ಚಿಕ್ಕಬಳ್ಳಾಪುರ: ಬೆಳಗಾವಿಯಲ್ಲಿ ನಡೆದ ಪ್ರೇಮ ಪ್ರಕರಣವೊಂದರಲ್ಲಿ ಯುವಕನ ತಾಯಿಯನ್ನು ವಿವಸ್ತ್ರಗೊಳಿಸಿ ಅಮಾನವೀಯವಾಗಿ ನಡೆಸಿಕೊಂಡ ಕಹಿ ನೆನಪು ಮಾಸುವ ಮುನ್ನವೇ ಚಿಕ್ಕಬಳ್ಳಾಪುರದಲ್ಲಿ ಅದೇ ರೀತಿಯ ಮತ್ತೊಂದು ಘಟನೆ ನಡೆದಿದೆ.
ಪ್ರೇಮಿಗಳು ಓಡಿ ಹೋಗಿ ಮದುವೆ ಮಾಡಿಕೊಂಡ ಕಾರಣಕ್ಕೆ ಯುವತಿಯ ಕಡೆಯವರು ಯುವನ ತಂದೆ ತಾಯಿ ಮೇಲೆ ಮಾರಣಾಂತಿಕವಾಗಿ ಹೊಡೆದು ಗಾಯಗೋಳಿಸಿದ ಘಟನೆ ನಡೆದಿದೆ.
ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲೂಕಿನ ದಪ್ಪರ್ತಿ ಗ್ರಾಮದಲ್ಲಿ ಘಟನೆ ನಡೆದಿದೆ. ಯುವಕ, ಯುವತಿ ಒಂದೇ ಜಾತಿ, ಒಂದೇ ಸಮುದಾಯದವರಾಗಿದ್ದು, ಅಕ್ಕ-ಪಕ್ಕದ ನಿವಾಸಿಗಳು. ಕೆಲವು ವರ್ಷಗಳಿಂದ ಪರಸ್ಪರ ಪ್ರೀತಿಸಿ ಕೆಲವು ದಿನಗಳ ಹಿಂದೆ ಮನೆ ಬಿಟ್ಟು ಓಡಿ ಹೋಗಿ ಮದುವೆಯಾಗಿದ್ದರು. ಇವರ ಮದುವೆಗೆ ಯುವತಿಯ ಮನೆಯವರು ತೀವ್ರ ವಿರೋಧ ವ್ಯಕ್ತಪಡಿಸಿದ ಕಾರಣ ಗ್ರಾಮಸ್ಥರು ನ್ಯಾಯ ಪಂಚಾಯತಿ ಮಾಡಿ ಯುವತಿಯನ್ನು ತಂದೆ ತಾಯಿ ಜೊತೆ ಮನೆಗೆ ಕಳುಹಿಸಿ ಕೊಟ್ಟಿದ್ದರು. ಆದರೆ ಇಬ್ಬರೂ ಅಷ್ಟಕ್ಕೆ ಸುಮ್ಮನಾಗದೆ ಸೋಮವಾರ ಮತ್ತೆ ಒಂದುಗೂಡಿ ಮನೆಯಿಂದ ಎಸ್ಕೇಪ್ ಆಗಿದ್ದರು.
ಇದರಿಂದ ಕುಪಿತಗೊಂಡ ಯುವತಿಯ ಕಡೆಯವರು ಯುವಕನ ತಂದೆ ತಾಯಿ ಇದ್ದ ಮನೆಯ ಮೇಲೆ ದಾಳಿ ಮಾಡಿ ಹಲ್ಲೆ ಮಾಡಿದ್ದಾರೆ. ಘಟನೆಯಲ್ಲಿ ಯುವಕನ ತಂದೆ ತಾಯಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.
ಸದ್ಯ ಗುಡಿಬಂಡೆ ಠಾಣೆ ಪೊಲೀಸರು ಗ್ರಾಮದಲ್ಲಿ ಬಂದೋಬಸ್ತ್ ಏರ್ಪಡಿಸಿದ್ದಾರೆ. ಯುವಕನ ತಂದೆ ತಾಯಿ ಗಾಯಗೊಂಡು ಆಸ್ಪತ್ರೆ ಸೇರಿರುವ ಕಾರಣ ಹುಡುಗಿಯ ಕಡೆಯವರು ಕೆಲವರು ಗಾಯವಾದಂತೆ ನಟಿಸಿ ಅವರು ಸಹ ಗುಡಿಬಂಡೆ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದಾರೆ.
ರಕ್ಷಣೆಗಾಗಿ ಹಾವೇರಿ ಎಸ್ ಪಿ ಮೊರೆ ಹೋದ ಯುವ ಜೋಡಿ
ನಾಪತ್ತೆಯಾಗಿದ್ದ ಹುಡುಗ-ಹುಡುಗಿ ಇಬ್ಬರು ರಕ್ಷಣೆಗಾಗಿ ಹಾವೇರಿ ಎಸ್ ಪಿ ಮೊರೆ ಹೋಗಿದ್ದಾರೆ. ನಿನ್ನೆ(ಡಿ.18) ಹಾವೇರಿಯಲ್ಲಿ ಮದುವೆಯಾಗಿರುವ ಪ್ರೇಮಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಭೇಟಿ ನೀಡಿದ್ದು, ತಮಗೆ ರಕ್ಷಣೆ ನೀಡುವಂತೆ ಕೇಳಿಕೊಂಡಿದ್ದಾರೆ.
ಯುವತಿ ಮನೆಯವರಿಂದ ನಮಗೆ ಜೀವ ಭಯ ಇದೆ, ರಕ್ಷಣೆ ನೀಡಿ ಎಂದು ಪೊಲೀಸರ ಮೊರೆ ಹೋಗಿದ್ದಾರೆ. ಈ ಕುರಿತು ಹಲಗೇರಿ ಪೊಲೀಸ್ ಠಾಣೇಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದು, ನಾಲ್ವರನ್ನು ಬಂಧಿಸಿದ್ದಾರೆ.














