ಮನೆ ರಾಜ್ಯ ‘ನಿಮ್ಮ ಋಣ ಹೇಗೆ ತೀರಿಸಲಿ ? ‘:  ಭಾವುಕರಾಗಿ ನುಡಿದ ಸಚಿವ ಪ್ರಿಯಾಂಕ್ ಖರ್ಗೆ

‘ನಿಮ್ಮ ಋಣ ಹೇಗೆ ತೀರಿಸಲಿ ? ‘:  ಭಾವುಕರಾಗಿ ನುಡಿದ ಸಚಿವ ಪ್ರಿಯಾಂಕ್ ಖರ್ಗೆ

0

ಕೊಲ್ಲೂರು: ಚಿತ್ತಾಪುರದ ಬಿಜೆಪಿ ಅಭ್ಯರ್ಥಿ ಆಯ್ಕೆ ಹಾಗೂ ಅಕ್ಕಿ ಕಳ್ಳನ ಪರವಾಗಿ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಪ್ರಚಾರ ಸೇರಿದಂತೆ ಹಲವಾರು ವಿಷಯಗಳಿಗಾಗಿ ಕಳೆದ ವಿಧಾನಸಭೆ ಚುನಾವಣೆ ರಾಷ್ಟ್ರದ ಗಮನ ಸೆಳೆದಿತ್ತು. ಮತ್ತೊಂದು ಕಡೆ ನನ್ನ ವೈಯಕ್ತಿಕ‌ ಕಾರಣಗಳಿಂದಾಗಿ ಜಾಸ್ತಿ ಪ್ರಚಾರಕ್ಕೆ ಬಂದಿರಲಿಲ್ಲ. ಆದರೂ ನೀವೆಲ್ಲ ಸೇರಿಕೊಂಡು ಪ್ರಚಾರ ಮಾಡಿ ನನ್ನ ಗೆಲ್ಲಿಸಿದ್ದೀರಿ. ನಿಮ್ಮ ಋಣ ಯಾವ ರೀತಿ ತೀರಿಸಬೇಕೆಂದು ನನಗೆ ತಿಳಿಯುತ್ತಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಭಾವುಕರಾಗಿ ನುಡಿದರು.

2018-19 ನೇ ಸಾಲಿನ ಡಿಎಮ್ಎಫ್ ಯೋಜನೆಯಡಿಯಲ್ಲಿ ಕೊಲ್ಲೂರು ಗ್ರಾಮದಿಂದ ಬನ್ನಟ್ಟಿಯವರೆಗೆ ರೂ 570 ಲಕ್ಷ ವೆಚ್ಚದಲ್ಲಿ ರಸ್ತೆ ಸುಧಾರಣೆ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿ ಅವರು ಮಾತನಾಡುತ್ತಿದ್ದರು.

ರಾಜ್ಯ ಸರ್ಕಾದಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವನಾಗಿ ಮುಂದಿನ 5 ವರ್ಷಗಳಲ್ಲಿ ಸಾಕಷ್ಟು ಅನುದಾನ ತಂದು ಕ್ಷೇತ್ರದ ಸಮಗ್ರ ಅಭಿವೃದ್ದಿ ಮಾಡುತ್ತೇನೆ ಎಂದು ಭರವಸೆ ನೀಡಿದ ಸಚಿವರು ರಾಜ್ಯ ಸರ್ಕಾರ ಐದು ತಿಂಗಳಲ್ಲಿಯೇ ನಾಲ್ಕು ಗ್ಯಾರಂಟಿಗಳನ್ನು ಜಾರಿಗೆ ತರುತ್ತೇವೆ ಎಂದರು.

ಗೃಹ ಲಕ್ಷ್ಮೀ, ಗೃಹಜ್ಯೋತಿ, ಶಕ್ತಿ, ಹಾಗೂ ಅನ್ನಭಾಗ್ಯ ಯೋಜನೆಗಳನ್ನು ಟೀಕಿಸುವ ಬಿಜೆಪಿಗರು ಈ ಎಲ್ಲ ಯೋಜನೆಗಳ ಮೊದಲ ಫಲಾನುಭವಿಗಳು ಅವರೇ ಆಗಿದ್ದಾರೆ ಎಂದ ಸಚಿವರು ಶಕ್ತಿ ಯೋಜನೆಯ ಲಾಭ ಪಡೆಯುತ್ತಿರುವ ಮಹಿಳೆಯರು ದೇವಸ್ಥಾನಕ್ಕೆ ಭೇಟಿ‌ ನೀಡುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲವೇ? ಇದಕ್ಕೆ ಯಾಕೆ ಬಿಜೆಪಿ ವಿರೋಧಿಸುತ್ತಿದೆ ಎಂದು ಟೀಕಿಸಿದರು.

