ಮನೆ ಸ್ಥಳೀಯ ಮೈಸೂರಿನ ಮನೋರಂಜನ್‌ ಮನೆಗೆ ದಿಲ್ಲಿ ವಿಶೇಷ ತನಿಖಾ ತಂಡ ಭೇಟಿ:  ಕುಟುಂಬದವರ ವಿಚಾರಣೆ

ಮೈಸೂರಿನ ಮನೋರಂಜನ್‌ ಮನೆಗೆ ದಿಲ್ಲಿ ವಿಶೇಷ ತನಿಖಾ ತಂಡ ಭೇಟಿ:  ಕುಟುಂಬದವರ ವಿಚಾರಣೆ

0

ಮೈಸೂರು: ಸಂಸತ್‌ ಭವನಕ್ಕೆ ನುಗ್ಗಿ ದಾಂಧಲೆ ನಡೆಸಿದ್ದ ಮೈಸೂರಿನ ಮನೋರಂಜನ್‌ ಮನೆಗೆ ದಿಲ್ಲಿ ವಿಶೇಷ ತನಿಖಾ ತಂಡದ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಲ್ಲದೆ, ಮನೋರಂಜನ್‌ ಕುಟುಂಬದವರನ್ನು ವಿಚಾರಣೆ ನಡೆಸಿದರು.

ಇಂಟೆಲಿಜೆನ್ಸ್ ಬ್ಯೂರೋ ವಿಭಾಗದ ಇಬ್ಬರು, ಇಬ್ಬರು ದಿಲ್ಲಿ ಪೊಲೀಸರು ಹಾಗೂ ಮಹಿಳಾ ಸಿಬಂದಿಯನ್ನೊಳಗೊಂಡ ತನಿಖಾ ತಂಡ ಸೋಮವಾರ ಬೆಳಗ್ಗೆ 11ಕ್ಕೆ ವಿಜಯನಗರ 2ನೇ ಹಂತದಲ್ಲಿರುವ ಮನೋರಂಜನ್‌ ಮನೆಗೆ ತೆರಳಿ, ಆತನ ಕೊಠಡಿಯನ್ನು ತಪಾಸಣೆ ಮಾಡಿತು.

ದಿಲ್ಲಿಯ ಸ್ಪೆಷಲ್‌ ಸೆಲ್‌ ಪೊಲೀಸರು ವಿಚಾರಣೆ ನಡೆಸಿದ್ದು, ಇವರಿಗೆ ನಗರದಲ್ಲೇ ಉಳಿದುಕೊಂಡಿದ್ದ ಕೇಂದ್ರ ಮತ್ತು ರಾಜ್ಯ ಗುಪ್ತಚರ ಇಲಾಖೆ ಅಧಿಕಾರಿಗಳು ಕೈಜೋಡಿಸಿದರು.

ಮೊದಲೇ ಪ್ರಶ್ನೆಗಳನ್ನು ಸಿದ್ಧಪಡಿಸಿಕೊಂಡು ಬಂದಿದ್ದ ತಂಡ, ಬೆಳಗ್ಗೆ 11ರಿಂದ ಸಂಜೆ 6.30ರ ವರೆಗೆ ಮನೆಯವರನ್ನು ವಿಚಾರಣೆ ನಡೆಸಿದೆ ಎಂದು ತಿಳಿದು ಬಂದಿದೆ.

ತನಿಖಾ ತಂಡಕ್ಕೆ ಭಾಷೆಯ ತೊಡಕು ಹಿನ್ನೆಲೆಯಲ್ಲಿ ಸ್ಥಳೀಯ ಭಾಷಾಂತರಕಾರರ ಸಹಾಯ ಪಡೆದು ವಿಚಾರಣೆ ನಡೆಸಲಾಗಿದೆ.

ಮನೋರಂಜನ್‌ ತಂದೆ ದೇವರಾಜೇ ಗೌಡ ಅವರು ತೋಟದ ಮನೆಗೆ ತೆರಳಿದ್ದರಿಂದ ತಾಯಿ ಶೈಲಜಾ ಅವರನ್ನು ತನಿಖಾ ತಂಡ ವಿಚಾರಣೆಗೆ ಒಳಪಡಿಸಿತು. ಅನಂತರ ಮನೋರಂಜನ್‌ ಕೊಠಡಿಯನ್ನು ತೆರೆದು ಅಲ್ಲಿದ್ದ ಪುಸ್ತಕ ಮತ್ತು ಆತನಿಗೆ ಸೇರಿದ ಎಲ್ಲ ದಾಖಲೆಗಳನ್ನು ಅಧಿಕಾರಿಗಳು ಕೊಂಡೊಯ್ದರು. ವಿಜಯನಗರ ಪೊಲೀಸರು ಮನೆಯ ಬಳಿ ಭದ್ರತೆ ಒದಗಿಸಿದ್ದರು. ಮನೋರಂಜನ್‌ ಬ್ಯಾಂಕ್‌ ಖಾತೆ, ಆತನ ಫೋನ್‌ ಗೆ ಬಂದ ಕರೆಗಳ ವಿವರ ಹಾಗೂ ಮತ್ತೊಬ್ಬ ಆರೋಪಿ ಸಾಗರ್‌ ಶರ್ಮ ಮೈಸೂರಿನಲ್ಲಿ ಎಲ್ಲೆಲ್ಲಿ ಓಡಾಡಿದ್ದ ಎಂಬ ಮಾಹಿತಿಯನ್ನೂ ತಂಡ ಕಲೆ ಹಾಕುತ್ತಿದೆ.