ಮನೆ ಅಪರಾಧ ಹೊಳಲ್ಕೆರೆ ಬಿಜೆಪಿ ಶಾಸಕ ಚಂದ್ರಪ್ಪ ಪತ್ನಿ, ಪುತ್ರರ ವಿರುದ್ಧ ಎಫ್ಐಆರ್

ಹೊಳಲ್ಕೆರೆ ಬಿಜೆಪಿ ಶಾಸಕ ಚಂದ್ರಪ್ಪ ಪತ್ನಿ, ಪುತ್ರರ ವಿರುದ್ಧ ಎಫ್ಐಆರ್

0

ಚಿತ್ರದುರ್ಗ(Chitrdurga): ಮೃತ ವ್ಯಕ್ತಿಗೆ‌ ಸೇರಿದ ಆಸ್ತಿ ಲಪಟಾಯಿಸಿದ ಆರೋಪದ ಹಿನ್ನೆಲೆಯಲ್ಲಿ ಹೊಳಲ್ಕೆರೆ ಬಿಜೆಪಿ  ಶಾಸಕ ಎಂ.ಚಂದ್ರಪ್ಪ ಪತ್ನಿ ಚಂದ್ರಕಲಾ, ಪುತ್ರರಾದ ರಘುಚಂದನ್, ದೀಪ್ ಚಂದನ್ ವಿರುದ್ಧ ಕೇಸ್ ದಾಖಲಿಸಲಾಗಿದೆ.

ಶ್ರೀಧರ್ ಎಂಬುವರಿಗೆ ಸೇರಿ‌‌‌ದ ನಿವೇಶನಗಳನ್ನ ಕಬಳಿಸಿದ್ದಾರೆ ಎಂಬ ಆರೋಪದಲ್ಲಿ ಶಾಸಕ ಎಂ.ಚಂದ್ರಪ್ಪ ಅವರ ಪತ್ನಿ ಚಂದ್ರಕಲಾ, ಪುತ್ರರಾದ ಎಂ.ಸಿ.ರಘುಚಂದನ್, ಎಂ.ಸಿ. ದೀಪ್ ಚಂದನ್, ಉದ್ಯಮಿ ಕೆ.ನಾಗರಾಜ್‌, ಉಪನೋಂದಣಾಧಿಕಾರಿ ನಾಗರತ್ನಮ್ಮ ಸೇರಿ ಇತರರ ವಿರುದ್ಧ ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಖಾಸಗಿ ದೂರಿನ ವಿಚಾರಣೆ ನಡೆಸಿದ ಹೊಳಲ್ಕೆರೆಯ ಹಿರಿಯ ಸಿವಿಲ್‌ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ಸೂಚನೆಯ ಮೇರೆಗೆ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.

ಹೊಳಲ್ಕೆರೆಯ ಎಂ.ಜಿ.ಶ್ರೀಧರ್‌ ಎಂಬುವರು ಉದ್ಯಮಿ ಕೆ.ನಾಗರಾಜ್‌ ಅವರಿಗೆ ವ್ಯವಹಾರದ ಉದ್ದೇಶದಿಂದ ಜನರಲ್‌ ಪವರ್‌ ಆಫ್‌ ಅಟಾರ್ನಿ (ಜಿಪಿಎ) ಅಧಿಕಾರವನ್ನು 2016ರಲ್ಲಿ ನೀಡಿದ್ದರು. ಈ ನಡುವೆ ಶ್ರೀಧರ್‌ ಸಹೋದರಿ ಲತಾ ಸುಂದರ್‌ ಎಂಬುವರು ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಕೇಳಿ ನ್ಯಾಯಾಲಯದ ಮೊರೆ ಹೋಗಿದ್ದರು. ಪ್ರಕರಣ ನ್ಯಾಯಾಲಯದಲ್ಲಿ ಇತ್ಯರ್ಥವಾಗುವ ಮೊದಲೇ ಶ್ರೀಧರ್‌ ಅನಾರೋಗ್ಯದಿಂದ ಮೃತಪಟ್ಟಿದ್ದರು.

ಈ ಸಂದರ್ಭವನ್ನು ದುರುಪಯೋಗ ಮಾಡಿಕೊಂಡ ನಾಗರಾಜ್‌, ಶಾಸಕರ ಕುಟುಂಬದ ಸದಸ್ಯರ ಹೆಸರಿಗೆ ಆಸ್ತಿ ಕ್ರಯಪತ್ರ ಮಾಡಿಕೊಟ್ಟಿದ್ದಾರೆ. ಹೊಳಲ್ಕೆರೆ ಉಪನೋಂದಣಾಧಿಕಾರಿ ನಾಗರತ್ನ ಅವರೂ ಇದರಲ್ಲಿ ಶಾಮೀಲಾಗಿದ್ದಾರೆ ಎಂಬುದು ಶ್ರೀಧರ್‌ ಅವರ ಮತ್ತೊಬ್ಬ ಸಹೋದರಿ ಎ.ಜಿ.ಪದ್ಮಜಾ ಅವರಿಗೆ ಗೊತ್ತಾಗಿದೆ. ವಂಚಿಸಿ ಆಸ್ತಿ ಕಬಳಿಕೆಗೆ ಪ್ರಯತ್ನಿಸಿದವರ ವಿರುದ್ಧ ಪ್ರಕರಣ ದಾಖಲಿಸುವಂತೆ ಕೋರಿ ಪದ್ಮಜಾ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು.

ಕೋರ್ಟ್ ಮೂಲಕ ಠಾಣೆಗೆ ಸೂಚನೆ ಬಂದ ಹಿನ್ನೆಲೆಯಲ್ಲಿ ಏ. 30 ರಂದು ಕಲಂ 404, 405, 415, 420, 423, 463, 464, 466, 468, 470, ರೆ/ವಿ 149 ಅಡಿಯಲ್ಲಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.