ಮನೆ ರಾಜ್ಯ ತುರ್ತಾಗಿ ಉನ್ನತ ಮಟ್ಟದ ಸಭೆ ನಡೆಸಿ, ಬರ ಪರಿಹಾರ ಒದಗಿಸಲು ಪ್ರಧಾನಿ ಮೋದಿ ಅವರಿಗೆ ಒತ್ತಾಯಿಸಿದ್ದೇವೆ:...

ತುರ್ತಾಗಿ ಉನ್ನತ ಮಟ್ಟದ ಸಭೆ ನಡೆಸಿ, ಬರ ಪರಿಹಾರ ಒದಗಿಸಲು ಪ್ರಧಾನಿ ಮೋದಿ ಅವರಿಗೆ ಒತ್ತಾಯಿಸಿದ್ದೇವೆ: ಮುಖ್ಯಮಂತ್ರಿ ಸಿದ್ದರಾಮಯ್ಯ

0

ದೆಹಲಿ: ಗೃಹ ಸಚಿವ ಅಮಿತ್ ಶಾ ನೇತೃತ್ವದ ಹೈ ಪವರ್ ಸಮಿತಿ ಸಭೆಯನ್ನು ತುರ್ತಾಗಿ ನಡೆಸಿ, ಶೀಘ್ರ ಬರ ಪರಿಹಾರ ಒದಗಿಸಲು ಪ್ರಧಾನಿ ಮೋದಿ ಅವರಿಗೆ ಒತ್ತಾಯಿಸಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.

ಪ್ರಧಾನಿ ಮೋದಿ ಅವರ ಭೇಟಿ ಬಳಿಕ ಮಾಧ್ಯಮದವರ ಜತೆ ಮಾತನಾಡಿ ವಿವರ ನೀಡಿದರು.

ರಾಜ್ಯಕ್ಕೆ ಬರ ಪರಿಹಾರ ಸಿಗಬೇಕು ಎಂದರೆ ಗೃಹ ಸಚಿವ ಅಮಿತ್ ಶಾ ನೇತೃತ್ವದ ಹೈ ಪವರ್ ಕಮಿತಿ ಸಭೆ ನಡೆಯಬೇಕು. ಆದರೆ ನಾವು ಇದುವರೆಗೂ ಮೂರು ಬಾರಿ ಕೇಂದ್ರಕ್ಕೆ ಮನವಿ ಸಲ್ಲಿಸಿದ್ದರೂ ಪ್ರಾಥಮಿಕ ಸಭೆಯನ್ನೇ ನಡೆಸಿಲ್ಲ. ಆದ್ದರಿಂದ ತುರ್ತಾಗಿ ಸಭೆ ನಡೆಸಿ ಶೀಘ್ರ ಬರ ಪರಿಹಾರ ಬಿಡುಗಡೆಗೊಳಿಸಲು ಸೂಚಿಸಬೇಕು ಎಂದು ಪ್ರಧಾನಿ ಅವರಿಗೆ ಮನವಿ ಮಾಡಿದ್ದೇವೆ ಎಂದರು.

ನಾವು ಮುಖ್ಯವಾಗಿ ಐದು ಒತ್ತಾಯಗಳನ್ನು ಮಂಡಸಿ ಮನವಿ ಮಾಡಿದ್ದೇವೆ. ನಮ್ಮ ಮನವಿಯನ್ನು ಸಮಾಧಾನದಿಂದ ಕೇಳಿಸಿಕೊಂಡು ಪ್ರಧಾನಿ ಅವರು ಸ್ಪಂದಿಸಿದ್ದಾರೆ. ಸ್ಪಂದನೆಗೆ ತಕ್ಕಂತೆ ಶೀಘ್ರ ಪರಿಹಾರವನ್ನು  ಅವರಿಂದ ನಿರೀಕ್ಷಿಸಿದ್ದೇವೆ ಎಂದರು.

ಬರ ಪರಿಹಾರ ಶೀಘ್ರ ಬಿಡುಗಡೆ. ನರೇಗಾ ಕೆಲಸವನ್ನು 150 ದಿನಗಳಗೆ ಹೆಚ್ಚಿಸಬೇಕು. ಭದ್ರಾ ಮೇಲ್ದಂಡೆಗೆ ಕೊಟ್ಟ ಮಾತಿನಂತೆ ಹಣ ಬಿಡುಗಡೆ ಮಾಡಬೇಕು. ಮಹದಾಯಿ ಯೋಜನೆಗೆ ಪರಿಸರ ಕ್ಲಿಯರೆನ್ಸ್ ಶೀಘ್ರವಾಗಿ ನೀಡಬೇಕು. ಮೇಕೆದಾಟು ಯೋಜನೆ ಕಾರ್ಯಾರಂಭಕ್ಕೆ ಅನುಮತಿಸಬೇಕು ಎಂದು ಐದು ಬೇಡಿಕೆಗಳ ಈಡೇರುಕೆಗೆ ಮನವಿ ಅರ್ಪಿಸಿದ್ದೇವೆ ಎಂದು ತಿಳಿಸಿದರು.

