ಮನೆ ಸ್ಥಳೀಯ ಮೈಸೂರು ತಾಲ್ಲೂಕಿನ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್: ಡಾ.ಹೆಚ್.ಸಿ.ಮಹದೇವಪ್ಪ

ಮೈಸೂರು ತಾಲ್ಲೂಕಿನ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್: ಡಾ.ಹೆಚ್.ಸಿ.ಮಹದೇವಪ್ಪ

0

ಮೈಸೂರು: ತಾಲ್ಲೂಕಿನಲ್ಲಿ ಅತೀ ಹೆಚ್ಚು ಬಡವರಿದ್ದು, ಇಲ್ಲಿನ ಸರ್ವಾಂಗೀಣ ಅಭಿವೃದ್ಧಿಗಾಗಿ ಸರ್ಕಾರದಿಂದ ವಿಶೇಷ ಪ್ಯಾಕೇಜ್ ನೀಡುವಂತೆ ಮುಖ್ಯಮಂತ್ರಿಗಳಿಗೆ ಶಿಫಾರಸ್ಸು ಮಾಡಲಾಗುವುದು ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ಅವರು ತಿಳಿಸಿದರು.

ತಾಲ್ಲೂಕಿನ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಬುಧವಾರ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ಮತ್ತು ಜನತಾ ದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ತಾಲ್ಲೂಕಿನ ಜನರ ಜೀವನ ಸುಧಾರಣೆಗಾಗಿ ಸಮಾಜ ಕಲ್ಯಾಣ ಇಲಾಖೆಯಿಂದಲೂ  ಸೌಲಭ್ಯ ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ಅಭಿವೃದ್ಧಿಯಲ್ಲಿ ಹಿಂದುಳಿದಿರುವ ತಾಲ್ಲೂಕು ಇದಾಗಿದ್ದು, ಎಲ್ಲಾ ರೀತಿಯಲ್ಲಿ ಅಭಿವೃದ್ಧಿಪಡಿಸಲು ಸರ್ಕಾರದಿಂದ ವಿಶೇಷ ಪ್ಯಾಕೇಜ್ ರೀತಿಯಲ್ಲಿ ಅನುದಾನ ಒದಗಿಸುವಂತೆ ಸರ್ಕಾರದ ಗಮನಕ್ಕೆ ತರುತ್ತೇನೆ. ಇಲ್ಲಿನ ರಸ್ತೆ ಅಭಿವೃದ್ಧಿ, ನೀರಾವರಿ ಮುಂತಾದ ಅಭಿವೃದ್ಧಿ ಕೆಲಸಗಳನ್ನು ಶಾಸಕ ಅನಿಲ್ ಚಿಕ್ಕಮಾದು ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಕಾಡಂಚಿನ ಗ್ರಾಮಗಳಲ್ಲಿ ವಾಸಿಸುತ್ತಿರುವ ಇಲ್ಲಿನ ಜನರು ಅನೇಕ ಮೂಲಭೂತಸೌಕರ್ಯದಿಂದ ವಂಚಿತರಾಗಿದ್ದಾರೆ. ಅನೇಕ ಕಟ್ಟಡ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ತಾಲ್ಲೂಕಿ‌ನ ಒಟ್ಟಾರೆ ಎಲ್ಲಾ ಸಮಸ್ಯೆಗಳು ನನ್ನ ಗಮನದಲ್ಲಿದೆ. ಕಳೆದ ಬಾರಿಯ ನಮ್ಮಕಾಂಗ್ರೆಸ್  ಸರ್ಕಾರದ ಅವಧಿಯಲ್ಲಿ ತಾಲ್ಲೂಕಿಗೆ ಆಸ್ಪತ್ರೆ, ರಸ್ತೆ, ಸೇತುವೆ ಸೇರಿದಂತೆ ಅನೇಕ ಸೌಕರ್ಯ ಕಲ್ಪಿಸಲಾಗಿದೆ. ಆದರೂ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಮೂಲಕ ಮುಂದುವರೆದ ತಾಲ್ಲೂಕಾಗಿ ಮಾರ್ಪಾಡು ಮಾಡಲಾಗುವುದು ಎಂದು ತಿಳಿಸಿದರು.

ಗ್ರಾಮಗಳಲ್ಲಿ ಕುಡಿಯುವ ನೀರಿನ ಕೊರತೆ, ಆಸ್ಪತ್ರೆ ಸೌಲಭ್ಯವಿಲ್ಲ, ಹಾಸ್ಟೆಲ್‌ಗಳಲ್ಲಿ ಗುಣಮಟ್ಟದ ಊಟದ ಸಮಸ್ಯೆ ಕುರಿತಂತೆ ಎಲ್ಲಾ ಸಮಸ್ಯೆಗಳನ್ನು ಕೂಲಂಕಷವಾಗಿ ಅರಿತು ಪರಿಹಾರ ಒದಗಿಸಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ. ಸರ್ಕಾರದ ಆಡಳಿತ ನೇರವಾಗಿ ಜನರ ಮನೆಯ ಬಾಗಿಲಿಗೆ ತೆರಳುವ ನಿಟ್ಟಿನಲ್ಲಿ ಜನತಾ ದರ್ಶನ ಕಾರ್ಯಕ್ರಮ ಹಮ್ಮಿಕೊಂಡು ಜನರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡುತ್ತಿದೆ. ಇಲ್ಲಿ ಅರ್ಜಿ ಸಲ್ಲಿಸಿದ ಎಲ್ಲರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಕ್ರಮ ವಹಿಸಲಾಗುವುದು ಎಂದು ಹೇಳಿದರು.

