ಮನೆ ಅಪರಾಧ ಸಂಸತ್ ಭದ್ರತಾ ಲೋಪ: ನಿವೃತ್ತ ಡಿವೈಎಸ್ಪಿ ಪುತ್ರನ ಬಂಧನ, ಮೈಸೂರಿನಲ್ಲಿ ಸಲೂನ್ ಮಾಲೀಕನ ವಿಚಾರಣೆ

ಸಂಸತ್ ಭದ್ರತಾ ಲೋಪ: ನಿವೃತ್ತ ಡಿವೈಎಸ್ಪಿ ಪುತ್ರನ ಬಂಧನ, ಮೈಸೂರಿನಲ್ಲಿ ಸಲೂನ್ ಮಾಲೀಕನ ವಿಚಾರಣೆ

0

ಬೆಂಗಳೂರು: ಸಂಸತ್ ಭದ್ರತಾ ಲೋಪಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು, ಬಾಗಲಕೋಟೆಯಲ್ಲಿ  ನಿವೃತ್ತ ಡಿವೈಎಸ್ಪಿ ಪುತ್ರನನ್ನು ವಶಕ್ಕೆ ತೆಗೆದುಕೊಂಡಿದ್ದು, ಮೈಸೂರಿನಲ್ಲಿ ಮತ್ತೊಬ್ಬ ವ್ಯಕ್ತಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಅಧಿಕೃತ ಮೂಲಗಳು ಗುರುವಾರ ತಿಳಿಸಿವೆ.

ಜಿಲ್ಲಾ ಕೇಂದ್ರವಾದ ಬಾಗಲಕೋಟೆ ಪಟ್ಟಣದ ವಿದ್ಯಾಗಿರಿಯಲ್ಲಿರುವ ನಿವೃತ್ತ ಡಿವೈಎಸ್ಪಿ ನಿವಾಸದಲ್ಲಿ ಬುಧವಾರ ರಾತ್ರಿ ಅವರ ಪುತ್ರ ಹಾಗೂ ಟೆಕ್ಕಿ ಸಾಯಿಕೃಷ್ಣ ಜಗಲಿ ಅವರನ್ನು ಬಂಧಿಸಲಾಗಿದೆ.

ಬೆಂಗಳೂರಿನ ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಜಗಲಿ, ಕಳೆದ ವಾರ ಲೋಕಸಭೆಯ ಸಭಾಂಗಣಕ್ಕೆ ನುಗ್ಗಿದ ಇಬ್ಬರಲ್ಲಿ ಒಬ್ಬರಾದ ಮೈಸೂರಿನ ಮನೋರಂಜನ್ ಡಿ ಅವರ ಸ್ನೇಹಿತ ಎಂದು ಹೇಳಲಾಗಿದೆ.

ಸಾಯಿಕೃಷ್ಣ ಜಗಲಿ, ಕಾಲೇಜು ದಿನಗಳಲ್ಲಿ ಮನೋರಂಜನ್ ಅವರ ರೂಮ್‌ಮೇಟ್ ಕೂಡ ಆಗಿದ್ದರು ಎಂದು ಮೂಲಗಳು ತಿಳಿಸಿವೆ.

ದೆಹಲಿ ಪೊಲೀಸ್ ತಂಡ ಬಂದು ತನ್ನ ಸಹೋದರನನ್ನು ಕರೆದುಕೊಂಡು ಹೋಗಿದೆ ಎಂದು ಜಗಲಿಯ ಸಹೋದರಿ ಸ್ಪಂದನಾ ಅವರು ತಿಳಿಸಿದ್ದಾರೆ.

“ದೆಹಲಿ ಪೊಲೀಸರು ಬಂದಿದ್ದು ನಿಜ. ನನ್ನ ಸಹೋದರನನ್ನು ವಿಚಾರಣೆಗೆ ಒಳಪಡಿಸಲಾಗಿದೆ. ನಾವು ವಿಚಾರಣೆಗೆ ಸಂಪೂರ್ಣವಾಗಿ ಸಹಕರಿಸಿದ್ದೇವೆ. ನನ್ನ ಸಹೋದರ “ಯಾವುದೇ ತಪ್ಪು ಮಾಡಿಲ್ಲ” ಎಂದು ಅವರು ಹೇಳಿದ್ದಾರೆ.

“ಮನೋರಂಜನ್ ಮತ್ತು ಸಾಯಿಕೃಷ್ಣ ಜಗಲಿ ಇಬ್ಬರೂ ರೂಮ್‌ಮೇಟ್‌ಗಳಾಗಿದ್ದರು. ಈಗ ನನ್ನ ಸಹೋದರ ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ” ಎಂದು ಸ್ಪಂದನಾ ತಿಳಿಸಿದ್ದಾರೆ.

ಮೈಸೂರಿನ ಮನೋರಂಜನ್‌ ಅವರ ಮತ್ತೊಬ್ಬ ಸ್ನೇಹಿತನನ್ನೂ ದೆಹಲಿ ಪೊಲೀಸರು ಗುರುವಾರ ವಿಚಾರಣೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಿಚಾರಣೆಗೆ ಒಳಗಾದ ವ್ಯಕ್ತಿ ಮೈಸೂರಿನಲ್ಲಿ ಸಲೂನ್ ನಡೆಸುತ್ತಿದ್ದು, ಮನೋರಂಜನ್ ಜತೆ ಹಣಕಾಸಿನ ವ್ಯವಹಾರ ನಡೆಸುತ್ತಿದ್ದ ಎಂದು ಅವರು ಹೇಳಿದ್ದಾರೆ.