ಬರ ಪರಿಹಾರ ಸಂಬಂಧ ಇವತ್ತಿನವರೆಗೂ ಹೈಲೆವೆಲ್ ಕಮಿಟಿ ಮೀಟಿಂಗ್ ಮಾಡಿಲ್ಲ. ಇದರಿಂದ ರಾಜ್ಯದ ರೈತರ ಸಂಕಷ್ಟಕ್ಕೆ ಕೇಂದ್ರದಿಙದ ಬರಬೇಕಾದ ಪರಿಹಾರ ಬರುತ್ತಿಲ್ಲ.  ಪ್ರಧಾನಿ ನಮ್ಮ ಮನವಿಯನ್ನು ಸಮಾಧಾನದಿಂದ ಕೇಳಿದರು. ಅಮಿತ್ ಶಾ ಅವರಿಗೆ ಸೂಚನೆ ನೀಡಲು ಮನವಿ ಮಾಡಿದ್ದೇವೆ ಎಂದರು.

ಬರ ಪರಿಸ್ಥಿತಿಯಲ್ಲಿ ನರೇಗಾ ಕೆಲಸವನ್ನು 100 ರಿಂದ 150 ದಿನಗಳಿಗೆ ಕಡ್ಡಾಯವಾಗಿ ಹೆಚ್ಚಿಸಲು ಕಾನೂನಿನಲ್ಲಿ ಅವಕಾಶವಿದೆ. ಅದರಂತೆ ಹೆಚ್ಚಿಸಲು 3 ತಿಂಗಳ ಹಿಂದೆಯೇ ನಾವು ಕೇಂದ್ರಕ್ಕೆ ಈ ಮನವಿಯನ್ನು  ಮಾಡಿದ್ದೇವೆ. ಈ ಮನವಿ ಈಡೇರಿಲ್ಲ. ಈ ಬಗ್ಗೆಯೂ ತುರ್ತಾಗಿ ತೀರ್ಮಾನ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದೇವೆ.

ಮಹದಾಯಿ ವಿಚಾರದಲ್ಲಿ ಈಗಾಗಲೇ ಗೆಜೆಟ್ ಕೂಡ ಆಗಿದೆ. ಬೇರೆ ಅಡೆ ತಡೆ ಏನೂ ಇಲ್ಲ. ಪರಿಸರ ಕ್ಲಿಯರೆನ್ಸ್ ಮಾತ್ರ ಬಾಕಿ ಇದೆ. ಇದನ್ನು ಕೇಂದ್ರವೇ ಕೊಡಬೇಕು. ಇದುವರೆಗೂ ಕೊಟ್ಟಿಲ್ಲ. ಟೆಂಡರ್ ಕರೆದು ಎಸ್ಟಿಮೇಟ್ ಕೂಡ ಆಗಿದೆ. ಕೇಂದ್ರ ಕ್ಲಿಯರೆನ್ಸ್ ಕೊಟ್ಟ ಕೂಡಲೇ ಕೆಲಸ ಶುರು ಮಾಡಬಹುದು. ಆದ್ದರಿಂದ ಬೇಗ ಕ್ಲಿತರೆನ್ಸ್ ಕೊಡಿಸುವಂತೆ ಒತ್ತಾಯಿಸಿದ್ದೇವೆ ಎಂದು ತಿಳಿಸಿದರು.

ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ನಲ್ಲಿ 5300 ಕೋಟಿ ಘೋಷಿಸಿದ್ದರು‌. ಇವರ ಘೋಷಣೆ ಆಧಾರದಲ್ಲಿ ಹಿಂದಿನ‌ ಮುಖ್ಯಮಂತ್ರಿ ಬೊಮ್ಮಾಯಿ ಅವರೂ ಕೂಡ 5300 ಕೋಟಿ ಘೋಷಿಸಿದ್ದರು. ಇವತ್ತಿನವರೆಗೂ ಒಂದು ರೂಪಾಯಿ ಕೂಡ ಬಂದಿಲ್ಲ. ಇದು ಕೇಂದ್ರ ಮತ್ತು ಹಿಂದಿನ ಬಿಜೆಪಿ ಸರ್ಕಾರದ ಕಮಿಟ್ ಮೆಂಟ್. ನೀವೇ ಕೊಟ್ಟಿರುವ ಮಾತಿನಂತೆ ಹಣ ಬಿಡುಗಡೆ ಮಾಡಿ ಎಂದು ಒತ್ತಾಯಿಸಿರುವುದಾಗಿ ತಿಳಿಸಿದರು.