ರಾಜ್ಯದ ಆರು ಕೋಟಿ ಜನರಲ್ಲಿ 4.80 ಕೋಟಿ ಜನರು ಈ ಯೋಜನೆಗಳ ಲಾಭ ಪಡೆಯುತ್ತಿದ್ದಾರೆ. ಇವರಲ್ಲಿ ಕೇವಲ ಕಾಂಗ್ರೆಸ್‌ ನವರು ಮಾತ್ರವೇ ಇದ್ದಾರೆಯೇ? ಬಿಜೆಪಿಗರು ಇಲ್ಲವೇ? ಆರ್ಥಿಕ ಸ್ಥಿರತೆಗಾಗಿ ಪ್ರತಿ ತಿಂಗಳು ರೂ 2000 ಧನ ಸಹಾಯ ಮಾಡುವ ಗೃಹಲಕ್ಷ್ಮಿ ಯೋಜನೆ ಜಾರಿಗೆ ತರಲಾಗಿದೆ. ಇದರಿಂದಾಗಿ ಗೃಹಿಣಿಯರು ಮನೆಯ ಸಂಸಾರಕ್ಕಾಗಿ ಅದೇ ಹಣ ಬಳಕೆ ಮಾಡುತ್ತಿದ್ದಾರೆ. ಇದು ಜನಪರ ಆಡಳಿತಧ್ಯೋತಕವಾಗಿದೆ ಎಂದರು.

ಗ್ರಾಮೀಣ ಭಾಗದಲ್ಲಿ ಪ್ರತಿ ಪಂಚಾಯತಿಗಳಿಗೆ ಹೈಬ್ರಿಡ್ ಲೈಬ್ರರಿ ನಿರ್ಮಾಣ ಮಾಡುವ ಗುರಿ ಇದ್ದು ಮುಂದಿನ ಎರಡು ವರ್ಷಗಳಲ್ಲಿ ಲೈಬ್ರರಿಗಳನ್ನು ಅರಿವು ಕೇಂದ್ರ ಎನ್ನುವ ಹೆಸರಿನಲ್ಲಿ ಸ್ಥಾಪಿಸಲಾಗುವುದು. ಜೊತೆಗೆ ಬಸವ ತತ್ವದ ಮಾದರಿಯಲ್ಲಿ ಪ್ರತಿ ಗ್ರಾಮ ಪಂಚಾಯತಿಯಲ್ಲಿ ರೂ 25 ಲಕ್ಷ ಖರ್ಚು ಮಾಡಿ ಮಹಿಳೆಯರಿಗಾಗಿ‌ ಸಾಮೂಹಿಕ ಶೌಚಾಲಯ ನಿರ್ಮಾಣ ಮಾಡಲಾಗುವುದು. ಅಂತಹ ಶೌಚಾಲಯಗಳ ನಿರ್ವಹಣೆ ನೀವೇ ಮಾಡಿಕೊಳ್ಳಬೇಕು ಎಂದರು.

ಗ್ರಾಮ ಪಂಚಾಯತಿಗಳ ಸಮರ್ಪಕ ನಿರ್ವಹಣೆ ಮಾಡುವ ಉದ್ದೇಶದಿಂದ ಪಂಚತಂತ್ರ ಭಾಗ- 2 ಅಡಿಯಲ್ಲಿ ಎಲ್ಲವೂ ಆನ್ ಲೈನ್ ಆಗುವಂತೆ ಜಾರಿಗೊಳಿಸಲಾಗುತ್ತಿದೆ. ಪಂಚಾಯತಿಯ ಪ್ರತಿ ಸಭೆಗಳ ಕುರಿತು ಆನ್ ಲೈನ್ ನಲ್ಲಿ ಕಡ್ಡಾಯವಾಗಿ ನಮೂದಿಸಬೇಕು. ಸರಿಯಾಗಿ ಕೆಲಸ‌ ಮಾಡದೆ ತಪ್ಪಿಸಿಕೊಳ್ಳುವ ಪಿಡಿಓಗಳಿಗೆ ಕಡಿವಾಣ ಹಾಕಲು ಇ- ಬಯಾಮೆಟ್ರಿಕ್‌ ವ್ಯವಸ್ಥೆಯಲ್ಲಿ ಅವರು ಥಂಬ್ ಹಾಕುವ ವ್ಯವಸ್ಥೆ ಮಾಡಲಾಗುವುದು‌. ಎಷ್ಟು ದಿನ ಕೆಲಸ ಮಾಡುತ್ತಾರೋ ಅಷ್ಟೆ ದಿನದ ಸಂಬಳ ನೀಡಲಾಗುವುದು ಎಂದರು.

ವೇದಿಕೆಯ ಮೇಲೆ ಮಹೆಮೂದ್ ಸಾಹೇಬ್, ಭೀಮಣ್ಣ ಸಾಲಿ, ಶಿವಾನಂದ ಪಾಟೀಲ, ಅಜೀಜ್ ಸೇಠ್ ಉಪಸ್ಥಿತರಿದ್ದರು.