ಮನೆ ರಾಜಕೀಯ ನಾನು ರೈತ ವಿರೋಧಿಯಲ್ಲ, ನನ್ನ ಹೇಳಿಕೆಯನ್ನು ತಿರುಚಲಾಗಿದೆ: ಸಚಿವ ಶಿವಾನಂದ ಪಾಟೀಲ್

ನಾನು ರೈತ ವಿರೋಧಿಯಲ್ಲ, ನನ್ನ ಹೇಳಿಕೆಯನ್ನು ತಿರುಚಲಾಗಿದೆ: ಸಚಿವ ಶಿವಾನಂದ ಪಾಟೀಲ್

0

ಬೆಂಗಳೂರು: ನಾನು ರೈತ ವಿರೋಧಿಯಲ್ಲ. ಚುನಾವಣೆ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳು ರಾಜಕೀಯ ಮಾಡುತ್ತಿವೆ. ನನ್ನ ಹೇಳಿಕೆಯನ್ನು ತಿರುಚಲಾಗಿದೆ ಎಂದು ಸಚಿವ ಶಿವಾನಂದ ಪಾಟೀಲ್ ಅವರು ಹೇಳಿದ್ದಾರೆ.

ರೈತರ ಕುರಿತು ತಾವು ನೀಡಿದ್ದ ವಿವಾದಾತ್ಮಕ ಹೇಳಿಕೆ ಕುರಿತು ಸ್ಪಷ್ಟನೆ ನೀಡಿರುವ ಅವರು, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳು ರಾಜಕೀಯ ಮಾಡುತ್ತಿವೆ. ನಾನು ರೈತರ ವಿರೋಧಿ ಅಲ್ಲ, ರೈತರ ವಿರೋಧವಾಗಿ ಯಾವುದೇ ಹೇಳಿಕೆ ನೀಡಿಲ್ಲ. ಮೂರು ವರ್ಷಕ್ಕೊಮೆ ರೈತರ ಬೆಳೆಗಳಿಗೆ ಬೆಲೆ ಬರುತ್ತದೆ. ಉಳಿದ ಎರಡು ಬೆಲೆ ಇಲ್ಲದೆ ಕಂಗಾಲಾಗಿರುತ್ತಾರೆ. ಹಾಗಾಗಿ ರೈತರು ಸಾಲಮನ್ನಾ ಆಗಲಿ ಎಂದು ಆಶಯ ವ್ಯಕ್ತಪಡಿಸುತ್ತಾರೆಂದು ಹೇಳಿದ್ದೆ ಎಂದು ಹೇಳಿದ್ದಾರೆ.

ಇತ್ತೀಚೆಗೆ ಕೇಂದ್ರದ ಯೋಜನೆಗಳು ರೈತರಿಗೆ ಮುಳುವಾಗಿವೆ. ನನಗೆ ಮದ ಏರಿದೆ ಎಂದು ವಿರೋಧ ಪಕ್ಷದವರು ಹೇಳುತ್ತಾರೆ. ಆದರೆ, ಇದೆಲ್ಲ ರಾಜಕೀಯ ತಂತ್ರವಷ್ಟೇ.

ಬಿಜೆಪಿ ನಾಯಕರಿಗೆ ರೈತರ ಮೇಲೆ ಕರುಣೆ ಇದ್ದರೆ ಕೇಂದ್ರ ಸರ್ಕಾರದ ನೀತಿಗಳನ್ನು ಬದಲಾಯಿಸಲಿ. ವಿರೋಧ ಪಕ್ಷದ ನಾಯಕರು ರೈತರ ಸಮಸ್ಯೆ ಬಗ್ಗೆ ಪ್ರಧಾನಿ ಮೋದಿ ಗಮನಕ್ಕೆ ತರಲಿ ಎಂದು ಒತ್ತಾಯಿಸಿದರು.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸುಟ್ಟಟ್ಟಿ ಗ್ರಾಮದಲ್ಲಿ ಗ್ರಾಮೀಣ ಕೃಷಿ ಸ್ವ ಸಹಾಯ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತಾನಾಡಿದ್ದ ಸಚಿವರು, ಸಾಲ ಮನ್ನಾದ ಆಸೆಗಾಗಿ ಬರಗಾಲ ಬರಲೆಂದು ರೈತರು ಕಾಯುತ್ತಾರೆ ಎಂದು ಹೇಳಿದ್ದಾರೆ. ಕೃಷ್ಣಾ ನದಿ ನೀರು ಪುಕ್ಕಟೆ ಆಗಿದೆ. ಕರೆಂಟ್ ಪುಕ್ಕಟೆ ಸಿಗುತ್ತಿದೆ. ಬಹಳಷ್ಟ ಮುಖ್ಯಮಂತ್ರಿಗಳು ಬೆಳೆ ಬೆಳೆಯಲು ಬೀಜನೂ ಕೊಟ್ಟರು, ಗೊಬ್ಬರನೂ ಕೊಟ್ಟರು. ಇನ್ನೂ ರೈತರಿಗೆ ಒಂದು ಆಸೆ ಇದೆ, ಮೇಲೆ ಮೇಲೆ ಬರಗಾಲ ಬರಲಿ ಎಂಬುದು. ಕಾರಣ ಸಾಲ ಮನ್ನಾ ಆಗುತ್ತೆ ಎಂದು. ಈ ರೀತಿಯಾಗಿ ಬಯಸಬಾರದು ಎಂದು ಹೇಳಿದ್ದರು. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬಿಜೆಪಿ ನಾಯಕರು ಸಚಿವರ ವಿರುದ್ಧ ತೀವ್ರವಾಗಿ ಕಿಡಿಕಾರುತ್ತಿದ್ದಾರೆ.