ನಾಲ್ಕೂ ನಿಗಮಗಳಿಂದ 24 ಸಾವಿರ ಬಸ್ ಇತ್ತು. ಆದರೆ, ಈಗ ಅದು 23 ಸಾವಿರಕ್ಕೆ ಇಳಿದಿದೆ. ಹೊಸದಾಗಿ ಬಸ್ ಖರೀದಿಯೇ ಮಾಡಿಲ್ಲ. ನೇಮಕಾತಿ ವಿಚಾರದಲ್ಲಿಯೂ ಪ್ರಗತಿ ಆಗಿಲ್ಲ. 13,888 ಜನ ನಿವೃತ್ತಿಯಾಗಿದ್ದರೂ ನೇಮಕಾತಿ ಆಗಿಲ್ಲ. ಈಗ ನಾವು 9 ಸಾವಿರ ಸಿಬ್ಬಂದಿ ನೇಮಕ ಮಾಡುತ್ತಿದ್ದೇವೆ ಎಂದು ತಿಳಿಸಿದರು,

5500 ಹೊಸ ಬಸ್ ಸೇರ್ಪಡೆ ಮಾಡುತ್ತಿದ್ದೇವೆ. ಫೆಬ್ರವರಿ ಕೊನೆಗೆ ಹೊಸ ಬಸ್ ಹಾಗೂ ಸಿಬ್ಬಂದಿ ಎರಡೂ ಬರಲಿವೆ. ಕೋವಿಡ್ ವೇಳೆ 3800 ಬಸ್ ರದ್ದು ಮಾಡಿದ್ದೆವು. ಈಗ ಅದೆನ್ನೆಲ್ಲ ಫೆಬ್ರವರಿ ಕೊನೆಗೆ ಮರಳಿ ಆರಂಭಿಸಲಾಗುತ್ತದೆ. ಕ್ಯಾನ್ಸಲ್ ಆಗಿದ್ದ ಶೆಡ್ಯೂಲ್ ಮರಳಿ ಆರಂಭಿಸುತ್ತೇವೆ. ಬಸ್ ನಿಲ್ದಾಣಗಳಲ್ಲಿ ಸೌಕರ್ಯಗಳನ್ನು ಮಾಡಲಾಗುತ್ತದೆ. ಬಹುತೇಕ ಬಸ್ ನಿಲ್ದಾಣಗಳು ಅಪ್​ ಡೇಟ್ ಆಗಿವೆ. ಶೌಚಾಲಯ ಸರಿಪಡಿಸಲಾಗುತ್ತದೆ ಎಂದು ಭರವಸೆ ನೀಡಿದರು.