ಮೈಸೂರು: ಭ್ರೂಣ ಪತ್ತೆ, ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ದಾಳಿ ಮುಂದುವರಿಸಿದ್ದು, ಮೈಸೂರಿನ ಮತ್ತೊಂದು ಆಸ್ಪತ್ರೆಗೆ ಬೀಗ ಮುದ್ರೆ ಬಿದ್ದಿದೆ.
ಭ್ರೂಣಗಳ ಸ್ಕ್ಯಾನಿಂಗ್ ಇಮೇಜ್ ಗಳನ್ನೂ ಇಟ್ಟುಕೊಳ್ಳದ ಪ್ರತಿಷ್ಠಿತ ಶ್ರೀದೇವಿ ನರ್ಸಿಂಗ್ ಹೋಂಗೆ ಬೀಗ ಹಾಕಲಾಗಿದೆ.
ಎರಡು ವರ್ಷದ ಅವಧಿಯಲ್ಲಿ ಮಾಡಲಾದ ಸ್ಕ್ಯಾನಿಂಗ್ ಡಾಟಾ ಇಟ್ಟುಕೊಳ್ಳುವುದು ಕಡ್ಡಾಯ. ಅಧಿಕಾರಿಗಳು ಕೇವಲ ಮೂರು ತಿಂಗಳ ಸ್ಕ್ಯಾನಿಂಗ್ ಡಾಟಾ ಕೇಳಿದ್ದಾರೆ. ಆದರೆ ಮೈಸೂರಿನ ಬೋಗಾದಿಯಲ್ಲಿರುವ ಈ ನರ್ಸಿಂಗ್ ಹೋಮ್ ಭ್ರೂಣದ ಫೋಟೋ, ದಾಖಲೆ ಒದಗಿಸಲು ವಿಫಲವಾಗಿದೆ.
ಬೆಂಗಳೂರಿನ ಸಕ್ಷಮ ಅಧಿಕಾರಿಗಳ ಸಮ್ಮುಖದಲ್ಲಿ ತಾಲೂಕು ಆರೋಗ್ಯಾಧಿಕಾರಿ ಪುಟ್ಟತಾಯಮ್ಮ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಕೆಪಿಎಂಇ ಕಾಯ್ದೆ ಪ್ರಕಾರ ದಾಖಲೆಗಳನ್ನು ಒದಗಿಸಿಲ್ಲ. ಹೆಣ್ಣು ಭ್ರೂಣ ಹತ್ಯೆ ನಡೆದಿರುವ ಕುರಿತು ತನಿಖೆ ಬಳಿ ಮಾಹಿತಿ ನೀಡಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ಯಂತ್ರ ಸೀಜ್ ಮಾಡಲಾಗಿದೆ. ದಾಳಿ ವೇಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಒಳ ಹಾಗೂ ಹೊರ ರೋಗಿಗಳನ್ನು ಬೇರೆ ಆಸ್ಪತ್ರೆಗಳಿಗೆ ಸ್ಥಳಾಂತರ ಮಾಡಲಾಗಿದೆ.