ಮುಂಬೈ: ಇಂಗ್ಲೆಂಡ್ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡ 347 ರನ್ ಗಳ ಭರ್ಜರಿ ಜಯ ದಾಖಲಿಸಿ, ಜಾಗತಿಕ ಕ್ರಿಕೆಟ್ ನಲ್ಲಿ ಐತಿಹಾಸಿಕ ದಾಖಲೆ ನಿರ್ಮಿಸಿದೆ.
ನವೀ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಸರಣಿಯ ಏಕೈಕ ಟೆಸ್ಟ್ ಪಂದ್ಯದಲ್ಲಿ ಎರಡೂ ಇನ್ನಿಂಗ್ಸ್ ಗಳಲ್ಲಿ ಪ್ರಾಬಲ ಮೆರೆದ ಭಾರತ ಮಹಿಳಾ ಕ್ರಿಕೆಟ್ ತಂಡ ಅರ್ಹವಾಗಿಯೇ ಜಯ ದಾಖಲಿಸಿದೆ.
2ನೇ ಇನ್ನಿಂಗ್ಸ್ ನಲ್ಲಿ ಭಾರತ ನೀಡಿದ್ದ 479 ರನ್ ಗಳ ಬೃಹತ್ ಮೊತ್ತವನ್ನು ಬೆನ್ನು ಹತ್ತಿದ ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡ ಕೇವಲ 131 ರನ್ ಗಳಿಗೆ ಆಲೌಟ್ ಆಗುವ ಮೂಲಕ ಭಾರತ ಎದುರು 347 ಅಂತರದಲ್ಲಿ ಹೀನಾಯ ಸೋಲುಕಂಡಿತು.
ಈ ಭರ್ಜರಿ ಗೆಲುವಿನ ಮೂಲಕ ಭಾರತ ತಂಡ ಮಹಿಳಾ ಕ್ರಿಕೆಟ್ ಜಗತ್ತಿನ ಅತೀ ದೊಡ್ಡ ಟೆಸ್ಟ್ ಗೆಲುವು ಸಾಧಿಸಿದಂತಾಗಿದೆ.
ಈ ಹಿಂದೆ 1998ರಲ್ಲಿ ಶ್ರೀಲಂಕಾದ ಕೊಲಂಬೋದಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ಮಹಿಳಾ ತಂಡವನ್ನು ಶ್ರೀಲಂಕಾ ಮಹಿಳಾ ತಂಡ 309ರನ್ ಗಳ ಅಂತರದಲ್ಲಿ ಮಣಿಸಿತ್ತು. ಇದು ಈ ವರೆಗಿನ ಮಹಿಳಾ ಕ್ರಿಕೆಟ್ ತಂಡವೊಂದರ ಅತೀ ದೊಡ್ಡ ಗೆಲುವಾಗಿತ್ತು. ಇದೀಗ ಈ ದಾಖಲೆಯನ್ನು ಭಾರತದ ವನಿತೆಯರ ತಂಡ ಮುರಿದಿದ್ದು, ಅದೂ ಕೂಡ ಪ್ರಬಲ ಇಂಗ್ಲೆಂಡ್ ತಂಡದ ವಿರುದ್ಧ ಎಂಬುದು ಕುತೂಹಲಕಾರಿಯಾಗಿದೆ.