ಈ ಭಾಗದಲ್ಲಿ ಮಾನವ-ಪ್ರಾಣಿ ಸಂಘರ್ಷ ಹೆಚ್ಚಾಗಿದ್ದು, ಇದನ್ನು ತಡೆಯಲು ಟಾಸ್ಕ್ ಫೋರ್ಸ್ ರಚಿಸಲು ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದು, ಸರ್ಕಾರದಿಂದ ಈ ಬಗ್ಗೆ ಹೆಚ್ಚಿನ ಕ್ರಮಕೈಗೊಳ್ಳಲಾಗುವುದು. ಕಂದಾಯ ಹಾಗೂ ಅರಣ್ಯ ಇಲಾಖೆಯ ಅಧಿಕಾರಗಳು ಜಂಟಿಯಾಗಿ ಸಮನ್ವಯತೆಯಿಂದ ಕೆಲಸ ಮಾಡಬೇಕು. ಇಲ್ಲಿನ ರೈತರು ಹಾಗೂ ಆದಿವಾಗಳ ಸಮಸ್ಯೆಗೆ ತುರ್ತಾಗಿ ಸ್ವಂದಿಸಬೇಕು ಎಂದು ಸೂಚಿಸಿದರು.

ಶಾಸಕರಾದ ಅನಿಲ್ ಚಿಕ್ಕಮಾದು ಅವರು ಮಾತನಾಡಿ, ತಾಲ್ಲೂಕಿನಲ್ಲಿ ಅನೇಕ ಜ್ವಲಂತ ಸಮಸ್ಯೆಗಳಿದ್ದು, ಸರ್ಕಾರದ ಸೌಲಭ್ಯಗಳು ಹೆಚ್ಚು ಅಗತ್ಯವಿದೆ‌. ಕಾಡಂಚಿನ ಗ್ರಾಮಗಳಲ್ಲಿ ವನ್ಯಜೀವಗಳ ಹಾವಳಿ ಹೆಚ್ಚಾಗಿದ್ದು, ಹೆಚ್ಚು ರೈಲ್ವೆ ಬ್ಯಾರಿಕೇಡ್ ನಿರ್ಮಿಸಬೇಕಿದೆ. ಕಳೆದ ಆರು ತಿಂಗಳಿಂದ ಎಂಟು ಪ್ರಕರಣಗಳು ದಾಖಲಾಗಿದೆ. ಅರಣ್ಯ ಹಾಗೂ ಕಂದಾಯ ಇಲಾಖೆ ಸಮಸ್ಯೆ ಇದೆ. ಈ ಎಲ್ಲವನ್ನು ಸಚಿವರು ಗಮನದಲ್ಲಿರಿಸಿ ಅಭಿವೃದ್ಧಿಗೆ ಅನುದಾನ ಒದಗಿಸಬೇಕು ಎಂದು ಹೇಳಿದರು.

ತಾಲ್ಲೂಕಿನಲ್ಲಿರುವ ಜಲಾಶಯದಿಂದ ಈ ಭಾಗದ ರೈತರಿಗೆ ನೀರಿನ ಸೌಲಭ್ಯ ಕಲ್ಪಿಸಬೇಕು. ರೈತರಿಗೆ ಸಾಗುವಳಿ ಹಕ್ಕುಪತ್ರ ವಿತರಿಸಬೇಕು. ಅತೀ ಹೆಚ್ಚು ಎಸ್‌ಸಿಎಸ್‌ಪಿ & ಟಿಎಸ್‌ಪಿ ಅನುದಾನವನ್ನು ನೀಡಬೇಕು. ಮಳೆಯಿಂದ ಕುಸಿದ ಮೆನಗಳು, ಸಂಪರ್ಕ ರಸ್ತೆಗಳು, ಕುಡಿಯುವ ನೀರಿನ ಯೋಜನೆಗಳು ಸೇರಿದಂತೆ ಹೆಚ್ಚಿನ ಮೂಲಭೂತ ಸೌಕರ್ಯ ಒದಗಿಸಿಕೊಡಬೇಕು ಎಂದು ಸಚಿವರಿಗೆ ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಅರ್ಜಿದಾರರನ್ನು ಕರೆದು ಸಚಿವರು, ಅವರ ಕುಂದು ಕೊರತೆಯನ್ನು ಆಲಿಸಿ ಸಮಸ್ಯೆಗಳನ್ನು ಬಗೆಹರಿಸುವಂತೆ ಸ್ಥಳದಲ್ಲೇ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಜಿಲ್ಲಾ ಪಂಚಾಯತ್ ಸಿಇಒ ಕೆ.ಎಂ.ಗಾಯಿತ್ರಿ, ಉಪ ವಿಭಾಗಾಧಿಕಾರಿ ರುಚಿ ಬಿಂದಾಲ್, ತಹಸೀಲ್ದಾರ್ ಶ್ರೀನಿವಾಸ್, ತಾಲ್ಲೂಕು ಪಂಚಾಯತ್ ಇಒ ಧರಣೇಶ್ ಸೇರಿದಂತೆ ಮುಂತಾದ ಅಧಿಕಾರಿಗಳು ಹಾಜರಿದ್ದರು.