ಮನೆ ರಾಜ್ಯ ಲಾಲ್​ಬಾಗ್​​ನಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ 11 ದಿನಗಳ ಕಾಲ ಫ್ಲವರ್ ಶೋ

ಲಾಲ್​ಬಾಗ್​​ನಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ 11 ದಿನಗಳ ಕಾಲ ಫ್ಲವರ್ ಶೋ

0

ಬೆಂಗಳೂರು: ಬೆಂಗಳೂರಿನ ಸಸ್ಯಕಾಶಿ ಲಾಲ್​ಬಾಗ್​​ನಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ಫ್ಲವರ್ ಶೋ ಆಯೋಜನೆ ಮಾಡಲಾಗುತ್ತಿದ್ದು, ಈ ವರ್ಷ ಬಸವಣ್ಣನವರ ಪರಿಕಲ್ಪನೆಯಲ್ಲಿ ಮೂಡಿಬರಲಿದೆ. 2024 ರ ಫ್ಲವರ್ ಶೋಗೆ ದಿನಾಂಕ ಸಹ ನಿಗದಿಯಾಗಿದೆ.‌ 2024ರ ಜನವರಿ 18 ರಿಂದ ಜನವರಿ 28 ವರೆಗೆ ಫ್ಲವರ್ ಶೋ ಮಾಡಲು ತೋಟಗಾರಿಕೆ ಇಲಾಖೆ ನಿರ್ಧರಿಸಿದೆ. ಬಸವಣ್ಣನವರ ಜೀವನಧಾರಿತ ಫ್ಲವರ್ ಶೋ ನಡೆಯಲಿದೆ.

ಕಳೆದ ಬಾರಿ ವಿಧಾನಸೌಧ ಮಾದರಿಯಲ್ಲಿ ಫ್ಲವರ್ ಶೋ ಆಯೋಜನೆ ಮಾಡಿ ತೋಟಗಾರಿಕೆ ಇಲಾಖೆ ಯಶಸ್ವಿಯಾಗಿತ್ತು. ಈ ಬಾರಿ ಬಸವಣ್ಣನವರು ಹುಟ್ಟಿ, ಬೆಳೆದು ಬಂದಂತಹ ದಾರಿಯನ್ನ ಹೂವಿನ ಮೂಲಕ ಜನರಿಗೆ ತಿಳಿಸಲು ತೋಟಗಾರಿಕೆ ಇಲಾಖೆ ಮುಂದಾಗಿದೆ.‌

ಈ ಫ್ಲವರ್ ಶೋ‌ ಮಾಡಲು ಸುಮಾರು ಎರಡೂವರೆ ಕೋಟಿಯಷ್ಟು ಹಣವನ್ನ ಖರ್ಚು ಮಾಡುತ್ತಿದ್ದು, ಈ ಬಾರಿ 10 ಲಕ್ಷಕ್ಕೂ ಹೆಚ್ಚು ಜನರು ಫ್ಲವರ್ ಶೋಗೆ ಬರುವ ಬಗ್ಗೆ ನಿರೀಕ್ಷಿಸಲಾಗಿದೆ.

ಈ ಬಾರಿ ವಾರ್ಷಿಕವಾಗಿ ಬೆಳೆಯುವ ಹೂಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗುತ್ತಿದ್ದು, 12 ರಿಂದ ದ 15 ಲಕ್ಷದಷ್ಟು ಹೂಗಳನ್ನ ಬಳಸಿಕೊಳ್ಳುವ ಸಾಧ್ಯತೆ ಇದೆ.‌ ಅದ್ರಲ್ಲಿ 8 ಲಕ್ಷದಷ್ಟು ಹೂಗಳನ್ನು ಹೊರ ರಾಜ್ಯಗಳಿಂದ, ಅಂದರೆ ಊಟಿ, ತಮಿಳುನಾಡು, ಕೇರಳ, ಆಂಧ್ರ ಪ್ರದೇಶದಿಂದ ತರಲಾಗುತ್ತದೆ. ಇನ್ನುಳಿದ ಹೂಗಳನ್ನ ಲಾಲ್ ಬಾಗ್ ಗಾರ್ಡನ್​​ನಲ್ಲಿ ಬೆಳೆಸಲಾಗುತ್ತಿದ್ದು, ಒಟ್ಟು 200 ಬಗೆಯ ತಳಿಯ ಹಾಗೂ 25 ಬಗೆಯ ವರ್ಣರಂಜಿತ ಹೂಗಳು ಈ ಫ್ಲವರ್ ಶೋ ನಲ್ಲಿ ಇರಲಿವೆ.

ಈ ಬಾರಿಯ ಫ್ಲವರ್ ಶೋವನ್ನು ಸಿಎಂ ಸಿದ್ದರಾಮಯ್ಯನವರು ಹಾಗೂ ತೋಟಗಾರಿಕಾ ಸಚಿವರು ಉದ್ಘಾಟನೆ ಮಾಡಲಿದ್ದು, ಒಟ್ಟು 11 ದಿನಗಳ ಕಾಲ ಈ ಫ್ಲವರ್ ಶೋ ನಡೆಯಲಿದೆ.

’ಒಂದೇ ಸೂರಿನ ಅಡಿಯಲ್ಲಿ ನೂರಾರು ಬಗೆಯ ಹೂಗಳನ್ನ ನೋಡುವುದಕ್ಕೆ ಸಾಧ್ಯವಾಗುವುದು ಫ್ಲವರ್ ಶೋನಲ್ಲಿ ಮಾತ್ರ. ಈ ಫ್ಲವರ್ ಶೋನಲ್ಲಿ ಒಂದೊಂದು ಪರಿಕಲ್ಪನೆಯಲ್ಲಿ ಒಂದೊಂದು ಬಗೆಯ ಫ್ಲವರ್ ಶೋಗಳನ್ನ ಮಾಡ್ತಾರೆ.‌ ಇದರಿಂದ ನಾವು ಅಷ್ಟೇ ಅಲ್ಲದೇ ಮಕ್ಕಳು ಸಹ ಎಷ್ಟೋ ವಿಚಾರಗಳನ್ನ ತಿಳಿದುಕೊಳ್ಳಬಹುದು. ನಾವು ಪ್ರತಿವರ್ಷ ಬರ್ತಿವಿ.‌ ಫ್ಲವರ್ ಶೋ ಜೊತೆಗೆ ಎಂಜಾಯ್ ಮಾಡಿಕೊಂಡು ಹೋಗ್ತಿವಿ’ ಎಂದು ಪ್ರವಾಸಿಗರು ಪ್ರತಿಕ್ರಿಯಿಸಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಆಯೋಜಿಸಿದ್ದ ಫ್ಲವರ್ ಶೋವನ್ನು ಸುಮಾರು 8 ಲಕ್ಷದಷ್ಟು ಜನರು ವೀಕ್ಷಿಸಿದ್ದರು. 3 ಕೋಟಿ ಗೂ ಅಧಿಕ ಆದಾಯ ತೋಟಗಾರಿಕೆ ಇಲಾಖೆಗೆ ಹರಿದುಬಂದಿತ್ತು.

ಪ್ಲವರ್ ಶೋಗೆ ಬರುವವರಿಗೆ ಟಿಕೆಟ್ ನಿಗದಿ ಮಾಡಲಾಗುತ್ತಿದ್ದು, ಶಾಲಾ‌ಮಕ್ಕಳಿಗೆ ಉಚಿತ ಪ್ರವೇಶ ಇರಲಿದೆ.