ಮನೆ ಕಾನೂನು ರೂಪಾ ಮೌದ್ಗಿಲ್ ವಿರುದ್ಧ ರೋಹಿಣಿ ಸಿಂಧೂರಿ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆಗೆ ಸುಪ್ರೀಂ ಕೋರ್ಟ್ ತಡೆ

ರೂಪಾ ಮೌದ್ಗಿಲ್ ವಿರುದ್ಧ ರೋಹಿಣಿ ಸಿಂಧೂರಿ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆಗೆ ಸುಪ್ರೀಂ ಕೋರ್ಟ್ ತಡೆ

0

ಐಪಿಎಸ್ ಅಧಿಕಾರಿ ಡಿ ರೂಪಾ ಮೌದ್ಗಿಲ್ ವಿರುದ್ಧ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹೂಡಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಗೆ ಸುಪ್ರೀಂ ಕೋರ್ಟ್ ಡಿಸೆಂಬರ್ 15ರಂದು ಮಧ್ಯಂತರ ತಡೆಯಾಜ್ಞೆ ವಿಧಿಸಿದೆ.

ಮಾಧ್ಯಮಗಳೆದುರು ಮಾತನಾಡದಂತೆ ಕರ್ನಾಟಕದ ಈ ಇಬ್ಬರು ಹಿರಿಯ ನಾಗರಿಕ ಸೇವಾ ಅಧಿಕಾರಿಗಳಿಗೆ ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಪಂಕಜ್ ಮಿತ್ತಲ್‌ ಅವರನ್ನೊಳಗೊಂಡ ಪೀಠ ನಿರ್ದೇಶನ ನೀಡಿತು.

“ಈ ಅರ್ಜಿಯ ಕ್ರಿಮಿನಲ್ ಪ್ರಕರಣದ ವಿಚಾರ ಮುಂದುವರೆಯುವುದಿಲ್ಲ… ಪಕ್ಷಕಾರರ ನಡುವೆ ಬಾಕಿ ಇರುವ ಎಲ್ಲಾ ವಿವಾದಗಳನ್ನು ಪರಿಹರಿಸಲು ಪ್ರಯತ್ನಿಸಲಾಗುತ್ತಿದೆ ಎಂಬ ಅಂಶ ಪರಿಗಣಿಸಿ, ಅವರಲ್ಲಿ ಯಾರೂ ಸಾಮಾಜಿಕ ಮತ್ತು ಮುದ್ರಣ ಮಾಧ್ಯಮಗಳಿಗೆ ಸಂದರ್ಶನ ಅಥವಾ ಇನ್ನಾವುದೇ ಮಾಹಿತಿಯನ್ನು ಯಾವುದೇ ರೂಪದಲ್ಲಿ ನೀಡಬಾರದು” ಎಂದು ನ್ಯಾಯಪೀಠ ನಿರ್ದೇಶಿಸಿದೆ.

ಪ್ರಕರಣದ ಮುಂದಿನ ವಿಚಾರಣೆ ಜನವರಿ 12, 2024ರಂದು ನಡೆಯಲಿದೆ.

ಡಿಸೆಂಬರ್ 15 ರಂದು (ಶುಕ್ರವಾರ) ರೂಪಾ ಅಫಿಡವಿಟ್‌ನಲ್ಲಿ ನೀಡಿದ ಭರವಸೆಯನ್ನು ನ್ಯಾಯಪೀಠ ಪರಿಶೀಲಿಸಿತು.

ಇದನ್ನು ಯಾವುದೇ ಆದೇಶದ ಪ್ರಕಾರ ಹಾಜರುಪಡಿಸುತ್ತಿಲ್ಲ, ಬದಲಿಗೆ ಪ್ರಕರಣ ಮುಕ್ತಾಯಗೊಳಿಸಲು ರೂಪಾ ಅವರಿಗೆ ನೀಡಿದ ಸಲಹೆಯ ಮೇರೆಗೆ ಹಾಜರುಪಡಿಸಲಾಗುತ್ತಿದೆ ಎಂದು ಪೀಠ ಮೌಖಿಕವಾಗಿ ತಿಳಿಸಿತು.

ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿಲ್ಲದ ಹೇಳಿಕೆಗಳು ಸೇರಿದಂತೆ ಅಧಿಕಾರಿಯ ವಿರುದ್ಧದ ತನ್ನ ಎಲ್ಲಾ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ತೆಗೆದುಹಾಕಿರುವುದಾಗಿ ರೂಪಾ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಿದರು.

ಇದನ್ನು ದಾಖಲೆಯಲ್ಲಿ ಪರಿಗಣಿಸಿದ ಸರ್ವೋಚ್ಚ ನ್ಯಾಯಾಲಯವು ಮಧ್ಯಂತರ ಕ್ರಮವಾಗಿ ಮಾನನಷ್ಟ ಮೊಕದ್ದಮೆಯನ್ನು ತಡೆಹಿಡಿಯಿತು.

ಕಳೆದ ಆಗಸ್ಟ್‌ನಲ್ಲಿ ಕರ್ನಾಟಕ ಹೈಕೋರ್ಟ್‌ ಹೊರಡಿಸಿದ್ದ ಆದೇಶ ಪ್ರಶ್ನಿಸಿ ರೂಪಾ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯಿತು. ರೂಪಾ ವಿರುದ್ಧ ರೋಹಿಣಿ ದಾಖಲಿಸಿದ್ದ ಕ್ರಿಮಿನಲ್‌ ಮಾನನಷ್ಟ ಮೊಕದ್ದಮೆ ರದ್ದುಗೊಳಿಸಲ ಆಗ ಹೈಕೋರ್ಟ್‌ ನಿರಾಕರಿಸಿತ್ತು.

ರೂಪಾ ತನ್ನ ವಿರುದ್ಧ ಫೇಸ್‌ಬುಕ್‌ ಪೋಸ್ಟ್‌ಗಳಲ್ಲಿ ವಿವಿಧ ಆರೋಪ ಮಾಡಿದ್ದಾರೆ ಎಂಬುದನ್ನು ಫೆಬ್ರವರಿ 18 ರಂದು ರೋಹಿಣಿ ಗಮನಿಸಿದ್ದರು. ರೋಹಿಣಿ ಅವರು ತಮ್ಮ ಖಾಸಗಿ ಚಿತ್ರಗಳನ್ನು ಐಎಎಸ್‌ ಅಧಿಕಾರಿಗಳೊಂದಿಗೆ ಹಂಚಿಕೊಂಡಿದ್ದಾರೆ ಎಂದು ರೂಪಾ ಈ ಪೋಸ್ಟ್‌ ಗಳಲ್ಲಿ ಆರೋಪಿಸಿದ್ದರು.

ಇದು ಇಬ್ಬರ ನಡುವೆ ಸಾರ್ವಜನಿಕ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿತು. ಇದರಿಂದಾಗಿ ಈ ಇಬ್ಬರೂ ಅಧಿಕಾರಿಗಳನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡುವಂತಾಗಿತ್ತು.

ಫೆಬ್ರವರಿ 21 ರಂದು ರೂಪಾ ಅವರಿಗೆ ರೋಹಿಣಿ ಲೀಗಲ್ ನೋಟಿಸ್ ನೀಡಿದ್ದು, ಬೇಷರತ್ತಾಗಿ ಕ್ಷಮೆಯಾಚಿಸಬೇಕು ಮತ್ತು ತನ್ನ ಪ್ರತಿಷ್ಠೆಗೆ ಧಕ್ಕೆ ತಂದುದಲ್ಲದೆ ತನಗೆ ಮಾನಸಿಕ ಯಾತನೆ ಉಂಟುಮಾಡಿದ್ದಕ್ಕಾಗಿ 1 ಕೋಟಿ ರೂ.ಗಳ ಪರಿಹಾರ ನೀಡುವಂತೆ ಕೋರಿದರು.

ಮಾರ್ಚ್ 24 ರಂದು ರೋಹಿಣಿ ಸಲ್ಲಿಸಿದ್ದ ಖಾಸಗಿ ಮೊಕದ್ದಮೆಯ ವಿಚಾರಣೆ ನಡೆಸಿದ ಬೆಂಗಳೂರು ನ್ಯಾಯಾಲಯು ರೂಪಾ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡುವಂತೆ ಆದೇಶಿಸಿತ್ತು.

