ಮನೆ ಸುದ್ದಿ ಜಾಲ ಅಪ್ರಾಪ್ತ ವಯಸ್ಸಿನ ಗರ್ಭಿಣಿ ಪ್ರಕರಣ ಕಂಡುಬಂದಲ್ಲಿ ಅಧಿಕಾರಿಗಳು ದೂರು ದಾಖಲಿಸಿ: ಡಾ.ಕುಮಾರ

ಅಪ್ರಾಪ್ತ ವಯಸ್ಸಿನ ಗರ್ಭಿಣಿ ಪ್ರಕರಣ ಕಂಡುಬಂದಲ್ಲಿ ಅಧಿಕಾರಿಗಳು ದೂರು ದಾಖಲಿಸಿ: ಡಾ.ಕುಮಾರ

0

ಮಂಡ್ಯ: ಜಿಲ್ಲೆಯಲ್ಲಿ ಅಪ್ರಾಪ್ತ ವಯಸ್ಸಿನಲ್ಲಿ‌ ಹೆಣ್ಣು ಮಕ್ಕಳು ಗರ್ಭಿಣಿಯಾದ ಪ್ರಕರಣ ಕಂಡುಬಂದಲ್ಲಿ ಅಧಿಕಾರಿಗಳು ತಕ್ಷಣ ಪೋಕ್ಸೋ ಕಾಯ್ದೆಯಡಿ ದೂರು ದಾಖಲಿಸಬೇಕು. ದೂರು ದಾಖಲಾಗದೆ ಇರುವುದು ಕಂಡು ಬಂದಲ್ಲಿ ಅಧಿಕಾರಿಗಳ ವಿರುದ್ಧ ಪೋಕ್ಸೋ ಕಾಯ್ದೆ ಸೆಕ್ಸ್ ನ್ 3.3ರಡಿ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಡಾ.ಕುಮಾರ ಅವರು ಎಚ್ಚರಿಕೆ‌ ನೀಡಿದರು.

ಅವರು  ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬಾಲ್ಯವಿವಾಹ ತಡೆಗಟ್ಟುವ ಬಗ್ಗೆ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು.ಅಪ್ರಾಪ್ತ ಗರ್ಭಿಣಿ ಹೆಣ್ಣು ಮಕ್ಕಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ  ಅಧಿಕಾರಿಗಳು ಅಂಗನವಾಡಿ ಕಾರ್ಯಕರ್ತೆಯರ ಮೂಲಕ ವಿವಿಧ ಸೌಲಭ್ಯ ಒದಗಿಸುವ ಸಂದರ್ಭದಲ್ಲಿ  ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಅವರ ಬಳಿ ಚಿಕಿತ್ಸೆಗೆ ಬಂದಾಗ ಪತ್ತೆ ಹಚ್ಚಬಹುದು. ಪ್ರಕರಣಗಳ ಬಗ್ಗೆ ತಿಳಿದಿದ್ದರೂ ಅವರ ಮೇಲೆ ಕ್ರಮ ಜರುಗಿಸದೇ ಇದ್ದಲ್ಲಿ ಕರ್ತವ್ಯ ಲೋಪವಾಗುತ್ತದೆ ಎಂದರು.

ಗ್ರಾಮದ ಪ್ರತಿಯೊಂದು ಮನೆಗಳಿಗೂ ಮಾಹಿತಿ ತಲುಪಿಸುವ ಹಾಗೂ ಪಡೆಯಲು ಆರೋಗ್ಯ ಇಲಾಖೆಯಲ್ಲಿ ಆಶಾ ಕಾರ್ಯಕರ್ತೆ ಯರು ಹಾಗೂ ಮಹಿಳಾ ಮತ್ರು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಇದ್ದಾರೆ.ಇಂತಹ ವ್ಯವಸ್ಥೆ ಇರುವಾಗ ಬಾಲ್ಯ ವಿವಾಹ  ಹಾಗೂ ಭ್ರೂಣ ಹತ್ಯೆ ಪ್ರಕರಣಗಳು ನಡೆಯದಂತೆ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಾಹಿಸಿ ಎಂದರು.

ಬಾಲ್ಯವಿವಾಹ ಪ್ರಕರಣ ದಾಖಲಿಸುವುದು ಅಧಿಕಾರಿಗಳ ಉದ್ದೇಶವಾಗಬಾರದು,ಬಾಲ್ಯ ವಿವಾಹ ತಡೆಗಟ್ಟುವುದು ಮುಖ್ಯ. ಬಾಲ್ಯ ವಿವಾಹ ತಡೆಗಟ್ಟುವಲ್ಲಿ ಅಧಿಕಾರಿಗಳು ವಿಫಲವಾದರೇ ಬಾಲ್ಯ ವಿವಾಹ ತಡೆಯದ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದರು.

