ಯೋಗ ಆರೋಗ್ಯಕ್ಕೆ ಒಳ್ಳೆಯದು. ಇದು ಮನಸ್ಸನ್ನು ಹತೋಟಿಯಲ್ಲಿ ಇಡುವ ಜತೆಗೆ ದೇಹವನ್ನು ಸದೃಢವಾಗಿಸಲು ಸಹಕಾರಿ.
ಯೋಗದಲ್ಲಿ ಹಲವಾರು ಬಗೆಗಳಿವೆ. ಕೆಲವೊಂದು ಯೋಗದ ಭಂಗಿಯು ದೇಹದಲ್ಲಿನ ಕಾಯಿಲೆಗಳನ್ನು ದೂರ ಮಾಡುವುದು. ಕೆಲವೊಂದು ಸರಳವಾದ ಯೋಗಾಸನಗಳ ಬಗೆಗಿನ ಮಾಹಿತಿ ಇಲ್ಲಿದೆ.
ಬಜ್ರಾಸನ:
- ಊಟವಾದ ಬಳಿಕ ಮಾಡುವಂತಹ ಏಕೈಕ ಆಸನ ಇದಾಗಿದೆ. ಇದನ್ನು ಮಾಡಿದರೆ ಅದರಿಂದ ಗ್ಯಾಸ್ಟ್ರಿಕ್ ಸಮಸ್ಯೆಯು ದೂರವಾಗುವುದು. ಅಧಿಕ ರಕ್ತದೊತ್ತಡ, ಒತ್ತಡ, ಹೃದಯದ ಸಮಸ್ಯೆ, ಮೊಣಕಾಲಿನ ನೋವು ಕಡಿಮೆ ಆಗುವುದು.
- ಮೊಣಕಾಲಿನ ಮೇಲೆ ಕುಳಿತುಕೊಳ್ಳಿ. ಹೆಬ್ಬೆರಳನ್ನು ಜತೆಯಾಗಿ ತನ್ನಿ ಮತ್ತು ಪಾದಗಳನ್ನು ಅಗಲಿಸಿ. ಪೃಷ್ಠವನ್ನು ಕೆಳಗೆ ಮಾಡಿಕೊಂಡು ಹಾಗೆ ಪಾದಗಳಲ್ಲಿ ಕುಳಿತುಕೊಳ್ಳಿ.
- ಕುತ್ತಿಗೆ, ತಲೆ ಮತ್ತು ಭುಜವನ್ನು ನೇರವಾಗಿಡಿ. ಕಣ್ಣುಗಳನ್ನು ಸರಿಯಾಗಿ ಮುಚ್ಚಿಡಿ. ಮೊಣಕಾಲಿನ ಮೇಲೆ ಕೈಗಳನ್ನು ಇಡಿ ಮತ್ತು ಅಂಗೈಯು ಕೆಳಮುಖವಾಗಿರಬೇಕು. ಇದನ್ನು ನೀವು ಊಟದ ಬಳಿಕ 5 ನಿಮಿಷ ಕಾಲ ಮಾಡಿ.
ಗೋಮುಖಾಸನ:
- ಹೆಸರೇ ಹೇಳುವಂತೆ ಇದನ್ನು ಹಸುವಿನ ಭಂಗಿ ಎಂದು ಕರೆಯಬಹುದು.
- ಈ ಯೋಗಾಭ್ಯಾಸವನ್ನು ಮಾಡುವುದರಿಂದ ನಿಮ್ಮ ಬೆನ್ನುಹುರಿ ನೇರವಾಗಿ ವಿಸ್ತಾರವಾಗುತ್ತದೆ ಮತ್ತು ನಿಮ್ಮ ಹೊಟ್ಟೆಯ ಭಾಗದ ಮಾಂಸಖಂಡಗಳು ಶಾಂತಗೊಳ್ಳಲು ನೆರವಾಗುತ್ತದೆ. ಇದರಿಂದ ನಿಮ್ಮ ಜೀರ್ಣಶಕ್ತಿ ಹೆಚ್ಚಾಗುವ ಸಾಧ್ಯತೆ ಇದೆ. ಈ ಅಭ್ಯಾಸವನ್ನು ಮಾಡಿದ ನಂತರ ನಿಮಗೆ ಆರಾಮದಾಯಕ ಅನುಭವ ಉಂಟಾಗುತ್ತದೆ.
ಹೃದಯ ಮುದ್ರೆ:
- ಸುಖಾಸನ ಅಥವಾ ಪದ್ಮಾಸನದ ಭಂಗಿಯಲ್ಲಿ ಕುಳಿತುಕೊಳ್ಳಿ ಮತ್ತು ಬೆನ್ನನ್ನು ನೇರವಾಗಿ ಇಡಬೇಕು. ಕುರ್ಚಿಯಲ್ಲಿ ಕೂಡ ಬೆನ್ನು ನೇರವಾಗಿಸಿಕೊಂಡು ಕುಳಿತುಕೊಳ್ಳಬಹುದು.
- ತೋರು ಬೆರಳಿನಿಂದ ಹಾಗೆ ಹೆಬ್ಬೆರಳಿನ ಬುಡವನ್ನು ಸ್ಪರ್ಶಿಸಿ. ಮಧ್ಯ, ಹೆಬ್ಬೆರಳು ಮತ್ತು ಉಂಗುರ ಬೆರಳಿನ ತುದಿಯನ್ನು ಸ್ಪರ್ಶಿಸಿ.
- ಕಿರು ಬೆರಳು ಹಾಗೆ ನೇರವಾಗಿ ಇರಲಿ.
- ಎರಡೂ ಕೈಗಳ ಬೆರಳುಗಳಿಂದ ಹೀಗೆ ಮಾಡಿ ಮತ್ತು ಅಂಗೈಯ ಹಿಂದಿನ ಭಾಗವನ್ನು ಮೊಣಕಾಲಿನ ಮೇಲಿಡಿ.
- ಕಣ್ಣುಗಳನ್ನು ಹಾಗೆ ಮುಚ್ಚಿಡಿ ಮತ್ತು ಉಸಿರಾಟದ ಕಡೆಗೆ ಗಮನಹರಿಸಿ.
ಶವಾಸನ:
- ಇದು ತುಂಬಾನೇ ಸರಳವಾದ ಆಸನ! ಬೆನ್ನ ಮೇಲೆ ಹಾಗೆ ಮಲಗಿ ಮತ್ತು ಕಾಲುಗಳನ್ನು ನೇರವಾಗಿ ಇಟ್ಟುಕೊಳ್ಳಿ. ಪಾದಗಳು ಸ್ವಲ್ಪ ದೂರವಾಗಿಡಿ. ಪಾದಗಳು ಆದಷ್ಟು ಹೊರಗಿನ ಭಾಗಕ್ಕೆ ಇರಲಿ. ಬೆರಳುಗಳು ನೇರವಾಗಿ ಇರಲಿ.
- ತಲೆ ಮತ್ತು ಬೆನ್ನು ನೇರವಾಗಿ ಒಂದೇ ರೇಖೆಯಲ್ಲಿ ಇರಬೇಕು. ಇದರ ಬಳಿಕ ದೇಹದ ಎಲ್ಲಾ ಚಟುವಟಿಕೆಗಳನ್ನು ನಿಲ್ಲಿ. ಕಣ್ಣುಗಳನ್ನು ಹಾಗೆ ಮುಚ್ಚಿಕೊಳ್ಳಿ. ಈಗ ನೀವು ನಿಧಾನವಾಗಿ ಉಸಿರಾಡಿ ಮತ್ತು ಆರಾಮ ಮಾಡಿ. 5 ನಿಮಿಷ ಕಾಲ ಹೀಗೆ ಮಾಡಿ.
ಸುಖಾಸನ:
- ಬೆನ್ನು ನೇರವಾಗಿಟ್ಟುಕೊಂಡು ಹಾಗೆ ಕುಳಿತುಕೊಳ್ಳಿ ಮತ್ತು ಕಾಲುಗಳು ಮುಂದಕ್ಕೆ ಚಾಚಿ.
- ಎಡದ ಕಾಲನ್ನು ಹಾಗೆ ಬಲದ ತೊಡೆಯ ಮೇಲೆ ತನ್ನಿ ಮತ್ತು ಬಲದ ಕಾಲನ್ನು ಎಡ ತೊಡೆಯ ಮೇಲಿಡಿ.
- ಅಂಗೈಗಳನ್ನು ಹಾಗೆ ಮೊಣಕಾಲುಗಳ ಮೇಲಿಡಿ.
- ನೀವು ಈ ಆಸನ ಮಾಡುವ ವೇಳೆ ಬೆನ್ನು ನೇರವಾಗಿ ಇರುವಂತೆ ನೋಡಿಕೊಳ್ಳಿ.