ಇದನ್ನು ರದ್ದುಗೊಳಿಸುವಂತೆ ಕೋರಿ ರೂಪಾ ಹೈಕೋರ್ಟ್ ಮೊರೆ ಹೋದರು. ಆಗಸ್ಟ್ 21ರಂದು ಕರ್ನಾಟಕ ಹೈಕೋರ್ಟ್ ಅವರ ಮನವಿಯನ್ನು ತಿರಸ್ಕರಿಸಿತು.

ಸಾಮಾಜಿಕ ಮಾಧ್ಯಮ ಖಾತೆ ಮತ್ತು ಮುದ್ರಣ ಮಾಧ್ಯಮಗಳಲ್ಲಿ ರೂಪಾ ಅವರ ಹೇಳಿಕೆಗಳು ಕ್ರಿಮಿನಲ್ ವಿಚಾರಣೆಯ ಅಗತ್ಯವಿದೆ ಎನ್ನುತ್ತಿವೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅಭಿಪ್ರಾಯಪಟ್ಟರು. ಇದರಿಂದಾಗಿ ರೂಪಾ ಸುಪ್ರೀಂ ಕೋರ್ಟ್‌ ಕದ ತಟ್ಟಿದ್ದರು.

ಡಿಸೆಂಬರ್ 13 ರಂದು (ಬುಧವಾರ), ಸುಪ್ರೀಂ ಕೋರ್ಟ್ ಪ್ರಕರಣದಲ್ಲಿ ರಾಜೀ ಸಂಧಾನಕ್ಕೆ ಮುಂದಾಗುವಂತೆ ಶಿಫಾರಸು ಮಾಡಿತ್ತು. ಇಂತಹ ಅಧಿಕಾರಿಗಳ ನಡುವಿನ ಸಾರ್ವಜನಿಕ ವೈಮನಸ್ಸು ಸರ್ಕಾರ ಮತ್ತು ಅದರ ಪ್ರತಿಷ್ಠೆಗೆ ಅಪಮಾನಕಾರಿ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ‘ಕೆಸರೆರಚಾಟ’ ನಿಲ್ಲಿಸುವಂತೆ ಈ ಇಬ್ಬರು ಅಧಿಕಾರಿಗಳಿಗೆ ನ್ಯಾ. ಓಕಾ ಸಲಹೆ ನೀಡಿದ್ದರು.

ಅದಾದ ಒಂದು ದಿನದ ನಂತರ, ಡಿಸೆಂಬರ್ 14 ರಂದು (ಗುರುವಾರ) ಸುಪ್ರೀಂ ಕೋರ್ಟ್ ರೋಹಿಣಿ ವಿರುದ್ಧದ ಎಲ್ಲಾ ಸಾಮಾಜಿಕ ಮಾಧ್ಯಮ ಪೋಸ್ಟ್ಗಳನ್ನು ತೆಗೆದುಹಾಕುವುದಾಗಿ ಮತ್ತು ಕ್ಷಮೆಯಾಚಿಸುವುದಾಗಿ ಭರವಸೆ ನೀಡುವಂತೆ ರೂಪಾ ಅವರಿಗೆ ತಾಕೀತು ಮಾಡಿತು.

ಅಧಿಕಾರಿಗಳು ಸಂಘರ್ಷ ಮುಂದುವರಿಸಿ ಗಮನ ಕೇಂದ್ರೀಕರಿಸದೆ ಹೋದಲ್ಲಿ, ಸರ್ಕಾರದ ಆಡಳಿತ ಸ್ಥಗಿತಗೊಳ್ಳುತ್ತದೆ ಎಂದು ಪೀಠ ಹೇಳಿದೆ.

ರೂಪಾ ಅವರ ಪರವಾಗಿ ಹಿರಿಯ ವಕೀಲ ಆದಿತ್ಯ ಸೋಂಧಿ ಮತ್ತು ವಕೀಲ ಶುಭಾಂಶು ಪಾಧಿ ವಾದ ಮಂಡಿಸಿದರು.

ರೋಹಿಣಿ ಸಿಂಧೂರಿ ಅವರನ್ನು ಹಿರಿಯ ನ್ಯಾಯವಾದಿ ವಿನಯ್ ನವರೆ , ವಕೀಲ ಆರ್.ಇಲಾಮ್ ಪರಿದಿ ಪ್ರತಿನಿಧಿಸಿದ್ದರು.