ಬಾಲ್ಯವಿವಾಹದಿಂದಾಗುವ ದುಷ್ಪರಿಣಾಮಗಳು ಹಾಗೂ ಬಾಲ್ಯವಿವಾಹ ನಿಷೇಧ ಕಾಯ್ದೆ 2006 ರಡಿ ನೀಡಲಾಗುವ ಶಿಕ್ಷೆಯ ಬಗ್ಗೆ ಶಾಲಾ ಹಾಗೂ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಮಾಹಿತಿ ನೀಡಿ. ಗ್ರಾಮಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಿ ಎಂದರು.

ಜಿಲ್ಲಾ ಆರೋಗ್ಯ ಅಧಿಕಾರಿ, ತಾಲ್ಲೂಕು ಆರೋಗ್ಯ ಅಧಿಕಾರಿ ಹಾಗೂ ಮಹಿಳಾ ಮತ್ತು ಕಲ್ಯಾಣಾಧಿಕಾರಿ ಬಾಲ್ಯವಿವಾಹ ಹಾಗೂ ಅಪ್ರಾಪ್ತ ಹೆಣ್ಣು ಮಕ್ಕಳ ಗರ್ಭಿಣಿ ಪ್ರಕರಣದಲ್ಲಿ ನಿರ್ಲಕ್ಷ್ಯ ವಹಿಸಿದರೆ ಅದು ಸಮಾಜಕ್ಕೆ ಮಾಡುವ ಅನ್ಯಾಯವಾಗುತ್ತದೆ ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್ ಅವರು ಮಾತನಾಡಿ ಅಧಿಕಾರಿಗಳು ಸರ್ಕಾರ ರೂಪಿಸುವ ಕಾಯ್ದೆ ನಿಯಮಗಳಂತೆ ಕಾರ್ಯ ನಿರ್ವಹಿಸಬೇಕು.

ಅಪ್ರಾಪ್ತ ವಯಸ್ಸಿನ ಗಭೀರ್ಣಿಯರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾತಿಯಾದಾಗ ವೈದ್ಯರು ತಕ್ಷಣ ಸಂಬಂಧಿಸಿದ ಇಲಾಖೆಗೆ ಮಾಹಿತಿ ನೀಡಿ ದೂರು ದಾಖಲಾಗಬೇಕು ಎಂದರು.

ಬಾಲ್ಯವಿವಾಹ ಪ್ರಕರಣ ತಡೆಗಟ್ಟಲು  ಶಾಲಾ ಶಿಕ್ಷಕರು,ಗ್ರಾಮ ಲೆಕ್ಕಿಗರು, ಪಿ‌ಡಿ‌ಓ,ಪೊಲೀಸ್ ಸಿಬ್ಬಂದಿಗಳು  ಸಹ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು.ಶಾಲಾ ಶಿಕ್ಷಕರು ಶಾಲೆಯಿಂದ ಮಕ್ಕಳು ಹೊರ ಉಳಿದರೆ ಅದರ ಬಗ್ಗೆ ಸರಿಯಾದ ಮಾಹಿತಿ ಪಡೆದುಕೊಳ್ಳಬೇಕು. ಪ್ರೌಢಶಾಲಾ ವಿದ್ಯಾಭ್ಯಾಸ ಮುಗಿಸಿದ ನಂತರ ವಿದ್ಯಾರ್ಥಿನಿಯರು ಕಾಲೇಜಿಗೆ ದಾಖಲಾಗಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಅವರು ಮಾತನಾಡಿ ಜಿಲ್ಲೆಯಲ್ಲಿ ಬಾಲ್ಯವಿವಾಹ, ಪೋಕ್ಸೋ ಪ್ರಕರಣ ಸೇರಿದಂತೆ ಯಾವುದೇ ಪ್ರಕರಣಗಳಿರಲಿ ದೂರು ದಾಖಲಿಸಲು ಹಾಗೂ ತಡೆಗಟ್ಟಲು  ಪ್ರಕರಣಗಳು ಕಂಡು ಬಂದ ತಕ್ಷಣ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ದೂರು ದಾಖಲಿಸಿ.ವಿಳಂಬವಾಗಿ ಹಾಗೂ ಅಸಡ್ಡೆಯಿಂದ ದೂರನ್ನು ನಿಧಾನವಾಗಿ ದಾಖಲಿಸಿದರೇ ಅಧಿಕಾರಿಗಳು ಸಹ ತಪ್ಪಿತಸ್ಥರಾಗುತ್ತರೆ ಎಂದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮೋಹನ್,ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ರಾಜಮೂರ್ತಿ,ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಶಿವರಾಮೇಗೌಡ,ತಹಶೀಲ್ದಾರ್ ಶಿವಕುಮಾರ್ ಬಿರಾದಾರ್,ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.