ಬೆಂಗಳೂರು : ಬಿಎಂಟಿಸಿಯು ತನ್ನ ಚಾಲಕ ಮತ್ತು ನಿರ್ವಾಹಕರಿಗೆ ಸಿಹಿಸುದ್ದಿ ನೀಡಿದ್ದು, ಬಿಎಂಟಿಸಿಯ ಚಾಲಕರ ಮತ್ತು ನಿರ್ವಾಹಕರ ಕೇಸ್ ಗಳು ಖುಲಾಸೆ ಮಾಡಲಾಗಿದೆ. ಈ ಕುರಿತು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಜಿ. ಸತ್ಯವತಿ ಆದೇಶ ಹೊರಡಿಸಿದ್ದು, ಇದು ಇಂದಿನಿಂದಲೇ ಜಾರಿಯಾಗಲಿದೆ. 6960 ನೌಕರರ ಮೇಲಿನ ಕೇಸ್ ಖುಲಾಸೆ ಮಾಡಲಾಗಿದೆ.
ಡಿಸ್ಮಿಸ್, ಸಸ್ಪೆಂಡ್, ಐದು ಸಾವಿರ ರುಪಾಯಿ ದಂಡ ಕಟ್ಟಬೇಕಿದ್ದ, ಇನ್ಕ್ರಿಮೆಂಟ್ ಕಟ್ ಆಗುವ ಭಯದಲ್ಲಿದ್ದ 6960 ನೌಕರರಿಗೆ ಈ ಮೂಲಕ ಸಿಹಿಸುದ್ದಿ ಸಿಕ್ಕಿದೆ. ಚಾಲನೆ ವೇಳೆ ಮೊಬೈಲ್ ಬಳಕೆ, ಟಿಕೆಟ್ ಸರಿಯಾಗಿ ನೀಡದಿರುವುದು, ಗೈರು ಹಾಜರಿ, ಸಂಚಾರಿ ನಿಯಮ ಉಲ್ಲಂಘನೆ, ಬಸ್ಗಳನ್ನು ಎಲ್ಲಂದರಲ್ಲಿ ನಿಲ್ಲಿಸುವುದು, ಡೋರ್ ಹಾಕದೆ ಬಸ್ ಚಾಲನೆ ಮಾಡಿದ್ದು, ಯೂನಿಫಾರಂ ಹಾಕದೆ ಡ್ಯೂಟಿ ಮಾಡಿರುವುದು ಇಂತಹ ಎಲ್ಲಾ ತಪ್ಪುಗಳಿಂದ ಶಿಕ್ಷೆಗೆ ಒಳಗಾಗಿದ್ದ ಚಾಲಕರ ಮತ್ತು ನಿರ್ವಾಹಕರ ಪ್ರಕರಣಗಳನ್ನು ಬಿಎಂಟಿಸಿ ವಜಾ ಮಾಡಿದೆ.