ಮೇಕೆದಾಟು, ಕುಡಿಯುವ ನೀರಿನ ಯೋಜನೆ. ರಾಜ್ಯದ ಗಡಿಯ ಒಳಗೆ ನಿರ್ಮಾಣ ಆಗುವ ಯೋಜನೆ. ತಮಿಳುನಾಡು ಸರ್ಕಾರ ರಾಜಕೀಯ ಕಾರಣಕ್ಕೆ ತಕರಾರು ಮಾಡುತ್ತಿದೆ. ಇದರಿಂದ ತಮಿಳುನಾಡಿಗೇ ಹೆಚ್ಚು ಅನುಕೂಲ. ನಮಗೆ ಕುಡಿಯುವ  ನೀರಿನ ಜತೆಗೆ 400 ಮೆಘಾ ವ್ಯಾಟ್ ವಿದ್ಯುತ್ ಉತ್ಪಾದನೆ ಆಗುತ್ತದೆ. ವಿದ್ಯುತ್ ಉತ್ಪಾದನೆ ಬಳಿಕ ಈ ನೀರು ಕೂಡ ತಮಿಳುನಾಡಿಗೇ ಹೋಗ್ತದೆ. ಇದರಿಂದಲೂ ಅವರಿಗೇ ಅನುಕೂಲ.  ಮೇಕೆದಾಟು ಆದರೆ ಬೆಂಗಳೂರು ಮತ್ತು ರಾಮನಗರ ಜಿಲ್ಲೆಗೆ ಕುಡಿಯುವ ನೀರಿಗೆ ಅನುಕೂಲ ಆಗತ್ತೆ. ಆದ್ದರಿಂದ ಮೇಕೆದಾಟುಗೆ ಬೇಗ ಅನುಮತಿ ಕೊಡಿಸುವಂತೆ  ಪ್ರಧಾನಿಗಳ ಗಮನಕ್ಕೆ ತಂದಿದ್ದೇವೆ ಎಂದು ತಿಳಿಸಿದರು.

ಮಹದಾಯಿ, ಮೇಕೆದಾಟು, ಭದ್ರಾ ಮೇಲ್ಸಂಡೆ ಯೋಜನೆಗಳಿಗಾಗಿ ನಾವು ಸರ್ವ ಪಕ್ಷ ನಿಯೋಗದ ಜತೆ ಕೇಂದ್ರಕ್ಕೆ ಬರಲು ಸಿದ್ದರಿದ್ದೇವೆ. ಆದಷ್ಟು ಬೇಗ ನಿಗಮ ಮಂಡಳಿ ಅಂತಿಮ. ಮೊದಲ ಹಂತದಲ್ಲಿ ಶಾಸಕರದ್ದು. ನಂತರ ಕಾರ್ಯಕರ್ತರದ್ದು ಎಂದರು.

ಪ್ರಜಾಪ್ರಭುತ್ವ ವಿರೋಧಿ ಕ್ರಮ

ಸಂಸತ್ತಿನ ಇತಿಹಾದಲ್ಲೇ ಮೊದಲ ಬಾರಿಗೆ 141 ಸಂಸದರನ್ನು ಒಂದೇ ಬಾರಿಗೆ ಅಮಾನತ್ತು ಮಾಡಿದ ಉದಾಹರಣೆ ಇಲ್ಲ. 141 ಮಂದಿ ಸಂಸದರನ್ನು ಅಮಾನತ್ತು ಮಾಡಿರುವುದು ಸರ್ವಾಧಿಕಾರವನ್ನೂ ಮೀರಿದ ಕ್ರಮ. ಇದನ್ನು ಪ್ರಜಾಪ್ರಭುತ್ವ ಅಂತ ಕರೆಯಲು ಸಾಧ್ಯವಿಲ್ಲ ಎಂದು ಹರಿಹಾಯ್ದರು.

ಚರ್ಚೆ ಪ್ರಜಾಪ್ರಭುತ್ವದ ಮೂಲ. ಒಳ್ಳೆ ಸರ್ಕಾರ ಬಲವಾದ ವಿರೋಧ ಪಕ್ಷ ಇದ್ದಾಗ ಮಾತ್ರ ಸಾಧ್ಯ. ಸರ್ಕಾರದ ತಪ್ಪುಗಳನ್ನು ಹೇಳುವಂಥಾ ಆರೋಗ್ಯಪೂರ್ಣ ವಾತಾವರಣ ಇರಬೇಕು. ಅವರ ಪಕ್ಷದ  MP ಗಳನ್ನು ಮಾತ್ರ ಇಟ್ಟುಕೊಂಡು ಸಂಸತ್ ನಡೆಸುವುದು ನಾಚಿಕೆಗೇಡು ಎಂದು ಕಿಡಿಕಾರಿದರು.

ಜಾತಿ ಗಣತಿ ವರದಿ ಇನ್ನೂ ಕೊಟ್ಟಿಲ್ಲ. ಕೆಲವರು ಊಹೆ ಮಾಡಿಕೊಂಡು ವಿರೋಧ ಮಾಡ್ತಿದ್ದಾರೆ. ಅವರು ವರದಿ ಯಾವಾಗ ಕೊಡ್ತಾರೆ ಎನ್ನುವುದು ಖಚಿತವಾಗಿಲ್ಲ ಎಂದರು.