ಬೆಂಗಳೂರು: ನಂಜನಗೂಡಿನ ಶ್ರೀ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದಲ್ಲಿ ರೂಢಿ ಸಂಪ್ರದಾಯದಂತೆ `ಅಂಧಕಾಸುರನ ಸಂಹಾರ’ ಧಾರ್ಮಿಕ ಕಾರ್ಯಕ್ರಮ ನಡೆಯುವಾಗ ಕೆಲವು ದುಷ್ಕರ್ಮಿಗಳು ಉತ್ಸವ ಮೂರ್ತಿಯ ಮೇಲೆ ಎಂಜಲು ನೀರನ್ನು ಎರಚಿ, ಭಕ್ತರ ಧಾರ್ಮಿಕ ಭಾವನೆಗೆ ನೋವುಂಟು ಮಾಡಿದ್ದು, ಆರೋಪಿಗಳ ಬಂಧಿಸುವಂತೆ ಆಗ್ರಹಿಸಿ ಗುರುವಾರ ನಂಜನಗೂಡುವಿನಲ್ಲಿ ನಡೆಸಲಾಗುತ್ತಿದ್ದು, ಬಂದ್’ಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.
ಮೆಡಿಕಲ್ ಅಂಗಡಿಗಳ ಹೊರತುಪಡಿಸಿ ಎಲ್ಲಾ ವ್ಯಾಪಾರಗಳನ್ನು ಬಂದ್ ಮಾಡಿ, ಬಂದ್’ಗೆ ಜನರು ಉತ್ತಮ ರೀತಿಯಲ್ಲಿ ಬೆಂಬಲ ವ್ಯಕ್ತಪಡಿಸಿದ್ದಾರೆ.
ಬಂದ್ ಹಿನ್ನೆಲೆಯಲ್ಲಿ ದೇವಸ್ಥಾನದ ಸುತ್ತಮುತ್ತಲಿನ ಬೀದಿಗಳಲ್ಲಿ ವ್ಯಾಪಾರ ವಹಿವಾಟು ಆರಂಭವಾಗಿಲ್ಲ. ಬಂದ್‌ಗೆ ಬೆಂಬಲ ಕೊಡುವಂತೆ ನಂಜನಗೂಡಿನಲ್ಲಿ ನಂಜುಂಡೇಶ್ವರನ ಭಕ್ತರು ಕರ ಪತ್ರ ಹಂಚುತ್ತಿದ್ದಾರೆ.
ನಂಜನಗೂಡು ಬಂದ್‌ಗೆ ಅನುಮತಿ ನೀಡಿಲ್ಲ ಎಂದು ತಹಶೀಲ್ದಾರ್ ಶಿವಪ್ರಸಾದ್ ಅವರು ಹೇಳಿದ್ದಾರೆ. ಬಂದ್ ಮಾಡುತ್ತಿರುವ ಬಗ್ಗೆ ಯಾವುದೇ ಮನವಿ ನಮಗೆ ಬಂದಿಲ್ಲ ಹಾಗೂ ನಾವು ಯಾರಿಗೂ ಕೂಡ ಅನುಮತಿಯನ್ನು ಕೂಡ ನೀಡಿಲ್ಲ ಎಂದು ಹೇಳಿದ್ದಾರೆ.
ಇದಕ್ಕೂ ಮುನ್ನ ನಂಜನಗೂಡು ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಶಾಸಕ ದರ್ಶನ್ ಧ್ರುವನಾರಾಯಣ್ ಅವರು ಕೂಡ ಮಧ್ಯಾಹ್ನ ದೇವಸ್ಥಾನದ ಭಕ್ತರು, ವರ್ತಕರು ಹಾಗೂ ವಿವಿಧ ಸಂಘಟನೆಯ ಮುಖಂಡರೊಂದಿಗೆ ನಿನ್ನೆ ಶಾಂತಿ ಸಭೆ ನಡೆಸಿದರು.
ಬಂದ್ ಕರೆ ನೀಡಿರುವುದರಿಂದ ಜನರಿಗೆ ತೊಂದರೆ ಆಗಲಿದ್ದು, ಬಂದ್ ನಡೆಸದಂತೆ ಶಾಸಕರು ಮನವಿ ಮಾಡಿದರು. ಆದರೇ ದೇವಸ್ಥಾನದ ಭಕ್ತರು ಆರೋಪಿಗಳನ್ನು ಬಂಧಿಸಿ, ಇಲ್ಲವೆಂದರೆ ಬಂದ್ ನಡೆಸುತ್ತೇವೆ ಎಂದು ಪಟ್ಟು ಹಿಡಿದರು. ಹೀಗಾಗಿ ಶಾಂತಿ ಸಭೆ ವಿಫಲಗೊಂಡಿತ್ತು.
ನಂಜನಗೂಡು ಅಂಧಕಾಸುರ ಆಚರಣೆಗೆ ಅಡ್ಡಿಪಡಿಸಿದ ವಿಚಾರದ ಕುರಿತು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ್ ಅವರು, ಬಾಲರಾಜು, ನಾರಾಯಣ, ನಾಗಭೂಷಣ್, ನಟೇಶ್ ಹಾಗೂ ಅಭಿ ಈ ಐವರ ಮೇಲೆ ನಂಜನಗೂಡು ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದರು.