ಮನೆ ರಾಜಕೀಯ ಕಾಂಗ್ರೆಸ್‌ ನಿಂದ ವೈಯಕ್ತಿಕ ದ್ವೇಷದ ರಾಜಕಾರಣ: ಸಂಸದ ಪ್ರತಾಪ್‌ ಸಿಂಹ

ಕಾಂಗ್ರೆಸ್‌ ನಿಂದ ವೈಯಕ್ತಿಕ ದ್ವೇಷದ ರಾಜಕಾರಣ: ಸಂಸದ ಪ್ರತಾಪ್‌ ಸಿಂಹ

0

ಮೈಸೂರು (Mysuru)- ಕಾಂಗ್ರೆಸ್‌ನವರು (Congress) ಸಚಿವ ಅಶ್ವತ್ಥ್‌ ನಾರಾಯಣ (Ashwath Narayan) ಅವರ ಮೇಲೆ ಯಾವುದೇ ದಾಖಲೆ ಇಲ್ಲದೇ ಆರೋಪ ಮಾಡುತ್ತಿದ್ದು, ಇದು ವೈಯಕ್ತಿಕ ದ್ವೇಷದ ರಾಜಕಾರಣ ಎಂದು ಸಂಸದ ಪ್ರತಾಪ್‌ ಸಿಂಹ (Pratap simha) ಕಿಡಿಕಾರಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ವೇಳೆ ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಅಶ್ವತ್ಥ್‌ ನಾರಾಯಣ್ ರಾಜೀನಾಮೆಗೆ ಕಾಂಗ್ರೆಸ್ ಒತ್ತಾಯಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯಾವುದೇ ದಾಖಲೆ ಇಲ್ಲದೇ ಕಾಂಗ್ರೆಸ್‌ನವರು ಆರೋಪ ಮಾಡುತ್ತಿದ್ದಾರೆ. ಇದು ವೈಯಕ್ತಿಕ ದ್ವೇಷದ ರಾಜಕಾರಣ ಅಲ್ಲದೇ ಮತ್ತೇನು ಅಲ್ಲ. ಪಿಎಸ್ಐ ಹಗರಣದಲ್ಲಿ ಯಾರೋ ದರ್ಶನ್ ಗೌಡ ಸಿಕ್ಕಿಬಿದ್ದಿದ್ದಾರೆ. ಅವರಿಗೂ ಅಶ್ವತ್ಥ್‌ ನಾರಾಯಣ ಅವರಿಗೂ ಸಂಬಂಧ ಕಲ್ಪಿಸಲು ಹೋಗಬೇಡಿ ಎಂದರು.

ಅಶ್ವತ್ಥ್‌ ನಾರಾಯಣ ಅವರು ಸಾವಿರಾರು ಕೋಟಿ ರೂ.ನ ಸೆಮಿ ಕಂಡಕ್ಟರ್ ಘಟಕವನ್ನು ಕೊಡಿಸಿದ್ದಾರೆ. ಅದರ ಬಗ್ಗೆ ಮಾತನಾಡುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿಲ್ಲ. ಬದಲಿಗೆ ಪಿಎಸ್ಐ ನೇಮಕಾತಿ ಹಗರಣದಲ್ಲಿ ಅವರನ್ನು ಸಿಲುಕಿಸಲು ನೋಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಇನ್ನು ಸಿದ್ದರಾಮಯ್ಯ (Siddaramaiah) ಅವರ ವಿರುದ್ಧ ಕಿಡಿಕಾರಿದ ಅವರು, ಈ ಹಿಂದೆ ಸಿದ್ದರಾಮಯ್ಯ ಸಚಿವರಾಗಿದ್ದವರು. 25 ರಿಂದ 30 ವರ್ಷದ ಹಿಂದೆ ಕೆ.ಜೆ.ಜಾರ್ಜ್, ಎಂ.ಬಿ.ಪಾಟೀಲ್, ಡಿ.ಕೆ.ಶಿವಕುಮಾರ್ ಏನಾಗಿದ್ರು ? ದೇಶದಲ್ಲಿ ಕಾಂಗ್ರೆಸ್ ಶೇ.10 ಪರ್ಸೆಂಟ್‌ ಸರ್ಕಾರ ಎಂದು ಫೇಮಸ್ ಆಗಿತ್ತು. 30 ವರ್ಷದ ಹಿಂದೆ ಇವರ ಆಸ್ತಿ ಎಷ್ಟು ? ಈಗ ಇರುವ ಆಸ್ತಿ ಎಷ್ಟು ಈಗಿರುವ ಅಸ್ತಿಯನ್ನು ಎಲ್ಲಿ ದುಡಿದರು ಹೇಳಲಿ. ಇವರು ಮಾಡೋದನ್ನು ನೋಡಿದರೆ ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತೆ ಆಗಿದೆ. ತಿನ್ನೋದು ಬದನೆಕಾಯಿ ಹೇಳೋದು ಮಾತ್ರ ವೇದಾಂತ ಎಂದು ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯನವರು ಸಿದ್ದರಾಮಯ್ಯನ ಹುಂಡಿಯಿಂದ ಬಂದೆ ಅಂತಾರೆ ಅವರಿಗೆ ಒಂದೂವರೆ ಕೋಟಿ ವಾಚ್ ಎಲ್ಲಿಂದ ಬಂತು ? ಯಾರಿಗೂ ಲಾಭ ಆಗದೇ ವಾಚ್ ಕೊಟ್ಟರಾ ? ಎಂದು ಪ್ರಶ್ನಿಸಿದರು. ಸುಮ್ಮನೆ ಆರೋಪ ಮಾಡೋದು ಟಾರ್ಗೆಟ್ ಮಾಡೋದನ್ನೆಲ್ಲಾ ಜನ ಒಪ್ಪೋದು ಇಲ್ಲ ಇದಕ್ಕೆ ಸೊಪ್ಪು ಹಾಕೋದು ಇಲ್ಲ. ನೀವು ಸಿಎಂ ಆದಾಗಲೇ ನಿಮ್ಮ ಕ್ಷೇತ್ರದ ಜನ ನಿಮ್ಮನ್ನು ಒಪ್ಪಲಿಲ್ಲ. ಸಿದ್ದರಾಮಯ್ಯನವರ ವೈಫಲ್ಯವನ್ನು ನಾವು ಜನರಿಗೆ ಹೇಳಿದ್ದಕ್ಕೆ ಜನ ಅವರನ್ನು ಸ್ವಕ್ಷೇತ್ರದಲ್ಲಿ ಸೋಲಿಸಿದ್ದು ,ಕಿತ್ತೆಸೆದಿದ್ದು ಎಂದು ಕಿಡಿಕಾರಿದರು.

ಇದೇ ವೇಳೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ (B.L.Santhosh) ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರ ಹೇಳಿಕೆಗೆ ನನ್ನ ಸಂಪೂರ್ಣ ಸಹಮತ ಇದೆ. ಸಂತೋಷ್ ಹಾಗೂ ಉಳಿದವರು ಅವಕಾಶ ನೀಡಿದ್ದರಿಂದ ನಾನು ಎರಡನೇ ಬಾರಿಗೆ ಸಂಸದನಾಗಿದ್ದೇನೆ. ಇಂತಹ ವಿಶೇಷ ಪ್ರಯತ್ನ ಮೋದಿಯವರ ನೇತೃತ್ವದಲ್ಲಿ ಸದಾ ಆಗುತ್ತಿರುತ್ತದೆ. ಪೊಲೀಸ್ ಇಲಾಖೆ, ಕ್ರೀಡಾ ಕ್ಷೇತ್ರದಿಂದ ರಾಜಕಾರಣಿಗಳಾಗಿದ್ದಾರೆ. ಇಂತಹವರನ್ನು ಕರೆತಂದವರು ಮೋದಿ. ಯಾರು ಕೆಲಸ ಮಾಡುತ್ತಾರೋ ಅವರು ರಾಜಕಾರಣದಲ್ಲಿ ಇರುತ್ತಾರೆ. ಮಾಡದವರು ಮನೆಗೆ ಹೋಗುತ್ತಾರೆ. ರಾಜಕಾರಣ ಯಾರ ಅಪ್ಪನ ಆಸ್ತಿಯೂ ಅಲ್ಲ. ಈ ವಿಚಾರವಾಗಿ ಸಂತೋಷ್ ಅವರು ಯೋಚನೆ ಮಾಡಿಯೇ ಮಾತನಾಡಿದ್ದಾರೆ ಎಂದು ಹೇಳಿದರು.