ಹಾಸನ (Hassan)- ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯೋಧರೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.
ದಾಸರಕೊಪ್ಪಲು ಗ್ರಾಮದ ಯೋಧ ಸಂಜಯ್ (22) ಚಿಕಿತ್ಸೆಗೆ ಸ್ಪಂದಿಸದೆ ಬುಧವಾರ ಮೃತಪಟ್ಟಿದ್ದಾರೆ. ಕಾಶ್ಮೀರದಲ್ಲಿ ರಾಷ್ಟ್ರೀಯ ರೈಫಲ್ಸ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂಜಯ್, ರಜೆಯ ಮೇಲೆ ತವರಿಗೆ ಬಂದಿದ್ದರು.
ಮೂರು ದಿನಗಳ ಹಿಂದೆ ಹಾಸನದ ಎಂ.ಜಿ.ರಸ್ತೆಯಲ್ಲಿ ಬೈಕ್‍ನಲ್ಲಿ ಹೋಗುತ್ತಿದ್ದಾಗ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಬೆಂಗಳೂರಿನ ಕಮಾಂಡೊ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ದೇಶ ಸೇವೆ ಮಾಡಬೇಕು ಎಂಬ ಮಹಾದಾಸೆಯಿಂದ ಭಾರತೀಯ ಸೇನೆ ಸೇರಿದ್ದ ಸಂಜಯ್, ಇತ್ತೀಚೆಗಷ್ಟೇ ಬಡ್ತಿ ಪಡೆದಿದ್ದರು. ಮೃತ ಯೋಧನ ಪಾರ್ಥಿವ ಶರೀರ ನಗರಕ್ಕೆ ಬರುತ್ತಿದ್ದಂತೆಯೇ ನೂರಾರು ಮಂದಿ ಯೋಧನ ಅಂತಿಮ ದರ್ಶನ ಪಡೆದರು. ಸಂಜೆ ಸ್ವಗ್ರಾಮ ಹೊನ್ನೆನಹಳ್ಳಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಿತು.














